ರಘು ದೀಕ್ಷೀತ್ ಹಾಡ್ತಾರೆ, ರಘು ದೀಕ್ಷೀತ್ ಕುಣೀತಾರೆ ಈಗ ರಘು ದೀಕ್ಷಿತ್ ನಟಿಸುತ್ತಿದ್ದಾರೆ. ಇದು ನಿಜ, ಇಷ್ಟು ದಿನ ರಘು ಅವರನ್ನು ಮೈಕಿನ ಮುಂದೆ ನೋಡುತ್ತಿದ್ದವರು, ಇನ್ನುಮುಂದೆ ಬಣ್ಣ ಬಳಿದುಕೊಂಡ ರಘುವನ್ನೂ ನೋಡಬಹುದು. ಒಳ್ಳೆ ಹೈಟು, ಅಷ್ಟೇ ಚೆನ್ನಾಗಿರುವ ಪರ್ಸನಾಲಿಟಿ ಇರುವ ರಘು ಅವರು ಬ್ಯಾಂಗ್ ಅನ್ನೋ ಚಿತ್ರದಲ್ಲಿ ಭೂಗತ ದೊರೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಆ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿರುವ ರಘು ದೀಕ್ಷಿತ್- ಇದೊಂದು ಹೊಸ ಅನುಭವ. ಹೊಸ ಆರಂಭ. ಈ ಬಗ್ಗೆ ಸಿಕ್ಕಾಪಟ್ಟೆ ಭಯ ಇತ್ತು. ಶ್ರೀಗಣೇಶ್, ಋತ್ವಿಕ್ ಮುರಳೀಧರ್ ನಮ್ಮ ಮನೆಗೆ ಬಂದು ನಟನೆ ಮಾಡ್ತೀರ ಅಂದಾಗ ಅವರನ್ನು ಓಡಿಸಿದ್ದೆ. ಆಮೇಲೆ, 10-15 ಸಲ ಕರೆ ಮಾಡಿದರು. ನಂಬರ್ ಬ್ಲಾಕ್ ಮಾಡಿದ್ದೆ. ಬೇರೆ ನಂಬರ್ ನಿಂದ ಕರೆ ಮಾಡಿದರು. ಕೊನೆಗೆ, ಸಾರ್ ನೀವು ಒಂದು ಸಲ ಸೆಟ್ ಗೆ ಬನ್ನಿ. ನಿಮಗೆ ವಾತಾವರಣ ಹಿಡಿಸಿದರೆ ಮಾತ್ರ ನಟನೆ ಮಾಡಿ. ಇಲ್ಲ ಅಂದ್ರೆ ಬೇಡ ಅಂದರು. ನಾನು ಸೆಟ್ ಗೆ ಹೋದೆ, ಹಿತವಾಗಿತ್ತು. ಅಲ್ಲಿಂದ ನಟನೆ ಶುರುಮಾಡಿದೆ ಅಂತ ತಮ್ಮ ಅರಂಗ್ರೇಟಂ ಅನ್ನು ವಿವರಿಸಿದರು ರಘು.
ರಘು ದೀಕ್ಷಿತ್ ಗೆ ಸ್ಟೇಜ್ ಹತ್ತೋದು ಹೊಸದಲ್ಲ. ಅವರಿಗೆ ಸ್ಟೇಜ್ ಫಿಯರ್ ಅನ್ನೋದು ಇಲ್ಲವೇ ಇಲ್ಲ. ಆದರೆ, ನಟನೆ ಮಾಡುವಾಗಲೂ ಇಂಥದೇ ಫೀಲು ಇತ್ತಾ ಅಂದಾಗ ಅವರು ಹೇಳಿದ್ದು- ಖಂಡಿತ ಇತ್ತು. ಅದಕ್ಕಾಗಿ ಮೊದಲು ಕೇಳಿದಾಗ ಒಪ್ಪಿಕೊಳ್ಳಲಿಲ್ಲ. ರಘು ಸುಮ್ಮನೆ ಹಾಡ್ಕೊಂಡಿದ್ದ. ಅದನ್ನು ಬಿಟ್ಟು ಇಲ್ಲಿಗೆ ಬಂದಿದ್ದಾನೆ. ಇವೆಲ್ಲಾ ಬೇಕಿತ್ತು ಅವನಿಗೆ ಅಂತ ಮಾತನಾಡಿಕೊಂಡರೆ ಅನ್ನೋ ಭಯವಿತ್ತು. ಹಾಡೋದಕ್ಕೂ, ನಟನಿಸುವುದಕ್ಕೂ ವೇದಿಕೆ ಒಂದೇ. ಅಲ್ಲಿ ಮೈಕ್ ಮುಂದೆ ಹಾಡಬೇಕು. ಇಲ್ಲಿ ಡೈಲಾಗ್ ಅನ್ನು ಕ್ಯಾಮರ ಮುಖ ನೋಡಿಕೊಂಡು ಹೇಳಬೇಕು. ಇವೆಲ್ಲ ಹೊಸದು ನನಗೆ. ಎಲ್ಲವನ್ನು ಕಲಿತು ಮಾಡಿದ್ದೇನೆ. ಫೈಟಿಂಗ್ ಮಾಡಬೇಕಾದ ಸಂದರ್ಭದಲ್ಲಿ ಚೇತನ್ ಮಾಸ್ಟರ್ ಸ್ಟುಡಿಯೋದಲ್ಲಿ ತಾಲೀಮು ಮಾಡಿದ್ದೇನೆ. ಇದೊಂಥರ ಮಗುವನ್ನು ಮೊದಲಬಾರಿಗೆ ಮೈಸೂರು ಮೃಗಾಲಯ ತೋರಿಸಿದಾಗ ಇರುತ್ತಲ್ಲ ಕುತೂಹಲ ಅಂಥದ್ದೇ ನನ್ನಲ್ಲೂ ಇದೆ ಅಂತೆಲ್ಲ ಆತ್ಮವಿಶ್ವಾಸದಿಂದ ವಿವರಿಸುತ್ತಾರೆ ರಘುದೀಕ್ಷಿತ್.
ರಘು ಅವರಿಗೆ ನಟನೆ ಬಹು ದೊಡ್ಡ ಗುರುವಂತೆ. ಇದರಿಂದ ಬಹಳ ಕಲಿತೆ ಅಂತ ಹೇಳಿಕೊಳ್ಳುತ್ತಾರೆ. ಈ ಚಿತ್ರದಲ್ಲಿ ನಟಿಸದೇ ಹೋಗಿದ್ದರೆ ದೊಡ್ಡ ಅನುಭವವನ್ನು ಕಳೆದುಕೊಳ್ಳುತ್ತಿದ್ದೆ. ಸಿನಿಮಾಕ್ಕೆ ಅಂತ ಸುಮ್ಮನೆ ಹಾಡಿಬಿಡ್ತೀವಿ. ಅದರೆ, ನಟರಾದವರು ಪಾತ್ರದೊಳಗೆ ಹೇಗೆ ಪರಕಾಯ ಪ್ರವೇಶ ಮಾಡ್ತಾರೆ ಅನ್ನೋದು ಈ ನಟನೆಯಿಂದ ತಿಳಿಯಿತು. ಬಹಳ ಕಷ್ಟ. ಇದಕ್ಕೆ ಸಾಕಷ್ಟು ಶ್ರಮ ಹಾಕಬೇಕು. ನಾನು ಕೂಡ ನಟಿಸುವ ಮೊದಲು ಬೇಕಾದ ಪೂರಕ ಅಭ್ಯಾಸಗಳನ್ನು ಮಾಡಿಕೊಳ್ಳುತ್ತಿದ್ದೆ. ಇನ್ನು ಮುಂದೆ ಯಾವುದೇ ಅವಕಾಶ ಬಂದರೂ ಬಿಡೋದಿಲ್ಲ. ನಟಿಸುತ್ತೇನೆ ಎಂದು ವಿಶ್ವಾಸದಿಂದ ಹೇಳಿದರು ರಘು.
ಇದನ್ನೂ ಓದಿ: actor Shivaram passes away: ಹಿರಿಯ ನಟ ಶಿವರಾಂ ನಿಧನ
Discussion about this post