ಕೋವಿಡ್ 19 ಪರಿಣಾಮ ಎಲ್ಲರ ವ್ಯಾಪಾರ, ವ್ಯವಹಾರ ಅಷ್ಟೇಕೆ ಮಕ್ಕಳ ತರಗತಿಗಳು ಕೂಡ ಆನ್ ಲೈನ್‌ಗೆ ಬಂದು ಕೂತಿವೆ ಅರ್ಥಾತ್ ಡಿಜಿಟಲ್ ಆಗಿದೆ. ಹೀಗಾಗಿ, ಅಂತರ್ಜಾಲ ವ್ಯವಹಾರಗಳಿಗೆ ಭದ್ರತೆಯೇ ಮನೆದೇವ್ರು. ಪ್ರಸ್ತುತ ಸೈಬರ್ ಸೆಕ್ಯುರಿಟಿ ವಿಚಾರಕ್ಕೆ ಬಂದರೆ ಭಾರತ ಸಿಕ್ಕಾಪಟ್ಟೆ ಹಿಂದೆ ಇದ್ದಂತಿದೆ. ಈ ವಿಚಾರದಲ್ಲಿ ಅಭಿವೃದ್ಧಿಶೀಲರಾಷ್ಟ್ರವಾಗಿಲ್ಲ. ನರ್ಡ್ ಪಾಸ್ ಕಂಪೆನಿ ನಡೆಸಿದ ಸಂಶೋಧನೆಯ ಪ್ರಕಾರ ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ಪಾಸ್‌ವರ್ಡ್ ಅಂದರೆ ಅದು ಪಾಸ್‌ವರ್ಡ್. ಇದು ಸೈಬರ್ ಕಳ್ಳತನ ಹೆಚ್ಚಲು ಪ್ರಮುಖ ಕಾರಣ. ಹೀಗಾಗಿ, ಮುಂಬೈ ಪೊಲೀಸರು ಪದೇ ಪದೆ ಸರಿಯಾಗಿರುವ ಪಾಸ್‌ವರ್ಡ್‌ನ್ನು ಬಳಸಿ ಅಂತ ಹೇಳುತ್ತಿದ್ದರೂ ದುರ್ಬಲ ಪಾಸ್‌ವರ್ಡ್‌ನ್ನೇ ಬಳಸುತ್ತಾ, ನಾಮ ಹಾಕಿಸಿಕೊಳ್ಳುವವರ ಸಂಖ್ಯೆ ಏರುತ್ತಲೇ ಇದೆ.
ಜಾಗತಿಕ ಪಾಸ್‌ವರ್ಡ್ ಮ್ಯಾನೇಜರ್ ನರ್ಡ್ ಪಾಸ್ ಕಂಪೆನಿ ಪ್ರಪಂಚದ 50 ದೇಶಗಳು ಬಳಸುವ ಸಾಮಾನ್ಯ ಪಾಸ್‌ವರ್ಡ್ ಹಾಗೂ ಅದನ್ನು ತೆರೆಯಲು ತೆಗೆದುಕೊಳ್ಳುವ ಸಮಯವನ್ನು ವಿಶ್ಲೇಷಣೆ ಮಾಡಿದೆ. ಅದರ ಪ್ರಕಾರ, ಭಾರತದಲ್ಲಿ ಸಾಮಾನ್ಯವಾಗಿ ಪಾಸ್‌ವರ್ಡ್‌ಗೆ ಬಳಸುವ ಅಂಕಿಗಳು- 12345, 123456, 123456789, 12345678 ಇಂಡಿಯಾ 123, 1234567, ಎಬಿಸಿ 123. ಎಲ್ಲಾ ಪಾಸ್‌ವರ್ಡ್‌ಗಳಲ್ಲಿ, ಇಂಡಿಯಾ 123 ಹೊರತಾಗಿ ಮಿಕ್ಕೆಲ್ಲವನ್ನೂ ಕೇವಲ ಒಂದು ಸೆಕೆಂಡ್‌ನಲ್ಲಿ ತೆರೆಯಬಹುದಂತೆ. ಇಂಡಿಯಾ 123 ಮಾತ್ರ 17 ನಿಮಿಷ ತೆಗೆದುಕೊಳ್ಳುತ್ತದೆ ಎಂದು ಕಂಪೆನಿ ಹೇಳಿದೆ.
ನಮ್ಮ ಡಿಜಿಟಲ್ ಬದುಕಿನ ಹೆಬ್ಬಾಗಿಲೇ ಪಾಸ್‌ವರ್ಡ್‌ಗಳು. ಇದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ದಿನದ ಬಹುತೇಕ ಸಮಯವನ್ನು ಆನ್ ಲೈನ್ ನಲ್ಲೇ ಕಳೆಯುವುದರಿಂದ ಸೈಬರ್ ಸೆಕ್ಯುರಿಟಿ ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಯಾರೂ ತೆರೆಯಲಾಗದಂಥ ಬಲವಾದ ಪಾಸ್‌ವರ್ಡ್ ನೀಡುವುದು ಅತೀ ಮುಖ್ಯ ಎಂದು ನರ್ಡ್ ಪಾಸ್ ಸಿ.ಇ.ಓ ಜಾನ್ಸ್ ಕಾಕ್ಲೈಸ್ ಹೇಳಿದ್ದಾರೆ.
ಪ್ರತಿ ಪಾಸ್‌ವರ್ಡ್‌ಗಳು ದುರ್ಬಲವಾಗುತ್ತಿರುವುದು ದುರಂತ. ಇಷ್ಟಾದರೂ, ಜನರು ಯೋಗ್ಯವಾದ, ಪ್ರಬಲವಾದ ಪಾಸ್ ವರ್ಡ್ ಗಳನ್ನು ನೀಡುವ ಮೂಲಕ ಶುಚಿತ್ವ ಕಾಯ್ದುಕೊಳ್ಳುತ್ತಿಲ್ಲ ಎಂದು ಎಚ್ಚರಿಸಿದ್ದಾರೆ. ಜಾಗತಿಕ 50 ದೇಶಗಳಲ್ಲಿ ಮೂರು ರೀತಿ ಪಾಸ್ ವರ್ಡ್ ಗಳನ್ನು ಬಳಸುತ್ತಾರೆ. 123456, 123456789 ಮತ್ತು 12345 ಎಂದು ಕಂಪೆನಿ ವಿಶ್ಲೇಷಣೆ ಮಾಡಿದೆ.
ಇದನ್ನೂ ಓದಿ: ಒಬ್ಬಂಟಿ ನಾಯಿಗೆ ಬೇಜಾರಾದರೆ ಏನು ಮಾಡುತ್ತೆ? ಫೋನ್ ಬಳಸಿ ಮಾಲೀಕರಿಗೆ ಕರೆ ಮಾಡುತ್ತೆ!
Discussion about this post