ಚಿಕ್ಕಮಗಳೂರು: ರಸ್ತೆಗಳಲ್ಲಿ ಬ್ಲಾಕ್ ಸ್ಪಾಟ್ಗಳ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸುವ ಮೂಲಕ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುತ್ತಿದ್ದು ಅಂತಹ ವಲಯಗಳನ್ನು ಗುರುತಿಸಿ ಅಂತಹ ಸ್ಥಳಗಳನ್ನು ಬ್ಲಾಕ್ ಸ್ಪಾಟ್ ಪಟ್ಟಿಯಲ್ಲಿ ಗುರುತಿಸಿ ಅಪಘಾತವನ್ನು ನಿಯಂತ್ರಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ನೂತನವಾಗಿ ರಸ್ತೆಗಳನ್ನು ನಿರ್ಮಾಣ ಮಾಡುವಾಗ ರಸ್ತೆ ಸುರಕ್ಷತೆಗಾಗಿ ಬಜೆಟ್ನ್ನು ಮೀಸಲಿಡಬೇಕು, ಮೀಸಲಿಟ್ಟಂತಹ ಹಣ ಸಮರ್ಪಕವಾಗಿ ಬಳಕೆಯಾಗಬೇಕು ಎಂದ ಅವರು ರಸ್ತೆ ಸುರಕ್ಷತಾ ಕಾಮಗಾರಿಗಳು ಅತಿಮುಖ್ಯವಾಗಿದ್ದು ಕಾಮಗಾರಿಗಳು ವಿಳಂಬವಾಗದಂತೆ ಗಮನಹರಿಸುವ ಮೂಲಕ ಸ್ಥಳಗಳಿಗೆ ಭೇಟಿ ನೀಡಿ ಪರಶೀಲಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು, ರಸ್ತೆ ಸುರಕ್ಷತೆಯಲ್ಲಿ ಟ್ರೋಮಾ ಸೆಂಟರ್ಗಳು ತುಂಬಾ ಮುಖ್ಯವಾಗಿದ್ದು, ಜಿಲ್ಲೆಯಲ್ಲಿ ಟ್ರೋಮಾ ಸೆಂಟರ್ಗಳು ಮೂಡಿಗೆರೆ ಮತ್ತು ಕಡೂರು ತಾಲ್ಲೂಕಿನಲ್ಲಿದ್ದು, ಇನ್ನೂ ಹೆಚ್ಚಿನ ಟ್ರೋಮಾ ಸೆಂಟರ್ಗಳನ್ನು ಪ್ರಾರಂಭಿಸಲು ತಿಳಿಸಿದ ಅವರು ಜಿಲ್ಲೆಯಲ್ಲಿ ಎಲ್ಲೆಲ್ಲಿ ಹೆಚ್ಚು ಅಪಘಾತ ವಲಯಗಳಿವೆ ಎಂಬುದರ ಬಗ್ಗೆ ಸಮೀಕ್ಷೆ ಕೈಗೊಂಡು ಸ್ಥಳಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅಗತ್ಯವಿರುವ ಪ್ರದೇಶಗಳಲ್ಲಿ ಟ್ರೋಮಾ ಸೆಂಟರ್ಗಳನ್ನು ಪ್ರಾರಂಭಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ೧೦೮ ಆಂಬ್ಯೂಲೆನ್ಸ್ಗಳಲ್ಲಿ ಜೀವರಕ್ಷಕ ಉಪಕರಣ ಮತ್ತು ಅಗತ್ಯ ನುರಿತ ಸಿಬ್ಬಂದಿಗಳು ಇರುವಂತೆ ನಿಗಾ ವಹಿಸಬೇಕು ಎಂದ ಅವರು ಅಪಘಾತವಾದ ಸ್ಥಳಕ್ಕೆ ನಿಗದಿತ ಕಾಲ ಮಿತಿಯೊಳಗೆ ತಲುಪಲು ಕ್ರಮವಹಿಸುವಂತೆ ಸೂಚಿಸಿದರು.
ಜಿಲ್ಲಾ ರಸ್ತೆಗಳಲ್ಲಿ ಒಟ್ಟು ೧೨ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿದ್ದು ಅವುಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು ಎಚ್ಚರಿಕೆ ಸೂಚನ ಫಲಕ, ಬಿಳಿ ಬಣ್ಣದಿಂದ ಮಾರ್ಕ್, ಕ್ಯಾಟ್ ಐಸ್ ಅಳವಡಿಕೆ, ರಿಪ್ಲೆಕ್ಟರ್ ಅಳವಡಿಕೆಯ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಬಗ್ಗೆ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್.ಎಂ.ಹೆಚ್ ಮಾತನಾಡಿ, ಜಿಲ್ಲೆಯಲ್ಲಿ ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಿ ಕಾಮಗಾರಿ ಪೂರ್ಣಗೊಳಿಸಿದ್ದರೂ ಸಹ ಅಪಘಾತಗಳು ಹೆಚ್ಚಾಗುತ್ತಿವೆ. ಮುಖ್ಯವಾಗಿ ರಸ್ತೆಯ ತಿರುವುಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವ ಮೂಲಕ ಅಪಘಾತಗಳನ್ನು ತಡೆಗಟ್ಟಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ೧೭೩ ರಲ್ಲಿ ಒಟ್ಟು ೧೬ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿದ್ದು, ಅವುಗಳಲ್ಲಿ ೧೦ ಬ್ಲಾಕ್ ಸ್ಪಾಟ್ಗಳನ್ನು ಖಾಯಂ ಅಭಿವೃದ್ಧಿಪಡಿಸಿರುವ ಬಗ್ಗೆ ಹಾಗೂ ೬ ಬ್ಲಾಕ್ ಸ್ಪಾಟ್ಗಳನ್ನು ತಾತ್ಕಾಲಿಕವಾಗಿ ಅಭಿವೃದ್ಧಿಪಡಿಸಿರುವುದರ ಕುರಿತು ಮಾಹಿತಿ ಪಡೆದುಕೊಂಡ ಅವರು ಒಳಭಾಗದ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ಒಟ್ಟು ೨೬ ರಸ್ತೆಗಳಿದ್ದು, ರಸ್ತೆಗಳ ೧೦ ಮೀಟರ್ಗಳಿಗೂ ಹಿಂದೆ ಹಂಪ್ಸ್ಗಳು ಹಾಗೂ ಅಗತ್ಯ ಸೂಚನಾ ಫಲಕ, ಕ್ಯಾಟ್ ಐಸ್, ರಂಬ್ಲರ್, ರಿಪ್ಲೆಕ್ಟರ್ಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ೨೦೬ ರಲ್ಲಿ ಒಟ್ಟು ೨೧ ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಿದ್ದು, ಇವುಗಳ ಕಾಮಗಾರಿ ಪೂರ್ಣಗೊಂಡಿದ್ದರೂ ಸಹ ರಸ್ತೆಯಲ್ಲಿ ಕಳೆದ ಒಂದು ತಿಂಗಳಲ್ಲಿ ೨೮ ಅಪಘಾತಗಳು ಸಂಭವಿಸಿ ಮರಣ ಹೊಂದಿದ್ದಾರೆ, ಇವುಗಳಲ್ಲಿ ೨೨ ಪ್ರಕರಣಗಳು ಜಿಲ್ಲೆಯ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ಭಾಗದಲ್ಲಿ ಕಂಡುಬಂದಿದ್ದು ಅಧಿಕಾರಿಗಳು ಸ್ಥಳ ಪರಿಶೀಲಿಸಿ ಅಪಘಾತಕ್ಕೆ ಸೂಕ್ತ ಕಾರಣಗಳನ್ನು ನೀಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಅಪಘಾತಗಳು ಸಂಭವಿಸಿದ ಸ್ಥಳ ಪರಶೀಲನೆಯ ಒಟ್ಟು ೨೨ ಪ್ರಕರಣಗಳ ತನಿಖಾ ವರದಿ ಲಭ್ಯವಿಲ್ಲದ ಪ್ರಕರಣಗಳ ಪೈಕಿ ಚಿಕ್ಕಮಗಳೂರು-೩, ಕಡೂರು-೭, ತರೀಕೆರೆ-೨, ಎನ್.ಆರ್.ಪುರ-೬, ಅಜ್ಜಂಪುರ-೩, ಶೃಂಗೇರಿ-೧ ಅಫಘಾತಗಳ ಬಗ್ಗೆ ವರದಿಗಳು ಲಭ್ಯವಿಲ್ಲದ ಕಾರಣ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯವರು ಜಂಟಿ ತಪಾಸಣೆ ಕಾರ್ಯ ನಡೆಸಿ ಕಡ್ಡಾಯವಾಗಿ ಮೂರ್ನಾಲ್ಕು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಕೊಟ್ಟಿಗೆಹಾರ-ಕಳಸ-ಬಾಳೂರು ಸಂಪರ್ಕಿಸುವ ರಸ್ತೆಯಲ್ಲಿ ತಿರುವುಗಳು ಹೆಚ್ಚಿದ್ದು ರಸ್ತೆ ಬದಿಯಲ್ಲಿರುವ ಎಲ್ಲಾ ಮರಗಳಿಗೆ ಒಂದು ವಾರದೊಳಗಾಗಿ ಕಡ್ಡಾಯವಾಗಿ ರಿಪ್ಲೆಕ್ಟರ್ ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಜಿಲ್ಲಾ ರಸ್ತೆಗಳಲ್ಲಿರುವ ಬ್ಲಾಕ್ ಸ್ಪಾಟ್ಗಳು ಮತ್ತು ಅವುಗಳ ಕಾಮಗಾರಿಗಳ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸದಸ್ಯ ಕಾರ್ಯದರ್ಶಿ ಮುರುಗೇಂದ್ರ ಬಿ.ಶಿರೋಳ್ಕರ್ ಮಾಹಿತಿ ನೀಡಿದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಉಮೇಶ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

























Discussion about this post