ಬೆಂಗಳೂರು: ಸೈಬರ್ ಕ್ರೈಂ ತಡೆಗಟ್ಟುವ ಸಲುವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಯುವ ಪೀಳಿಗೆಗೆ ತರಬೇತಿ ನೀಡಲು ಕೈಗೊಂಡಿರುವ ಸೈಬರ್ ಸುರಕ್ಷಿತ ಕರ್ನಾಟಕ ಅಭಿಯಾನಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಬೆಂಗಳೂರಿನ ಎಫ್ಎಸ್ಎಲ್ ಕೇಂದ್ರ ಹೊಸ ಟೆಕ್ನಾಲಜಿಯನ್ನು ಹೊಂದಿದೆ. ಸೈಬರ್ ಪ್ರಕರಣಗಳನ್ನು ಪತ್ತೆ ಹಚ್ಚಲು ನಮ್ಮ ಕರ್ನಾಟಕ ಪೊಲೀಸರು ಸಮರ್ಥರಿದ್ದಾರೆ. ಯುವಕರ ಸುರಕ್ಷತೆಗೆ ಸರಕಾರ ಸಾಕಷ್ಟು ಕ್ರಮ ತೆಗೆದುಕೊಂಡಿದೆ. ಡ್ರಗ್ಸ್‌ಗೆ ಕಡಿವಾಣ ಹಾಕುತ್ತಿದೆ. ಸೈಬರ್ ಮೂಲಕವೇ ನಡೆಯವ ಡಾರ್ಕ್ ವೆಬ್ ಗೂ ಕಡಿವಾಣ ಹಾಕುತ್ತಿರುವ ಮೊದಲ ರಾಜ್ಯ ನಮ್ಮ ಕರ್ನಾಟಕ. ಸೈಬರ್ ಪೊಲೀಸ್ ಠಾಣೆಗಳಿಗೆ ಅಗತ್ಯವಿರುವ ಎಲ್ಲಾ ನೆರವು ನೀಡಲಾಗುತ್ತದೆ. ಸೈಬರ್ ಕ್ರೈಂ ತಡೆಗಟ್ಟುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದರು.
ಸೈಬರ್ ಕ್ರೈಂಗೂ ಭೌತಿಕ ಅಪರಾಧಕ್ಕೂ ವ್ಯತ್ಯಾಸ ಇದೆ. ಸರಕಾರದ ಇಲಾಖೆಗಳಲ್ಲೂ ಸೈಬರ್ ಕ್ರೈಂಗಳಾಗಿರುವ ಉದಾಹರಣೆ ಇವೆ. ನನ್ನ ಸುರಕ್ಷತೆಯನ್ನು ಹೇಗೆ ಮಾಡಿಕೊಳ್ಳುತ್ತೇನೋ ಅದೇ ರೀತಿ ನನ್ನ ಡಿಜಿಟಲ್ ಸುರಕ್ಷತೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಬಹಳಷ್ಟು ಜನರು ಮೊಬೈಲ್ ಸೇರಿದಂತೆ ಡಿಜಿಟಲ್ ವಸ್ತುಗಳನ್ನು ಬಳಸುತ್ತಾರೆ. ಆದರೆ ಬಹಳಷ್ಟು ಜನ ವಿದ್ಯಾವಂತರಿಗೂ ಸೈಬರ್ ಸುರಕ್ಷತೆ ಬಗ್ಗೆ ಗೊತ್ತಾಗಲ್ಲ ಎಂದು ತಿಳಿಸಿದರು.
ಸೈಬರ್ ಕ್ರೈಂಗೆ ಸಾಕಷ್ಟು ಬಡ ಕುಟುಂಬಗಳು ನಾಶವಾಗುತ್ತಿವೆ. ಸೈಬರ್ ಕ್ರೈಮ್ ಅನ್ನೋದು ವೈರಸ್ ಇದ್ದಂತೆ, ಅದನ್ನು ಸದೆ ಬಡೆಯಲು ಸರಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಮತ್ತು ಎಲ್ಲಾ ರೀತಿಯ ನೆರವು ನೀಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಸಚಿವ ಡಾ.ನಾರಾಯಣಗೌಡ ಮಾತನಾಡಿ, ಇದೊಂದು ವಿನೂತನ ಕಾರ್ಯಕ್ರಮ. ದೇಶದಲ್ಲೇ ಪ್ರಥಮವಾಗಿ ಅಭಿಯಾನ ನಡೆಸುತ್ತಿರುವುದಕ್ಕೆ ಸಂತಸವಾಗಿದೆ. ಎನ್‌ಎನ್ಎಸ್ ಸ್ವಯಂ ಸೇವಕರಿಗೆ ತರಬೇತಿ ನೀಡಿ ಅವರ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
ಕರ್ನಾಟಕದ ಎಲ್ಲಾ ಜಿಲ್ಲೆಯಲ್ಲೂ ತರಬೇತಿಯನ್ನು ನೀಡಿ, ಸರ್ಟಿಫಿಕೇಟ್ ಕೂಡ ನೀಡಲಾಗುತ್ತದೆ. ಮುಂದಿನ ಹಂತದಲ್ಲಿ ಪೊಲೀಸ್ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲೂ ಸೈಬರ್ ಸೇಫ್ ಸಂಬಂಧ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ. ಮಹಿಳೆಯರು, ಯುವ ಜನತೆ ಸೇರಿದಂತೆ ಎಲ್ಲರೂ ಸೈಬರ್ ವಂಚನೆಗಳಿಂದ ಸುರಕ್ಷಿತವಾಗಿರಬೇಕು. ಈ ನಿಟ್ಟಿನಲ್ಲಿ ಕೈಗೊಂಡಿರುವ ಈ ಅಭಿಯಾನ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸೈಬರ್ ಸುರಕ್ಷಿತ ಅಭಿಯಾನದ ರಾಯಭಾರಿ, ನಟ ರಮೇಶ್ ಅರವಿಂದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮೊದಲಾದವರಿದ್ದರು.
Cyber Safe Karnataka Campaign Launched

























Discussion about this post