ಶಿಕಾರಿಪುರ: ರಾತ್ರಿವೇಳೆಯಲ್ಲೇ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ತೆರವಿಗೊಳಿಸಿದ ಕ್ರಮವನ್ನು ಹಾಲುಮತ ಮಹಾಸಭಾ ತೀವ್ರವಾಗಿ ಖಂಡಿಸಿ, ಕೂಡಲೇ ಪುನರ ಪ್ರತಿಷ್ಟಾಪನೆ ನಡೆಸಲು ಹೋರಾಟ ನಡೆಸಿದೆ. ರಾಜ್ಯ ಮತ್ತು ಜಿಲ್ಲಾ ಹಾಲುಮತ ಮಹಾಸಭಾ ಘಟಕಗಳು ತೀವ್ರವಾಗಿ ಘಟನೆಯನ್ನು ಖಂಡಿಸಿವೆ.
ಆಗಸ್ಟ್ ೧೫ರಂದು ರಾಯಣ್ಣನಂತ ಮಹಾವೀರ ಹುಟ್ಟಿದ ದಿನವೂ ಹೌದು, ಸ್ವತಂತ್ರಗೊಂಡ ದೇಶ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ದಿನವೂ ಹೌದು. ರಾಯಣ್ಣನನ್ನು ಜನವರಿಯ ೨೬ ರಂದು ನೇಣಿಗೇರಿಸಲಾಯಿತು. ಆ ದಿನ ಭಾರತ ಗಣರಾಜ್ಯವಾದ ದಿನವಾಗಿದೆ. ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದ ಈ ಮಹಾನ್ ಸ್ವಾತಂತ್ರ್ಯ ಯೋಧನ ಮೂರ್ತಿಯನ್ನು ಶಿಕಾರಿಪುರದಲ್ಲಿ ರಾತ್ರೋರಾತ್ರಿ ತೆರವು ಮಾಡಿರುವುದು ಹೇಡಿಗಳ ಕಾರ್ಯ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಎಇದ ಅಪಮಾನ ಎಂದು ಮಹಾಸಭಾ ಕಿಡಿಕಾರಿದೆ.
ಈ ಪ್ರಕರಣವು ಶಿಕಾರಿಪುರದಲ್ಲಿ ನಡೆದ ಈಸೂರು ದಂಗೆಗೆ ಮಾಡಿದ ಅವಮಾನ ಸಹ ಆಗಿದೆ ಎಂದು ಹೇಳಿದೆ. ಸಿಎಂ. ಬೊಮ್ಮಾಯಿಯವರು ರಾಯಣ್ಣನಿಗೆ ಗೌರವ ಸೂಚಿಸಲು ತಿಳಿಸಿದ್ದಾರೆ, ಆದರೆ ಮಾಜಿ ಮುಖ್ಯಮಂತ್ರಿ ಗಳ ಜಿಲ್ಲೆಯಲ್ಲೇ ರಾಯಣ್ಣನಿಗೆ ಅಗೌರವ ತೋರಿಸಲಾಗಿದೆ ಎಂದು ಹೋರಾಟ ನಡೆಸಿದ್ದಾರೆ.
ಜಿಲ್ಲೆಯ ಸಂಸದರಾದ ಬಿ. ವೈ . ರಾಘವೇಂದ್ರ, ಶಾಸಕರಾದ ಬಿ.ಎಸ್. ಯಡಿಯೂರಪ್ಪ ಹಾಗೂ ತಾಲ್ಲೂಕು ಆಡಳಿತ ಕೂಡಲೆ ಕ್ಷಮೆ ಯಾಚಿಸಿ, ರಾಯಣ್ಣನ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಸ್ಥಾಪನೆ ಮಾಡಬೇಕೆಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಉಪಾಧ್ಯಕ್ಷ ಡಾ. ಡಿ.ಟಿ. ಪ್ರಶಾಂತ್, ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ಗಣೇಶ್ ಬೀಳಗಿ ಆಗ್ರಹಿಸಿದ್ದಾರೆ.

























Discussion about this post