ವಾಷಿಂಗ್ಟನ್: ಕೊರೊನಾ ವೈರಸ್ ಸೋಂಕಿನ ಹಾವಳಿಯ ಬೆನ್ನಲ್ಲೇ ಇದೀಗ ಅಮೆರಿಕದ 37 ರಾಜ್ಯಗಳಲ್ಲಿ ಸ್ಯಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಸೋಂಕು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.
ಕಚ್ಚಾ ಈರುಳ್ಳಿ ಸೇವನೆ ಮೂಲಕ ಈ ಸೋಂಕು ತಗುಲಿರಬಹುದು ಎಂದು ಅಮೆರಿಕದ ಕಾಯಿಲೆ ನಿಯಂತ್ರಣ ಮತ್ತು ರೋಗ ತಡೆ ಇಲಾಖೆ ಹೇಳಿದ್ದು, ಕಚ್ಚಾ ಈರುಳ್ಳಿಗಳನ್ನು ಸೇವಿಸದಂತೆಯೂ, ಅವುಗಳನ್ನು ನಾಶ ಮಾಡುವಂತೆಯೂ ಜನರಿಗೆ ಸೂಚಿಸಿದೆ.
ಮೆಕ್ಸಿಕೊದ ಚಿಹುವಾಹುವಾದಿಂದ ಆಮದು ಮಾಡಿಕೊಳ್ಳಲಾದ ಈರುಳ್ಳಿಯಿಂದ ಬ್ಯಾಕ್ಟೀರಿಯಾ ಸೋಂಕು ಹರಡಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ಇಲಾಖೆ ತಿಳಿಸಿದೆ.
ಈವರೆಗೆ 652 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. 129 ಮಂದಿ ಆಸ್ಪತ್ರೆಗೆ ದಾಲಾಗಿದ್ದಾರೆ. ಅದೃಷ್ಟವಶಾತ್, ಈವರೆಗೆ ಸೋಂಕಿನಿಂದಾಗಿ ಯಾರೂ ಮೃತಪಟ್ಟಿಲ್ಲ. ಸೋಂಕಿತರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಮೇ 31ರಿಂದ ಸೆಪ್ಟೆಂಬರ್ 30ರ ಅವಧಿಯಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎನ್ನಲಾಗಿದೆ.
ಸೊಂಕಿತರಾದವರ ಪೈಕಿ ಶೇ 75ರಷ್ಟು ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಅವರೆಲ್ಲ ಕಚ್ಚಾ ಈರುಳ್ಳಿ ಸೇವನೆ ಮಾಡಿದ್ದರು ಎಂಬುದು ತಿಳಿದುಬಂದಿದೆ ಎಂದು ಇಲಾಖೆ ತಿಳಿಸಿದೆ. ಈ ಪೈಕಿ ಅನೇಕರು ಒಂದೇ ಹೋಟೆಲ್ನಲ್ಲಿ ಆಹಾರ ಸೇವನೆ ಮಾಡಿದ್ದರು.
ಏನಿದು ಸ್ಯಾಲ್ಮೊನೆಲ್ಲಾ ಸೋಂಕು?: ಇದು ಸ್ಯಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾದಿಂದ ತಗಲುವ ಸೋಂಕು.
ಲಕ್ಷಣಗಳೇನು?
* ಅತಿಸಾರ
* ಜ್ವರ
* ಹೊಟ್ಟೆ ನೋವು, ಸೆಳೆತ
* ತಲೆನೋವು
* ಮೈ–ಕೈ ನೋವು
* ಆಲಸ್ಯ
* ಮಲ–ಮೂತ್ರದ ಜತೆ ರಕ್ತಸ್ರಾವ
ಈ ಲಕ್ಷಣಗಳು ಸೋಂಕಿತರಲ್ಲಿ ಕಂಡುಬರಬಹುದು. ಆದರೆ ಈ ಎಲ್ಲ ಲಕ್ಷಣಗಳೂ ಇರಬೇಕೆಂದೇನೂ ಇಲ್ಲ ಎಂದೂ ತಜ್ಞರು ತಿಳಿಸಿದ್ದಾರೆ.
Discussion about this post