ಲಖನೌ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಎಸ್‌ಯುವಿ ವಾಹನ ಹರಿಸಿದ ಪ್ರಕರಣದ ಸಂಬಂಧ ಮತ್ತೆ ನಾಲ್ವರನ್ನು ಬಂಧಿಸಲಾಗಿದೆ. ಬಿಜೆಪಿ ಸ್ಥಳೀಯ ಮುಖಂಡ ಸುಮಿತ್ ಜೈಸ್ವಾಲ್, ಶಿಶುಪಾಲ್, ನಂದನ್ ಸಿಂಗ್ ಬಿಶ್ತ್ ಮತ್ತು ಸತ್ಯಪ್ರಕಾಶ್ ತ್ರಿಪಾಠಿ ಬಂಧಿತರು. ಇವರಿಂದ ಪರವಾನಗಿ ಹೊಂದಿದ್ದ ರಿವಾಲ್ವರ್, ಮೂರು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಸೇರಿ ಬಂಧಿತರ ಸಂಖ್ಯೆ 10ಕ್ಕೆ ಏರಿದೆ.
ರೈತರ ಮೇಲೆ ಹರಿದ ಎಸ್ಯುವಿಯಲ್ಲಿದ್ದ ಬಿಜೆಪಿ ಸ್ಥಳೀಯ ಮುಖಂಡ ಸುಮಿತ್ ಜೈಸ್ವಾಲ್, ಘಟನೆ ಬಳಿಕ ಸ್ಥಳದಿಂದ ಪರಾರಿಯಾದ ದೃಶ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಇದೆ. ಹೀಗಾಗಿ ಈತನನ್ನು ಬಂಧಿಸಲಾಗಿದೆ ಎಂದು ಲಖಿಂಪುರ ಖೇರಿ ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತಮ್ಮ ತವರು ಜಿಲ್ಲೆಯಾದ ಲಖಿಂಪುರ ಖೇರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಜತೆ ಅಕ್ಟೋಬರ್ 3ರಂದು ಹೋಗುತ್ತಿದ್ದಾಗ ಪ್ರತಿಭಟನಾನಿರತ ರೈತರ ಮೇಲೆ ಅವರ ಕಾರಿನ ಹಿಂದೆ ಬರುತ್ತಿದ್ದ ಎಸ್ಯುವಿ ವಾಹನ ಹರಿದು ನಾಲ್ವರು ರೈತರು ಮೃತಪಟ್ಟರು. ಈ ವಾಹನವನ್ನು ಅಜಯ್ ಅವರ ಮಗ ಆಶಿಶ್ ಚಾಲನೆ ಮಾಡುತ್ತಿದ್ದರು ಎಂದು ರೈತರು ಆರೋಪಿಸಿದ್ದಾರೆ. ತದನಂತರ ಭುಗಿಲೆದ್ದ ಹಿಂಸಾಚಾರದಲ್ಲಿ ಕಾರಿನ ಚಾಲಕ, ಬಿಜೆಪಿಯ ಇಬ್ಬರು ಕಾರ್ಯಕರ್ತರು ಮತ್ತು ಓರ್ವ ಪ್ರತಕರ್ತರು ಸಾವನ್ನಪ್ಪಿದ್ದರು.
ಪ್ರತಿಭಟನೆ ನಡೆಸುತ್ತಿದ್ದವರು ಕಲ್ಲುತೂರಾಟ ನಡೆಸಿದರು. ಇದರಿಂದ ಎಸ್ಯುವಿ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಯಿತು. ಈ ಸಂದರ್ಭದಲ್ಲಿ ಉದ್ರಿಕ್ತರು ಕಾರಿನ ಚಾಲಕ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ದುರ್ಘಟನೆಗೆ ಕಾರಣವಾದ ಕಾರಿನಲ್ಲಿ ತಾವಾಗಲಿ, ತಮ್ಮ ಪುತ್ರನಾಗಲಿ ಇರಲಿಲ್ಲ ಎಂದು ಸಚಿವ ಅಜಯ್ ಮಿಶ್ರಾ ಘಟನೆ ನಡೆದ ದಿನ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದರು.
Another 4 Arrested in Lakhimpur Kheri Violence Case
ಇದನ್ನೂ ಓದಿ: ಲಖಿಂಪುರ್ ಖೇರಿ ಹಿಂಸಾಚಾರ; ಸ್ಥಿತಿಗತಿ ವರದಿ ಕೇಳಿದ ಸುಪ್ರೀಂ
ಇದನ್ನೂ ಓದಿ: ಲಿಖಿಂಪುರ್: ಆರೋಪಿ ಆಶಿಶ್ ಮಿಶ್ರಾನಿಗೆ 14 ದಿನಗಳ ನ್ಯಾಯಾಂಗ ಬಂಧನ
Discussion about this post