ಚಂಡೀಗಡ: ಲೂಧಿಯಾನದ ಜಿಲ್ಲಾ ಕೋರ್ಟ್ ಸಂಕೀರ್ಣದಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ಓರ್ವ ಮೃತಪಟ್ಟಿದ್ದಾನೆ. ಮೂವರು ಗಾಯಗೊಂಡಿದ್ದಾರೆ. ಈ ಮೊದಲು ಇಬ್ಬರು ಸಾವನ್ನಪ್ಪಿದ್ದಾರೆಂದು ಹೇಳಲಾಗಿತ್ತು. ನಂತರ ಪೊಲೀಸರು ಓರ್ವ ಸತ್ತಿದ್ದಾನೆಂದು ಖಚಿತ ಪಡಿಸಿದ್ದಾರೆ. ಕಲಾಪ ನಡೆಯುತ್ತಿದ್ದ ವೇಳೆಯಲ್ಲೇ ಈ ಸ್ಫೋಟ ಸಂಭವಿಸಿದ್ದರಿಂದ ಜಿಲ್ಲಾ ನ್ಯಾಯಾಲಯದಲ್ಲಿ ಹೆಚ್ಚಿನ ಜನರು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಾಹ್ನ 12.20ರ ವೇಳಗೆ ಕೋರ್ಟ್ ಸಂಕೀರ್ಣದ ಎರಡನೇ ಮಹಡಿಯ ಶೌಚಾಲಯದಲ್ಲಿ ಬಾಂಬ್ ಸ್ಫೋಟಿಸಿದ್ದರಿಂದ ಅಲ್ಲಿನ ಗೋಡೆಗಳಿಗೆ ಹಾನಿ ಆಗಿದೆ. ಅಕ್ಕಪಕ್ಕದ ರೂಂಗಳ ಕಿಟಕಿ ಗಾಜುಗಳು ಮತ್ತು ಕೆಳಗೆ ನಿಲ್ಲಿಸಿದ್ದ ವಾಹನಗಳ ಗಾಜುಗಳೂ ಒಡೆದಿವೆ.
ಜಿಲ್ಲಾ ನ್ಯಾಯಾಲಯ ಸಂಕೀರ್ಣವು ಲೂಧಿಯಾನದ ಹೃದಯಭಾಗದಲ್ಲಿದ್ದು, ಉಪಪೊಲೀಸ್ ಆಯುಕ್ತರ ಕಚೇರಿಯ ಪಕ್ಕದಲ್ಲೇ ಇದೆ. ಆದರೂ ಇಲ್ಲಿ ಭದ್ರತೆ ಇಲ್ಲ ಎನ್ನಲಾಗಿದೆ. ಬಾಂಬ್ ಅನ್ನು ಕೋರ್ಟ್ ಸಂಕೀರ್ಣಕ್ಕೆ ತಂದಿದ್ದಾದರೂ ಹೇಗೆ ಎಂಬ ಕುರಿತೂ ತನಿಖೆ ನಡೆಯುತ್ತಿದೆ.
ಶೌಚಾಲಯದಲ್ಲಿ ಒಂದು ಶವ ಪತ್ತೆಯಾಗಿದೆ, ಈತನೇ ಸ್ಫೋಟಕವನ್ನು ಇರಿಸಿರಬಹುದು ಅಥವಾ ಸ್ಫೋಟದ ವೇಳೆ ಅದರ ಸಮೀಪದಲ್ಲಿ ಇದ್ದಿರಬಹುದು. ಶವದ ಗುರುತು ಪತ್ತೆಯಾದ ನಂತರವಷ್ಟೆ ಈ ಅನುಮಾನಗಳು ದೂರವಾಗುತ್ತವೆ ಎಂದು ಲೂಧಿಯಾನ ಪೊಲೀಸ್ ಕಮಿಷನರ್ ಗುಪ್ರೀ೯ತ್ ಸಿಂಗ್ ಭುಲ್ಲಾರ್ ಹೇಳಿದ್ದಾರೆ.
ಗಾಯಗೊಂಡಿರುವ ಮೂವರ ಜೀವಕ್ಕೆ ಅಪಾಯವೇನೂ ಇಲ್ಲ. ಕೋರ್ಟ್ ಆವರಣಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ್ದು, ವಿಧಿವಿಜ್ಞಾನ ತಜ್ಞರು ಸಾಕ್ಷ್ಯ ಸಂಗ್ರಹ ಮಾಡುತ್ತಿದ್ದಾರೆ. ದೆಹಲಿಯಿಂದ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ತಂಡ ಲೂಧಿಯಾನಕ್ಕೆ ಹೊರಟಿದೆ ಎಂದು ಭುಲ್ಲಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಮಾಜಘಾತುಕರ ಕೈವಾಡವೆಂದ ಸಿಎಂ ಚನ್ನಿ:
ಲೂಧಿಯಾನ ಕೋರ್ಟ್ನಲ್ಲಿ ಸ್ಫೋಟ ಸಂಭವಿಸಿರುವುದನ್ನು ಖಂಡಿಸಿರುವ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ, ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದ ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. ವಿಧಾನಸಭಾ ಚುನಾವಣೆ ಸಮೀಪಿಸಿರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳುಮಾಡಲು ಸಮಾಜಘಾತುಕ ಶಕ್ತಿಗಳು ವಿಧ್ವಂಸಕ ಕೃತ್ಯ ನಡೆಸುತ್ತಿವೆ ಎಂದು ಹೇಳಿದ್ದಾರೆ.
ಬಾಂಬ್ ಸ್ಫೋಟವನ್ನು ಖಂಡಿಸಿರುವ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಂಜಾಬ್ ಪೊಲೀಸರು ತನಿಖೆ ನಡೆಸಲು ಸಮರ್ಥರಿದ್ದಾರೆ ಎಂದಿದ್ದಾರೆ. ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಟ್ವೀಟ್ ಮಾಡಿ ಆಘಾತ ವ್ಯಕ್ತಪಡಿಸಿದ್ದು ಕಾನೂನು ಸುವ್ಯವಸ್ಥೆಯನ್ನು ಸರ್ಕಾರ ಬಿಗಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
Bomb explosion in Ludhiana court complex one person reported dead
ಇದನ್ನೂ ಓದಿ: Political retirement: ಭ್ರಷ್ಟಾಚಾರ ಆರೋಪ ಸಾಬೀತುಪಡಿಸಿದ್ದಲ್ಲಿ ರಾಜಕೀಯ ನಿವೃತ್ತಿ
ಇದನ್ನೂ ಓದಿ: ಪಂಜಾಬ್ನಲ್ಲಿ ಗುಂಪು ಹಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿ ಮರಣ
Discussion about this post