ಬೆಂಗಳೂರು: ಎರಡು ಅಲೆಗಳಲ್ಲಿ ನಮ್ಮನ್ನು ಕಾಡಿ ಕಂಗಾಲು ಮಾಡಿರುವ ಕೊರೋನಾ ಸಮಸ್ಯೆಯಿಂದ ನಿಧಾನವಾಗಿ ಹೊರಬರುತ್ತಿದ್ದೇವೆಂಬ ನೆಮ್ಮದಿ ಮನದಲ್ಲಿ ನೆಲೆಸುತ್ತಿರುವ ಈ ಸಮಯದಲ್ಲಿ ಅದನ್ನು ಬುಡಮೇಲು ಮಾಡುವ ಸುದ್ದಿ ಬಂದಿದೆ. ಕೋರೊನಾ ಮಹಾಮಾರಿಯ ರೂಪಾಂತರಿ ತಳಿ B.1.1.529 ದಕ್ಷಿಣ ಆಫ್ರಿಕಾದಲ್ಲಿ ತನ್ನ ಕಬಂಧ ಬಾಹುವನ್ನು ಹರಡಲು ಪ್ರಾರಂಭಿಸಿದೆ. ಗಾಬರಿಗೊಳಿಸುವ ವಿಷಯವೆಂದರೆ ಇದು ಲಸಿಕೆ ಪಡೆದವರಿಗೂ ಹರಡುವ ಸಾಧ್ಯತೆ ಹೆಚ್ಚಿದ್ದು ಇದು ಹರಡುವ ವೇಗವೂ ಹೆಚ್ಚಾಗಿರುವುದು. ಕೊಲಂಬಿಯಾ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿಶಾಸ್ತ್ರ ಹಾಗೂ ರೋಗನಿರೋಧಕಶಾಸ್ತ್ರದ ಪ್ರಾಧ್ಯಾಪಕ ಡಾ. ಡೇವಿಡ್ ಹೋರ ಪ್ರಕಾರ ಕೊರೋನಾದ ಈ ಒಮಿಕ್ರಾನ್ ರೂಪಾಂತರಗಳು ಕೋವಿಡ್19ರ ಲಸಿಕೆ/ಔಷಧಗಳನ್ನು ಪ್ರಭಾವಹೀನವಾಗಿ ಮಾಡಬಲ್ಲವು.
ಕೊರೋನಾದ ಒಮಿಕ್ರಾನ್ ರೂಪಾಂತರಿಯನ್ನು ಪ್ರಪ್ರಥಮವಾಗಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಹಚ್ಚಲಾಗಿದ್ದು ಯೂರೋಪ್ ಹಾಗೂ ಏಷ್ಯಾಗಳಲ್ಲೂ ಇದು ಪತ್ತೆಯಾಗಿದೆ ಹಾಗೂ ವಿಶ್ವಾದ್ಯಂತ ಚಿಂತೆಗೆ ಕಾರಣವಾಗಿದೆ. ಈ ರೂಪಾಂತರಿಗಳ ಸಂಖ್ಯೆಯೂ ಹೆಚ್ಚಾಗಿರುವುದು ಇದು ಹರಡುವ ವೇಗವನ್ನು ತೀವ್ರಗೊಳಿಸಿದೆ. ವಿಶ್ವ ಆರೋಗ್ಯ ಸಂಸ್ಥಯು ಕಳೆದ ಶುಕ್ರವಾರ ಇದನ್ನು ಒಮಿಕ್ರಾನ್ ಅಥವಾ B.1.1.529 ರೂಪಾಂತರಿಯನ್ನು “SARS-CoV-2” ಎಂದು ಹೆಸರಿಸಿದ್ದು ಕೊರೋನಾದ ಇತರ ರೂಪಾಂತರಿಗಳಿಗಿಂತ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದೆ.
ಈಗಲೂ ವಿಶ್ವದಲ್ಲಿ ಕೊರೋನಾದ ಡೆಲ್ಟಾ ರೂಪಾಂತರವೇ ಅತಿ ಹೆಚ್ಚು ಪ್ರಭಾವಶಾಲಿಯಾಗಿದ್ದು ಅಮೆರಿಕಾದಲ್ಲಿ ಶೇಕಡಾ 99.9ರಷ್ಟು ಇದ್ದರೂ ಒಮಿಕ್ರಾನ್ ಇದನ್ನು ಸ್ಥಳಾಂತರಗೊಳಿಸಬಹುದೇ ಎನ್ನುವುದನ್ನು ಖಚಿತವಾಗಿ ಹೇಳಲಾಗದು ಎಂದು ಪಿಟ್ಸ್‌ಬರ್ಗ್ ವೈದ್ಯಕೀಯ ಕೇಂದ್ರ ವಿಶ್ವವಿದ್ಯಾಲಯದ ಸೋಂಕು ನಿವಾರಣಾ ಹಾಗೂ ಸಾಂಕ್ರಾಮಿಕ ರೋಗಗಳ ವಿಭಾಗದ ವೈದ್ಯಕೀಯ ನಿರ್ದೇಶಕ ಡಾ. ಗ್ರಹಾಮ್ ಸ್ನೈಡರ್ ತಿಳಿಸಿದ್ದಾರೆ.
ಈ ಹೊಸ ರೂಪಾಂತರಿಯಿಂದ ಉಂಟಾಗಬಹುದಾದ ರೋಗ ಲಕ್ಷಣಗಳನ್ನು ನಿರ್ಧರಿಸಲು ಹಾಗೂ ಇದು ಎಷ್ಟು ವೇಗವಾಗಿ ಹರಡಬಲ್ಲುದು ಎಂದು ನಿರ್ಧರಿಸಲು ವೈದ್ಯಕೀಯ ವಿಜ್ಞಾನಿಗಳು ಇನ್ನೂ ಕೆಲವು ವಾರಗಳ ಅವಧಿ ಬೇಕಾಗಬಹುದೆಂದು ಭಾವಿಸಲಾಗಿದೆ.
ಕೆಲವು ದೇಶಗಳು ಈಗಾಗಲೇ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು ದಕ್ಷಿಣ ಆಪ್ರಿಕಾದಿಂದ ಬರುವವರಿಗೆ ನಿರ್ಬಂಧ ಹೇರಿವೆ. ಭಾರತವೂ ಈ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಡಲು ಪ್ರಾರಂಭಿಸಿದ್ದು ಇಂದು (ನ.28) ಬೆಳಿಗ್ಗೆಯೇ ಪ್ರಧಾನಿ ನರೇಂದ್ರ ಮೋದಿಯವರು ಉನ್ನತ ಮಟ್ಟದ ಸಭೆಯೊಂದನ್ನು ನಡೆಸಿದ್ದು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಹಾಗೂ ಸಂಚಾರ ನಿಯಂತ್ರಣಗಳನ್ನು ಕಡಿತಗೊಳಿಸುವುದರ ಬಗ್ಗೆ ಮತ್ತೊಮ್ಮೆ ಗಂಭೀರವಾಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Corona Variant Omicron poses a new threat to the entire world
ಇದನ್ನೂ ಓದಿ: Corona: ದೀಪಾವಳಿ ಬಳಿಕ ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳ
ಇದನ್ನೂ ಓದಿ: ಕೊರೊನಾ ಆಯ್ತು, ಅಮೆರಿಕದಲ್ಲೀಗ ಸ್ಯಾಲ್ಮೊನೆಲ್ಲಾ ಸೋಂಕು ಹಾವಳಿ: ಏನಿದು?
Discussion about this post