ಆಗಸ್ಟ್ 19ರಂದು ಆಫ್ಗಾನಿಸ್ತಾನದಲ್ಲಿ ಏನಾಯ್ತು ಅಂತ ನಿಮಗೆ ಗೊತ್ತಲ್ಲ. ಅಮೆರಿಕ ಪಡೆ ಕಾಲ್ತೆಗೆಯುತ್ತಿದ್ದಂತೆ ತಾಲಿಬಾನಿಗಳು ಇಡೀ ಆಫ್ಗಾನನ್ನು ಮುತ್ತಿಗೆ ಹಾಕಿದರು. ಅಲ್ಲಿದ್ದವರು ಮುಂದೇನಪ್ಪಾ ಗತಿ ಅಂತ ದೇಶ ಬಿಡಲು ಮುಗಿಬಿದ್ದರು. ಈ ಗಲಿಬಿಲಿಯಲ್ಲಿ ಕಂದಹಾರ್ ವಿಮಾನ ನಿಲ್ದಾಣ ಪೂರ್ತಿ ಜನಜಾತ್ರೆಯಾಗಿತ್ತು. ಇಂಥ ಸಂದರ್ಭದಲ್ಲಿ ದೇಶ ತೊರೆಯಲು ಓಡೋಡಿ ಬಂದಿದ್ದ ಆಫ್ಗನ್ ಪ್ರಜೆಗಳಾದ ಮಿರ್ಜಾ ಅಲಿ ಮತ್ತು ಆತನ ಹೆಂಡತಿ ಸೂರ್ಯ ಹೇಗೋ ಒದ್ದಾಡಿ, ಒಬ್ಬರೊಬ್ಬರು ಹುಡುಕಿಕೊಂಡರು. ತಮ್ಮ ಐದೂ ಮಕ್ಕಳನ್ನು ಗುಡ್ಡೆ ಹಾಕಿ, ವಿಮಾನ ನಿಲ್ದಾಣದ ಉದ್ದನೆಯ ಕಾಂಪೌಂಡ್ ಬಳಿ ಬಂದರು. ಆಗ, ಹೆಂಡತಿ ಸೂರ್ಯಳ ಹೆಗಲ ಮೇಲೆ ಎರಡು ತಿಂಗಳ ಗಂಡುಮಗ ಸೋಹೆಲ್ ಇದ್ದ. ಅಲ್ಲೇ ಇದ್ದ ಅಮೆರಿಕ ಯೋಧ, ನನ್ನಿಂದ ಏನಾದರು ಸಹಾಯ ಆಗಬೇಕಾ ಅಂತ ಕೇಳಿದ.
ಅಷ್ಟರಲ್ಲಿ, ಮಗು ಅಲ್ಲಿದ್ದ ಜನಜಂಗುಳಿಯನ್ನು ನೋಡಿ ಭಯಬೀತನಾಗಿ ಅಳಲು ಶುರುಮಾಡಿತು. ಈ ದಂಪತಿ ನಿಂತಿದ್ದ ಜಾಗದಿಂದ ಕೇವಲ 16 ಅಡಿ ದೂರದಲ್ಲಿ ವಿಮಾನ ನಿಲ್ದಾಣದ ಇನ್ನೊಂದು ಗೇಟ್ ಇತ್ತು. ಹಾಗಾಗಿ, ಇಲ್ಲಿ ಭದ್ರತಾ ಸಿಬ್ಬಂದಿಗೆ ಮಗುವನ್ನು ಕೊಟ್ಟು ಅಲ್ಲಿ ಇಳಿಸಿಕೊಳ್ಳೋಣ ಅಂತ ಸೋಹೆಲ್ನನ್ನು, ಸಹಾಯಬೇಕಾ ಅಂತ ಕೇಳಿದ ಭದ್ರತಾ ಸಿಬ್ಬಂದಿ ಕೈಗೆ ಕೊಟ್ಟರು.
ಅಷ್ಟರಲ್ಲಿ ಏನು ಅನಿಸಿತೋ ಏನೋ, ಮಗುವಿನ ತಂದೆ ಮೀರ್ಜಾ ಅಲಿ ಬಾಯಲ್ಲಿ-ತಾಲಿಬಾನರ ಆಕ್ರಮಣದಿಂದ ಎಷ್ಟೆಲ್ಲಾ ಅವ್ಯವಸ್ಥೆ ಆಗಿದೆ. ಇಲ್ಲಿ ನೆರೆದ ಜನಜಂಗುಳಿಯನ್ನು ದಾಟಿ ನಾವು ಇನ್ನೊಂದು ಗೇಟ್ ತಲುಪುವ ಹೊತ್ತಿಗೆ ಕನಿಷ್ಟ ಅರ್ಧ, ಮುಕ್ಕಾಲು ಗಂಟೆ ಆಗುತ್ತೆ ಅನ್ನೋ ಮಾತು ಬಂತು. ಸರಿ, ಆಗೂ ಹೀಗೂ ವಿಮಾನ ನಿಲ್ದಾಣ ಒಳಗೆ ಬಂದರೆ, ಮೂರು ತಿಂಗಳ ಹಸುಗೂಸು ಸೋಹೆಲ್, ಅವನನ್ನು ಇಸಿದುಕೊಂಡಿದ್ದ ಯೋಧ ಇಬ್ಬರೂ ಕಾಣುತ್ತಿಲ್ಲ.
ಎಲ್ಲಿ ಹುಡುಕುವುದು?
ತಂದೆ ಮಿರ್ಜಾ ಅಲಿ ತಲ್ಲಣಗೊಂಡ. ಹೆಂಡತಿ ಸೂರ್ಯ ಕಣ್ಣು ತುಂಬಿಬಂತು. ಎತ್ತ ನೋಡಿದರೂ ಜನಸಮುದ್ರ. ಇದರಲ್ಲಿ ಮೂರು ತಿಂಗಳ ಮಗೂ ಎಲ್ಲಿ ಅಂಥ ಹುಡುಕುವುದು?
ತಕ್ಷಣ, ಮೀರ್ಜಾ ಹೋಗಿ, ಭದ್ರತಾ ಸಿಬ್ಬಂದಿಗೆ, ಅಲ್ಲಿದ್ದ ಅಧಿಕಾರಿಗಳಿಗೆ ಏನಾದ್ರು ಮಾಡಿ ನನ್ನ ಮಗು ಎಲ್ಲಿದ್ದಾನೆ ಅನ್ನೋದನ್ನು ಹುಡುಕಿಕೊಡಿ ಅಂತ ಅಂಗಲಾಚುತ್ತಾ ಬಂದ. ಅದರಲ್ಲಿ ಒಬ್ಬ ಮಿಲಿಟರಿ ಕಮಾಂಡರ್-ಪುಟ್ಟ ಮಗುವನ್ನು ಇಂಥ ನೂಕುನುಗ್ಗಲಿನಲ್ಲಿ ಸಂರಕ್ಷಿಸುವುದು ಕಷ್ಟ. ಹಾಗಾಗಿ, ಬಹುಶಃ ಅದನ್ನು ವಿಶೇಷ ಜಾಗದಲ್ಲಿ ಇಟ್ಟಿರಬಹುದು ಅಂದ. ಮೀರ್ಜಾ ಕುಟುಂಬ ಅಲ್ಲಿಗೆ ಹೋದರೆ, ಇಡೀ ಪ್ರದೇಶವೇ ಖಾಲಿ ಖಾಲಿ.
ಮೂರು ದಿನದ ನಂತರ ಮೀರ್ಜಾ ಟಿ.ವಿ.ಸಂದರ್ಶನ ಕೊಟ್ಟ. ಒಬ್ಬ ದ್ವಿಭಾಷಿ ಜೊತೆಗೆ ಇಟ್ಟುಕೊಂಡು. ಅದರಲ್ಲಿ, ಮಗುವನ್ನು ಕೊಟ್ಟ ಕಮಾಂಡರ್ ಹೆಸರು ಗೊತ್ತಿಲ್ಲ. ಆದರೆ, ಆತ ಇಂಗ್ಲೀಷ್ ಮಾತನಾಡುತ್ತಿರಲಿಲ್ಲ. ಅಮೆರಿಕ ಎಂಬಿಸಿ ಯಲ್ಲಿದ್ದ ಸಹೋದ್ಯೋಗಿಗಳ ನೆರವಿನಿಂದ ನಮ್ಮ ಮಾತುಗಳನ್ನು ಅರ್ಥೈಸಿಕೊಳ್ಳುತ್ತಿದ್ದ ಅಂಥ ಕ್ಲೂ ಕೊಟ್ಟ.
ಪ್ರಯೋಜನ ಏನೂ ಆಗಲಿಲ್ಲ..
ಇಷ್ಟಾದರೂ ಮೀರ್ಜಾ ಅಲಿ ಸುಮ್ಮನೆ ಕೂರಲಿಲ್ಲ. ಸುಮಾರು 200ಕ್ಕೂ ಹೆಚ್ಚು ಜನರ ಬಳಿ ಮಗು ತಪ್ಪಿಸಿಕೊಂಡಿದ್ದರ ಬಗ್ಗೆ ವಿಚಾರಿಸಿದ. ಪ್ರತಿ ಅಧಿಕಾರಿಗಳು, ಯೋಧರು ಬಂದು ನಿಮ್ಮ ಮಗುವನ್ನು ಹುಡುಕುವ ಎಲ್ಲಾ ಪ್ರಯತ್ನ ಮಾಡ್ತಾ ಇದ್ದೇವೆ. ಆದರೂ ಪ್ರಯೋಜನವಾಗಲಿಲ್ಲ ಅಂತ ಸಮಾಧಾನ ಮಾಡಿದರು.
ಸೋಹೆಲ್ ನೆನಪಲ್ಲೇ ಮೀರ್ಜಾ,ಹೆಂಡತಿ ಸೂರ್ಯ,17, 9,6 ಹಾಗೂ 3 ವರ್ಷದ ಮಕ್ಕಳೊಂದಿಗೆ ಕತ್ತಾರ್ನಿಂದ ವಿಮಾನದಲ್ಲಿ ಜರ್ಮನಿ ನಿರಾಶ್ರಿತರ ಶಿಬಿರಕ್ಕೆ ಸ್ಥಳಾಂತರಗೊಳ್ಳಲು ಹೊರಟರು, ಆದರೆ, ವಿಮಾನ ಅಮೆರಿಕದಲ್ಲಿ ಇಳಿದಿದ್ದರಿಂದ ಟೆಕ್ಸಾಸ್ ನ ಆಫ್ಗಾನ್ ನಿರಾಶ್ರಿತ ಶಿಬಿರದಲ್ಲಿ ತಂಗುವಂತಾಯ್ತು. ಎಲ್ಲ ಸಂಬಂಧಗಳನ್ನೂ ಕಡಿದುಕೊಂಡರು.
ಅಲ್ಲಿ ಆಫ್ಗಾನ್ ನಿರಾಶ್ರಿತರನ್ನು ಬೆಂಬಲಿಸುವ ಗುಂಪೊಂದು ಸೋಹೆಲ್ ಚಿತ್ರ ಹಾಕಿ, ಮಿಸ್ಸಿಂಗ್ ಬೇಬಿ ಅಂತ ಪೋಸ್ಟರ್ ಮಾಡಿ, ಯಾರಾದರೂ ಗುರುತು ಹಿಡಿದು ಮಗುವನ್ನು ಮತ್ತೆ ಹೆತ್ತವರ ಮಡಿಲಿಗೆ ಹಾಕಬಹುದು ಅಂತ ಎಲ್ಲ ಗ್ರೂಪ್ಗಳಿಗೆ ಕಳುಹಿಸಿದ್ದಾರೆ.
ನನಗೆ ಮಗು ಯಾವಾಗ ಕಳೆದು ಹೋಯ್ತು ಅನ್ನೋ ದಿನಾಂಕವೇ ಮರೆತು ಹೋಗುತ್ತಿದೆ ಎನ್ನುವ ತಂದೆ ಮೀರ್ಜಾ ಅಲಿ, ಪ್ರತಿ ಅಧಿಕಾರಿಗಳನ್ನು ಕೇಳಿದಾಗಲೂ ನಿಮ್ಮ ಮಗು ಸಿಗುತ್ತೆ ಅಂತ ಆಶ್ವಾಸನೆ ಕೊಡುತ್ತಾರೆ. ಅದು ಬರೀ ಆಶ್ವಾಸನೆ ಅಷ್ಟೆ ಅನ್ನುತ್ತಾರೆ.
ಅಮೆರಿಕದ ಅಧಿಕಾರಿಗಳು, ಮಿಸ್ಸಿಂಗ್ ಸೋಹೆಲ್ ಪ್ರಕರಣದ ಗಂಭೀರತೆಯನ್ನು ಅರಿತುಕೊಂಡು ನೆರವಿದೆ ನಿಂತರು. ನಾವು ನಮ್ಮ ಎಲ್ಲಾ ಮಿಲಿಟರಿ ತಂಡಗಳಿಗೆ, ವಿದೇಶದಲ್ಲಿರುವ ನಮ್ಮ ಏಜೆನ್ಸಿಗಳಿಗೆ, ಆಫ್ಗನಿಸ್ತಾನದಲ್ಲಿರುವ ನಮ್ಮ ತಂಡಗಳಿಗೆ ಎಲ್ಲ ಕಡೆ ಮಗುವಿನ ಮಾಹಿತಿ ತಲುಪಿಸಿದ್ದೇವೆ. ದುರಾದೃಷ್ಟ ಎಂದರೆ ಆ ಮಗು ಈವರೆಗೂ ಪತ್ತೆಯಾಗಿಲ್ಲ ಎಂದು ಕೈಚೆಲ್ಲಿದ್ದಾರೆ.
ಮೀರ್ಜಾ ಅಲಿ ಹೆಂಡತಿ ಸೂರ್ಯ ಮಗು ನೆನಪಾದಾಗೆಲ್ಲ ಕಣ್ತುಂಬಿ ಅಳುತ್ತಾಳೆ. ಅದನ್ನು ನೋಡಿದ ಇತರೆ ಮಕ್ಕಳು ಭಯಭೀತರಾಗಿ ಒದ್ದಾಡುತ್ತಾರೆ. ಈಗ ನನ್ನ ಕೆಲಸ ಏನೆಂದರೆ ಮಗುವಿನ ಬಗ್ಗೆ ಯೋಚಿಸುವುದು, ಅಳುವುದೇ ಆಗಿದೆ. ನನ್ನ ಅಮ್ಮ, ಅಪ್ಪ, ಅಕ್ಕ ಎಲ್ಲರೂ ದೇವರಿದ್ದಾನೆ, ಮಗು ಸಿಕ್ಕೆ ಸಿಗುತ್ತೇ ಅಂತ ಸಮಾಧಾನ ಮಾಡ್ತಾರೆ. ಆದರೆ, ಸೋಹೆಲ್ ನೆನಪು ಕಣ್ಣೆದುರಿಗೆ ಬಂದಾಗ ಇವರ ಮಾತೆಲ್ಲ ಮರೆತು ಕಣ್ಣಲ್ಲಿ ಧಾರಾಕಾರ ನೀರು ಹರಿಯುತ್ತದೆ ಅದೇ ನನಗೆ ಸಮಾಧಾನ ಕೊಡೋದು ಅಂತ ಮತ್ತೊಮ್ಮೆ ಬಿಕ್ಕುತ್ತಾಳೆ ಸೂರ್ಯ. ಆಗ ಮಕ್ಕಳ ಮುಖದಲ್ಲಿ ಮತ್ತದೇ ಭಯ, ಆತಂಕ. ಇದಕ್ಕಾಗಿ, ಸೂರ್ಯ ಮಗುವನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದಾಳಂತೆ.
ಇದನ್ನೂ ಓದಿ: ಅಫ್ಘಾನಿಸ್ತಾನ ಕಾರ್ಯತಂತ್ರ ವೈಫಲ್ಯ: ಒಪ್ಪಿದ ಅಮೆರಿಕ ಸೇನೆ
Discussion about this post