ಬಾಳೆಹೊನ್ನೂರು: ಜೀವನ ಶಾಶ್ವತವಲ್ಲ. ಮಾಡಿದ ಕಾರ್ಯಗಳು ಶಾಶ್ವತ. ಸತ್ಕಾರ್ಯಗಳಿಂದ ಜೀವನದಲ್ಲಿ ಶ್ರೇಯಸ್ಸು ಪಡೆಯಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಬಳವಾಟ ಹಿರೇಮಠದ ಲಿಂ.ಸದಾನಂದ ಶಿವಾಚಾರ್ಯ ಸ್ವಾಮಿಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಜನ್ಮ ಜನ್ಮಗಳ ಪುಣ್ಯ ಫಲದಿಂದ ಮಾನವ ಜೀವನ ಪ್ರಾಪ್ತವಾಗಿದೆ. ಅರಿವು ಆದರ್ಶಗಳ ದಾರಿಯಲ್ಲಿ ನಡೆದು ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು. ಜೀವನ ತೆರೆದಿಟ್ಟ ಪುಸ್ತಕವಾಗಿದ್ದು ಮೊದಲ ಪುಟದಲ್ಲಿ ಹುಟ್ಟು ಕೊನೆ ಪುಟದಲ್ಲಿ ಸಾವನ್ನು ಪರಮಾತ್ಮ ಬರೆದು ಕಳಿಸಿದ್ದಾನೆ. ಹುಟ್ಟು ಸಾವುಗಳ ಮಧ್ಯದ ಬದುಕು ಸಮೃದ್ಧಗೊಳಿಸಿಕೊಳ್ಳುವ ಜವಾಬ್ದಾರಿ ಅವರವರಿಗೆ ಸೇರಿದ್ದಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಧರ್ಮದ ದಶ ಸೂತ್ರಗಳು ಬದುಕಿ ಬಾಳುವ ಜನಾಂಗಕ್ಕೆ ಆಶಾ ಕಿರಣವಾಗಿವೆ. ಮನುಷ್ಯ ಎಷ್ಟು ವರುಷ ಬದುಕಿದನೆಂಬುದು ಮುಖ್ಯವಲ್ಲ. ಬದುಕಿರುವಷ್ಟು ದಿನ ಹೇಗೆ ಬಾಳಿದನೆಂಬುದು ಮುಖ್ಯ. ಲಿಂ.ಸದಾನಂದ ಶ್ರೀಗಳು ಧರ್ಮ ಮುಖಿಯಾಗಿ ಮತ್ತು ಸಮಾಜ ಮುಖಿಯಾಗಿ ಹಲವು ಹತ್ತು ಕಾರ್ಯಗಳನ್ನು ಮಾಡಿ ಭಕ್ತರ ಮನದಂಗಳದಲ್ಲಿ ಉಳಿದಿದ್ದಾರೆ ಎಂದರು.
ಮಳಲಿ ಮಠದ ಡಾ. ನಾಗಭೂಷಣ ಶ್ರೀ, ತಡವಲಗಾ ರಾಚೋಟೇಶ್ವರ ಶ್ರೀ, ಆಲಮೇಲ ಚಂದ್ರಶೇಖರ ಶ್ರೀ, ಗುಂಡಕನಾಳ ಗುರುಲಿಂಗ ಶ್ರೀ, ಬೈಲಹೊಂಗಲ ಜಡಿಸಿದ್ಧೇಶ್ವರ ಶ್ರೀ, ಯಂಕಚಿ ರುದ್ರಮುನಿ ಶ್ರೀ, ಓತ್ನಳ್ಳಿ ಶಂಭುಲಿಂಗ ಶ್ರೀ ಮೊದಲ್ಗೊಂಡು ಹಲವರು ಮಠಾಧೀಶರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಹಣಮಾಪುರ-ಬಳವಾಟ ಹಿರೇಮಠದ ಸೋಮಶೇಖರ ದೇವರು ಸಮಾರಂಭದ ನೇತೃತ್ವವನ್ನು ವಹಿಸಿದ್ದರು.
ರಾಜಕೀಯ ಹಲವಾರು ಧುರೀಣರಿಗೆ ಮತ್ತು ಕಾರ್ಯಕರ್ತರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಪುಣ್ಯ ಸ್ಮರಣೋತ್ಸವ ನಿಮಿತ್ಯ ೧೦೦೮ ಮುತೈದೆಯರಿಗೆ ತುಂಬುವ ಮತ್ತು ೧೦೦೮ ಕುಂಭ ಮೆರವಣಿಗೆ ಏರ್ಪಡಿಸಲಾಗಿತ್ತು.
ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ದೂರಿಯಾಗಿ ಸಕಲ ವಾದ್ಯ ವೈಭವಗಳೊಂದಿಗೆ ಜರುಗಿತು. ಆಗಮಿಸಿದ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ನೆರವೇರಿಸಲಾಯಿತು.

























Discussion about this post