ಬೀಜಿಂಗ್: ಗುಪ್ತವಾಗಿ ಕಾರ್ಯನಿರ್ವಹಿಸುವ ಅತ್ಯಾಧುನಿಕ ಬೃಹತ್ ಯುದ್ಧನೌಕೆಯೊಂದನ್ನು ನಿರ್ಮಿಸಿ ಪಾಕೀಸ್ತಾನಕ್ಕೆ ಹಸ್ತಾಂತರಿಸಿರುವ ಚೀನಾ ಎರಡೂ ದೇಶಗಳ ನಡುವಿನ ಸೈನ್ಯ ಸಾಮರ್ಥ್ಯವನ್ನು ಹಾಗೂ ಪಾಲುದಾರಿಕೆಯನ್ನು ಹೆಚ್ಚಿಸಿಕೊಳ್ಳುವ ದಾರಿಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ.
ತನ್ನ ಪ್ರಾದೇಶಿಕ ಎದುರಾಳಿ ಭಾರತದ ಮೇಲೆ ದೃಷ್ಟಿ ಇಟ್ಟೇ ಈ ಕಾರ್ಯವನ್ನು ಚೀನಾ ಮಾಡಿದೆಯೆಂಬುದು ರಕ್ಷಣಾ ತಜ್ಞರ ಅಭಿಪ್ರಾಯವಾಗಿದ್ದು ಸೋಮವಾರ ಈ ನೌಕೆಯನ್ನು ಹಸ್ತಾಂತರಿಸಲಾಗಿದೆ.
ಚೀನಾ ಹಾಗೂ ಪಾಕೀಸ್ತಾನಗಳ ನಡುವಿನ ಸಾರ್ವಕಾಲಿಕ ಸಮರತಾಂತ್ರಿಕ ಸಹಕಾರ ಹಾಗೂ ಪಾಲುದಾರಿಕೆಯ ಅಂಗವಾಗಿ ಈ ಅತ್ಯಾಧುನಿಕ ಯುದ್ಧನೌಕೆಯನ್ನು ಹಸ್ತಾಂತರಿಸಲಾಗಿದೆಯೆಂದು ಸ್ಥಳೀಯ ಹಾಗೂ ಪಾಕೀಸ್ತಾನದ ಅಧಿಕಾರಿಗಳನ್ನು ಉಲ್ಲೇಖಿಸಿ ಚೀನಾದ ಸರಕಾರೀ ಮಾಧ್ಯಮಗಳಲ್ಲಿ ವರದಿಯಾಗಿದೆ.
ಪಾಕೀಸ್ತಾನದ ನೌಕಾಪಡೆಗಾಗಿ ತಯಾರಿಸಲಾಗಿರುವ “ಪಿಎನ್ಎಸ್ ತುಘ್ರಿಲ್” ಹೆಸರಿನ ಈ ಯುದ್ಧನೌಕೆಯು ಇದೇ ರೀತಿಯ ನಾಲ್ಕು ಅತ್ಯಾಧುನಿಕ ಯುದ್ಧನೌಕೆಗಳ ಪೈಕಿ ಮೊದಲನೆಯದಾಗಿದ್ದು ಅತ್ಯಂತ ಸುಧಾರಿತ ತಂತ್ರಜ್ಞಾನವನ್ನು ಹೊಂದಿರುವುದಲ್ಲದೇ ಭೂಮಿಯಿಂದ ಭೂಮಿಗೆ, ಭೂಮಿಯಿಂದ ಗಗನಕ್ಕೆ, ಹಾಗೂ ನೀರಿನ ಒಳಗೂ ಪ್ರಯೋಗಿಸಬಲ್ಲ ಸಾಮರ್ಥ್ಯವನ್ನು ಹೊಂದಿರುವುದರ ಜೊತೆಗೆ ವ್ಯಾಪಕ ವಿಚಕ್ಷಣಾ ಸಾಮರ್ಥ್ಯವನ್ನೂ ಹೊಂದಿದೆಯೆಂದು ಸರಕಾರೀ ಸ್ವಾಮ್ಯದ “ಗ್ಲೋಬಲ್ ಟೈಮ್ಸ್” ಪತ್ರಿಕೆ ವರದಿ ಮಾಡಿದೆ.
ಚೈನಾ ಸ್ಟೇಟ್ ಶಿಪ್ಬಿಲ್ಡಿಂಗ್ ಕಾರ್ಪೊರೇಷನ್ ಲಿಮಿಟೆಡ್ (ಸಿಎಸ್ಎಸ್ಸಿ) ಸಂಸ್ಥೆಯಿಂದ ನಿರ್ಮಿತವಾಗಿರುವ ಈ ಬೃಹತ್ ಅತ್ಯಾಧುನಿಕ ಯುದ್ಧನೌಕೆಯನ್ನು ಚೀನಾದ ಶಾಂಘೈನಲ್ಲಿ ಸೋಮವಾರ ನಡೆದ ಸಮಾರಂಭವೊಂದರಲ್ಲಿ ಚೀನಾ ಪಾಕೀಸ್ತಾನದ ನೌಕಾಪಡೆಗೆ ಹಸ್ತಾಂತರಿಸಿತೆಂದೂ ಪತ್ರಿಕೆ ವರದಿ ಮಾಡಿದೆ.
ಚೀನಾದಿಂದ ನಿರ್ಮಿಸಲಾಗಿರುವ ಈ ಹಿಂದಿನ ಯುದ್ಧನೌಕೆಗಳಿಗೆ ಹೋಲಿಸಿದರೆ ಈ ನೌಕೆಯು ಉತ್ತಮ ವಾಯು ರಕ್ಷಣೆಯನ್ನು ಹೊಂದಿರುವುದಲ್ಲದೇ ಅಭಿವೃದ್ಧಿಪಡಿಸಲಾದ ರೇಡಾರ್ ವ್ಯವಸ್ಥೆ ಹಾಗೂ ದೂರಗಾಮೀ ಕ್ಷಿಪಣಿಗಳ ದೊಡ್ಡ ಶ್ರೇಣಿಯನ್ನೇ ಹೊಂದಿರುವುದಾಗಿ ಪಿಎಲ್ಎ ರಿಸರ್ಚ್ ಅಕ್ಯಾಡೆಮಿಯ ಹಿರಿಯ ಸಂಶೋಧಕ ಝಾಂಗ್ ಜುನ್ಷೆ “ಗ್ಲೋಬಲ್ ಟೈಮ್ಸ್”ಗೆ ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ತಿಳಿಸಿದ್ದರೆಂದೂ ವರದಿಯಾಗಿದೆ.
ಈ ಹಸ್ತಾಂತರದಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚೀನಾ ಒಂದು ಪ್ರತಿಷ್ಠಿತ ಸ್ಥಾನವನ್ನು ಸಂಪಾದಿಸಿದಂತಾಗಿದ್ದು ಯದ್ಧಸಾಮಗ್ರಿಗಳನ್ನು ಸರಬರಾಜು ಮಾಡುವ ಇತರ ರಾಷ್ಟ್ರಗಳಿಗೆ ಪೈಪೋಟಿ ನೀಡುವಂತಾಗಿದೆ.
China builds a big and advanced stealth warship and hands it over to Pakistan
ಇದನ್ನೂ ಓದಿ: ವಿಷಯುಕ್ತ ಕೆಮಿಕಲ್ಸ್ ಹೊಂದಿರುವ ಚೀನಾ ಆಟಿಕೆಗಳು ಅಮೆರಿಕದಲ್ಲಿ ಮುಟ್ಟುಗೋಲು
ಇದನ್ನೂ ಓದಿ: ತೈವಾನ್ ಗಡಿಯಲ್ಲಿ ಭೋರ್ಗರೆದ ಯುದ್ಧ ವಿಮಾನಗಳು: ದ್ವೀಪ ರಾಷ್ಟ್ರದ ಮೇಲೆ ಹೆಚ್ಚುತ್ತಿದೆ ಚೀನಾ ದಬ್ಬಾಳಿಕೆ
Discussion about this post