ಬೆಂಗಳೂರು: ಬೆಂಗಳೂರಿನಲ್ಲಿ ಒಂದೇ ಕಡೆ ಮೂರು ಕೋವಿಡ್ ಪ್ರಕರಣಗಳು ಕಂಡುಬಂದರೂ ಕ್ಲಸ್ಟರ್ ಎಂದು ಘೋಷಿಸಲು ರಾಜ್ಯ ಸರಕಾರ ತೀರ್ಮಾನ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಬೆಂಗಳೂರಿನಲ್ಲಿ 10 ಪ್ರಕರಣಗಳು ಬಂದರೆ ಕ್ಲಸ್ಟರ್ ಮಾಡುತ್ತಿದ್ದೆವು. ಈಗ ಮೂರು ಪ್ರಕರಣಗಳು ಬಂದರೂ ಕ್ಲಸ್ಟರ್ ಮಾಡಬೇಕೆಂದು ತೀರ್ಮಾನ ಮಾಡಲಾಗಿದೆ. ಕ್ಲಸ್ಟರ್ನಲ್ಲಿ ಹೆಚ್ಚು ಸೋಂಕು ಬರುತ್ತಿರುವುದರಿಂದ ಶಾಲೆ ಹಾಸ್ಟೆಲ್ಗಳ ಕ್ಲಸ್ಟರ್ ಮತ್ತು ಬೆಂಗಳೂರಿನ ಅಪಾರ್ಟ್ಮೆಂಟ್ ಕ್ಲಸ್ಟರ್ ಎಂದು ಎರಡು ವಿಧಗಳಾಗಿ ಪ್ರತ್ಯೇಕಿಸಲಾಗಿದೆ ಎಂದರು.
ಕ್ಲಸ್ಟರ್ಗಳಲ್ಲಿ ಇರುವವರೆಲ್ಲರಿಗೂ ಪರೀಕ್ಷೆ, ಚಿಕಿತ್ಸೆ ಮತ್ತು ಲಸಿಕೆ ನೀಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದ ಮುಖ್ಯಮಂತ್ರಿಗಳು, ಅಪಾರ್ಟ್ಮೆಂಟ್ಗಳ ಮೀಟಿಂಗ್ ಏರಿಯಾದಲ್ಲಿ ಎರಡು ಡೋಸ್ ಲಸಿಕೆ ಪಡೆದವರನ್ನು ಮಾತ್ರ ಭೇಟಿಯಾಗಬೇಕು. ಹೊರಗಡೆಯವರಿಗೆ ಅವಕಾಶವನ್ನು ಕೊಡಬಾರದು ಎಂದು ಬಿಬಿಎಂಪಿಯವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕೋವಿಡ್ -19 ರೂಪಾಂತರ ತಳಿ ಒಮಿಕ್ರಾನ್ ಬಗ್ಗೆ ಒಂದು ಪ್ರಾಥಮಿಕ ವರದಿ ನಮ್ಮ ಕೈ ಸೇರಿದೆ. ಪೂರ್ಣ ಪ್ರಮಾಣದ ವರದಿ ಪಡೆದುಕೊಳ್ಳುವುದಕ್ಕೆ ಇಲಾಖೆಗೆ ಸೂಚನೆ ಕೊಟ್ಟಿದ್ದೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲೆಲ್ಲ ಈ ಸೋಂಕು ಬಂದಿದೆ, ಅದರ ಚಿಕಿತ್ಸಾ ಶಿಷ್ಟಾಚಾರದ ವಿವರ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ. ಈಗಿರುವ ಮಾಹಿತಿ ಪ್ರಕಾರ, ಬೇರೆ ಬೇರೆ ದೇಶದಲ್ಲಿ ಡೆಲ್ಟಾ ಸೋಂಕಿಗೆ ಕೊಡುತ್ತಿದ್ದ ಚಿಕಿತ್ಸೆಯನ್ನೇ ಮುಂದುವರಿಸಿಕೊಂಡು ಹೋಗಬೇಕೆಂದಿದ್ದಾರೆ. ಅದಕ್ಕಾಗಿ ಸರಿಯಾದ ಚಿಕಿತ್ಸೆಯನ್ನು ನೀಡಲು ವೈಜ್ಞಾನಿಕ ನಿರ್ಧಾರ ತೆಗೆದುಕೊಳ್ಳಲು ಆ ಎಲ್ಲ ವಿವರಗಳನ್ನು ತರಿಸಿಕೊಳ್ಳಲು ಹೇಳಿದ್ದೇನೆ ಎಂದರು.
ರೂಪಾಂತರ ತಳಿ ಒಮಿಕ್ರಾನ್ ಸೋಂಕು ವೇಗವಾಗಿ ಹರಡುತ್ತದೆ. ಆದರೆ ತೀವ್ರತೆ ಕಡಿಮೆ ಇದೆ ಎಂದು ಹೆಚ್ಚಿನವರು ಹೇಳುತ್ತಿದ್ದಾರೆ. ಅದನ್ನು ಕೂಡ ಪರೀಕ್ಷೆ ಮಾಡಬೇಕು. ಕಾಂಟ್ಯಾಕ್ಟ್ ಟ್ರೇಸಿಂಗ್, ಟೆಸ್ಟಿಂಗ್ ಹೆಚ್ಚಿಸಲು ಸೂಚನೆ ಕೊಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
COVID- 19: Cluster declaration if three cases are detected

























Discussion about this post