ನವದೆಹಲಿ: ಕೊರೊನಾ ಸಾಂಕ್ರಾಮಿಕ ತಡೆಗೆ ನೀಡಲಾಗುತ್ತಿರುವ ಲಸಿಕೆ ಗುರುವಾರ 100 ಕೋಟಿ ಡೋಸ್ ದಾಟಿದ್ದು, ಈ ಮೈಲಿಗಲ್ಲು ಸಾಧಿಸಿದ ವಿಶ್ವದ ಎರಡನೇ ದೇಶ ಭಾರತವಾಗಿದೆ. ಸೋಂಕು ಸ್ಫೋಟಿಸಿದ ಚೀನಾದಲ್ಲಿ ಈಗಾಗಲೇ ನೂರು ಕೋಟಿ ಡೋಸ್ ಲಸಿಕೆ ವಿತರಣೆ ಆಗಿದೆ.
ದೇಶದ 130 ಕೋಟಿ ಜನಸಂಖ್ಯೆಯಲ್ಲಿ 94.40 ಕೋಟಿ ವಯಸ್ಕರು ಇದ್ದಾರೆಂದು ಅಂದಾಜಿಸಲಾಗಿದ್ದು, ಈ ಪೈಕಿ ಶೇ. 30ಕ್ಕೂ ಹೆಚ್ಚು ಜನರು ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಶೇ. 75ರಷ್ಟು ಜನರು ಒಂದು ಡೋಸ್ ಪಡೆದಿದ್ದಾರೆ. ಉಳಿದವರಿಗೆ ಕನಿಷ್ಠ ಒಂದು ಡೋಸ್ ಲಸಿಕೆಯನ್ನಾದರೂ ಈ ವರ್ಷದೊಳಗೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.
ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಮಧ್ಯಪ್ರದೇಶ ಈ ರಾಜ್ಯಗಳು ಕ್ರಮವಾಗಿ ಲಸಿಕೆ ನೀಡಿಕೆಯಲ್ಲಿ ಮೊದಲ ಐದು ಸ್ಥಾನದಲ್ಲಿವೆ.
ಕಳೆದ ಜನವರಿ 16ರಂದು ಲಸಿಕಾ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಸೇವೆಯಲ್ಲಿರುವವರಿಗೆ ಚುಚ್ಚುಮದು ನೀಡಲಾಯಿತು. ನಂತರ ಇದನ್ನು ಹಿರಿಯ ನಾಗರಿಕರಿಗೆ, ತಂದನಂತರ 45 ವರ್ಷ ಮೇಲ್ಪಟ್ಟವರಿಗೆ ಮತ್ತು ಅನ್ಯವ್ಯಾಧಿಯಿಂದ ಬಳಲುತ್ತಿರುವ 45 ವರ್ಷದೊಳಗಿನವರಿಗೂ ವಿಸ್ತರಿಸಲಾಯಿತು. ಮೇ ತಿಂಗಳಲ್ಲಿ 18ರಿಂದ 45 ವರ್ಷದೊಳಗಿನವರಿಗೂ ಲಸಿಕೆ ನೀಡಲಾಗುತ್ತಿದೆ. ಮಕ್ಕಳ ಲಸಿಕೆ ಟ್ರಯಲ್ ಯಶಸ್ವಿಯಾಗಿದ್ದು, ನವೆಂಬರ್ನಿಂದ ಲಸಿಕೆ ವಿತರಿಸುವ ಸಾಧ್ಯತೆ ಇದೆ.
ನೂರು ಕೋಟಿ ಡೋಸ್ ಲಸಿಕೆ ನೀಡಿಕೆಯನ್ನು ಸಂಭ್ರಮಿಸಲು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ದೆಹಲಿ ಕೆಂಪುಕೋಟೆಯಲ್ಲಿ ದೃಶ್ಯ-ಶ್ರಾವ್ಯದ ಕಿರುಚಿತ್ರಕ್ಕೆ ಮತ್ತು ಗಾಯಕ ಕೈಲಾಶ್ ಖೇರ್ ಅವರ ಹಾಡಿಗೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಕೆಂಪುಕೋಟೆಯಲ್ಲಿ 1,400 ಕೆ.ಜಿ. ತೂಕದ ರಾಷ್ಟ್ರ ಧ್ವಜ ಹಾರಿಸಲಾಗುತ್ತದೆ.
ಈ ತಿಂಗಳಲ್ಲಿ ನಿತ್ಯ ವ್ಯಾಕ್ಸಿನ್ ನೀಡಿಕೆ ಸರಾಸರಿ 5 ಲಕ್ಷ ಇದ್ದು, ಸೆಪ್ಟೆಂಬರ್ 5ರಂದು ಅತಿ ಹೆಚ್ಚು ಲಸಿಕೆ ವಿತರಣೆ ಆಗಿತ್ತು. ಭಾರತದಲ್ಲಿ ಪುಣೆಯ ಸೆರಂ ಇನ್ಸ್ಟಿಟ್ಯೂಟ್ನ ಬ್ರಟನ್ನ ಅಸ್ಟ್ರಾಜೆನಿಕಾ ಸಂಸ್ಥೆಯ ಜತೆಗೂಡಿ ಉತ್ಪಾದಿಸುತ್ತಿರುವ ಕೋವಿಶೀಲ್ಡ್ ಮತ್ತು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಕೊವ್ಯಾಕ್ಸಿನ್ ಹಾಗೂ ರಷ್ಯಾದ ಸ್ಪುಟ್ನಿಕ್ ಲಸಿಕೆಗಳನ್ನು ನೀಡಲಾಗುತ್ತಿದೆ.
ಪ್ರಧಾನಿ ಮೋದಿ ಅಭಿನಂದನೆ
100 ಕೋಟಿ ಡೋಸ್ ಲಸಿಕೆ ವಿತರಣೆಗೆ ಶ್ರಮಿಸಿದ ವೈದ್ಯರು, ಆರೋಗ್ಯ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಹೇಳಿದ್ದಾರೆ. ಲಸಿಕೆ ಸ್ವೀಕರಿಸಿ ಅಭಿಯಾನ ಯಶಸ್ವಿಗೊಳಿಸುತ್ತಿರುವ ಜನರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದು ಐತಿಹಾಸಿಕ ಸಾಧನೆ. ದೇಶದ ವಿಜ್ಞಾನ ಉದ್ಯಮ, ಸಾಮೂಹಿಕ ಮನೋಭಾವ, 130 ಕೋಟಿ ಜನರ ವಿಜಯ ಎಂದು ಪ್ರಧಾನಿ ಹೇಳಿದ್ದಾರೆ. ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಜತೆ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ, ಅಲ್ಲಿನ ವೈದ್ಯರು, ದಾದಿಯರೊಂದಿಗೆ ಮಾತನಾಡಿದರು. ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್ ಲಸಿಕೆ ವಿತರಣೆಗೆ ಶ್ರಮಿಸುತ್ತಿರುವ ಆರೋಗ್ಯ ಕ್ಷೇತ್ರದ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ. 9 ತಿಂಗಳಲ್ಲಿ ದೇಶದ ನೂರು ಕೋಟಿ ಡೋಸ್ ಲಸಿಕೆ ನೀಡಲಾಗಿರುವುದು ಮಹತ್ತರ ಸಾಧನೆ ಎಂದು ಹೇಳಿದ್ದಾರೆ.
ಭಾರತದ ಐತಿಹಾಸಿಕ ಸಾಧನೆಯನ್ನು ಶ್ಲಾಘಿಸಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ)ಯ ಆಗ್ನೇಯ ಏಷ್ಯಾ ಪ್ರಾದೇಶಿಕ ನಿದರ್ದೇಶಕ ಡಾ. ಪೂನಂ ಖೇತ್ರಪಾಲ್ ಸಿಂಗ್, ದೊಡ್ಡ ದೇಶ, ವೈವಿಧ್ಯದ ಭೌಗೋಳಿಕ ಸನ್ನಿವೇಶದಲ್ಲಿ ಅದ್ವಿತೀಯ ಸಾಧನೆ ಮಾಡಿದೆ. ಇದನ್ನು ಆಗುಮಾಡಿದ ರಾಯಕೀಯ ನಾಯಕತ್ವ, ಆರೋಗ್ಯ ವಲಯದ ಕಾರ್ಯಕರ್ತರ ಅಭಿನಂದನಾರ್ಹರು ಎಂದು ಹೇಳಿದ್ದಾರೆ.
Discussion about this post