ವಾಷಿಂಗ್ಟನ್: ಕೊರೊನಾ ಸಾಂಕ್ರಾಮಿಕದಿಂದ ಚೇತರಿಸಿಕೊಳ್ಳುತ್ತಿರುವ ಅಮೆರಿಕದಲ್ಲಿ ಈಗ ಜನರ ಓಡಾಟ ಹೆಚ್ಚಿದೆ. ವಾರಾಂತ್ಯದ ಪ್ರವಾಸಕ್ಕೆ ಜನರು ಮುಗಿಬೀಳುತ್ತಿದ್ದಾರೆ. ಆದರೆ, ಸಿಬ್ಬಂದಿ ವರ್ಗದ ಕೊರತೆಯ ಕಾರಣ ಈ ವಾರಾಂತ್ಯದಲ್ಲಿ 800 ವಿಮಾನಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ವಿಮಾನಯಾನ ಸಂಸ್ಥೆಗಳ ಸಿಬ್ಬಂದಿ ವರ್ಗ ಕರ್ತವ್ಯಕ್ಕೆ ಹಾಜರಾಗದಿರುವುದು ಇದಕ್ಕೆ ಕಾರಣ.
ಭಾನುವಾರ ಸಂಚರಿಸಬೇಕಿದ್ದ 400 ವಿಮಾನಗಳು ಸೇರಿ ಅಮೆರಿಕನ್ ಏರ್ಲೈನ್ಸ್ ಈ ವಾರಾಂತ್ಯದಲ್ಲಿ 800 ವಿಮಾನಗಳನ್ನು ರದ್ದು ಮಾಡಿದೆ. ಗುರುವಾರದಿಂದೀಚೆಗೆ ಬೀಸುತ್ತಿರುವ ಬೀರುಗಾಳಿಯಿಂದಾಗಿ ಸಿಬ್ಬಂದಿ ವರ್ಗದವರು ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಫ್ಲಾರಿಡಾ, ಡಲ್ಲಾಸ್ನಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ಹೀಗಾಗಿ ಅನಿವಾರ್ಯ ಕಾರಣ ವಿಮಾನ ಸಂಚಾರ ರದ್ದು ಮಾಡಬೇಕಿದೆ. ಲಭ್ಯವಿರುವ ಸಿಬ್ಬಂದಿಯನ್ನೆ ಬಳಸಿಕೊಂಡು ಎಷ್ಟು ಸಾಧ್ಯವೋ ಅಷ್ಟು ವಿಮಾನಗಳು ಸಂಚಾರವನ್ನು ನಡೆಸಲಾಗುತ್ತಿದೆ. ಸೋಮವಾರದಿಂದ ಆರಂಭವಾಗುವ ಹೊಸ ತಿಂಗಳಲ್ಲಿ ಈ ಸಮಸ್ಯೆ ಪರಿಹಾರ ಆಗಬಹುದು ಎಂಬ ನಿರೀಕ್ಷೆ ಇದೆ ಎಂದು ಅಮೆರಿಕನ್ ಏರ್ಲೈನ್ಸ್ನ ಸಿಇಒ ಡೇವಿಡ್ ಸೆಮೌರ್ ತಿಳಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿ ರಜೆಯಲ್ಲಿದ್ದ 1,800 ಸಿಬ್ಬಂದಿ ಈಗ ಕರ್ತವ್ಯಕ್ಕೆ ಮರಳಿದ್ದಾರೆ. ಇದರ ಜೊತೆಗೆ 600 ಮಂದಿ ಹೊಸಬರನ್ನು ಈ ಡಿಸೆಂಬರ್ ವೇಳೆಗೆ ನೇಮಿಸಿಕೊಳ್ಳಲಾಗುತ್ತದೆ. ಗ್ರೌಂಡ್ ಲೆವಲ್ನಲ್ಲಿ (ವಿಮಾನ ನಿಲ್ದಾಣಗಳಲ್ಲಿ) ನಾಲ್ಕು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಮೆರಿಕನ್ ಏರ್ಲೈನ್ಸ್ ನಿತ್ಯ 6,700 ವಿಮಾನಗಳ ಹಾರಾಟ ನಡೆಸುತ್ತದೆ. ಇವು 50 ದೇಶಗಳ 350 ಸ್ಥಳಗಳಿಗೆ ಪಯಣಿಸುತ್ತದೆ. ಈಗ 800 ವಿಮಾನಗಳು ರದ್ದುಗೊಂಡಿರುವುದರಿಂದ ಮರುಬುಕ್ಕಿಂಗ್ನಲ್ಲಿ ಸೀಟು ಸಿಗದೆ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಕೊರೊನಾ ಪ್ರಕರಣ ಕಡಿಮೆ ಆಗುತ್ತಿದ್ದಂತೆ ಜನರ ಓಡಾಟ ಹೆಚ್ಚುತ್ತಿದೆ. ಹೀಗಾಗಿ ಅನೇಕ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ವಿಮಾನ ಸೇವೆಯನ್ನು ಒದಗಿಸಲು ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿವೆ. ಕಳೆದ ವಾರ ಸೌತ್ವೆಸ್ಟ್ ಏರ್ಲೈನ್ಸ್ ಎರಡು ಸಾವಿರ ವಿಮಾನಗಳ ಸಂಚಾರವನ್ನು ರದ್ದು ಮಾಡಿತ್ತು. ಇದರಿಂದ ಕಂಪನಿಗೆ 75 ಮಿಲಿಯನ್ ಡಾಲರ್ ನಷ್ಟವಾಗಿದೆ.
American Airlines not Flyed due to Staff Shortage
ಇದನ್ನೂ ಓದಿ: Air traffic ban: ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿಷೇಧ ನ. 30ರವರೆಗೂ ವಿಸ್ತರಣೆ.
Discussion about this post