ಇಂದು ಪ್ರಿಯಾಂಕ ಉಪೇಂದ್ರರ ಹುಟ್ಟುಹಬ್ಬ. ಕಳೆದ ವರ್ಷ ತಮ್ಮ ಹುಟ್ಟುಹಬ್ಬದ ದಿನದಂದೇ ಸೆಟ್ಟೇರಿದ್ದ ಉಗ್ರಾವತಾರ ಚಿತ್ರದ ಟೀಸರ್ ಈ ವರ್ಷದ ಅವರ ಹುಟ್ಟುಹಬ್ಬದಂದೇ ಹೊರಬಿದ್ದಿದೆ. ಒಂದು ವರ್ಷಗಳ ಕಾಲ ಚಿತ್ರೀಕರಣದ ಅಡೆತಡೆಗೆ ಕೋವಿಡ್ ಕಾರಣ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಗ್ಲಾಮರ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಿಯಾಂಕ ಉಪೇಂದ್ರ ಈ ಉಗ್ರಾವತಾರದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದಾರೆ. ಈ ತನಕ ನಟಿ ಮಾಲಾಶ್ರೀ ಮಾಡುತ್ತಿದ್ದ ಆಕ್ಷನ್ ಪಾತ್ರಗಳನ್ನು ಪ್ರಿಯಾಂಕ ದುರ್ಗಿ ಎಂಬ ಇನ್ಸ್ಪೆಕ್ಟರ್ ಪಾತ್ರದ ಮೂಲಕ ಟೇಕ್ ಓವರ್ ಮಾಡೋ ರೀತಿ ಕಾಣುತ್ತಿದೆ. ಮರ್ಡರ್ ಮಿಸ್ಟ್ರಿಯ ಕಥಾಹಂದರ ಹೊಂದಿರುವ ಉಗ್ರಾವತಾರ ಚಿತ್ರದಲ್ಲಿ ಪ್ರಿಯಾಂಕ ಫೈಟ್ ಕೂಡ ಮಾಡಿದ್ದಾರಂತೆ. ಮೆದು ಪಾತ್ರಗಳಿಗೆ ಹೊಂದಿಕೊಂಡಿದ್ದ ಪ್ರಿಯಾಂಕ ಈ ರೀತಿ ಆಕ್ಷನ್ ಚಿತ್ರವನ್ನು ಹೇಗೆ ಒಪ್ಪಿಕೊಂಡರು ಎನ್ನುವ ಪ್ರಶ್ನೆಗೆ ಹುಟ್ಟುಹಬ್ಬದಿನದಂದು ಅವರೇ ಕೊಟ್ಟ ಉತ್ತರ ಹೀಗಿದೆ.
ಚಿತ್ರದ ಕಥೆ ಕೇಳಿದಾಗ ನನಗೆ ಈ ಪಾತ್ರ ಮಾಡುತ್ತೀನಿ ಅನ್ನೋ ಆತ್ಮವಿಶ್ವಾಸ ಇರಲಿಲ್ಲ. ಎಷ್ಟೋ ಜನ ಈ ಪಾತ್ರ ನಿನಗೆ ಸೂಟ್ ಆಗೋಲ್ಲ ಅಂದಿದ್ದರು. ಆದರೆ, ನಾನು, ಸೂಟ್ ಆಗ್ತೀನಿ ಅಂತ ಸಾಬೀತುಪಡಿಸಲು ಈ ಚಿತ್ರ ಒಪ್ಪಿಕೊಂಡೆ. ಪಾತ್ರಕ್ಕೆ ಬೇಕಾದ ಫೈಟ್ ಕಲಿತಿದ್ದೇನೆ. ಸ್ವಲ್ಪ ವರ್ಕೌಟ್ ಕೂಡ ಮಾಡಿದ್ದೇನೆ. ಉಗ್ರಾವತಾರದಲ್ಲಿ ನಿಮಗೆ ಬೇರೆ ರೀತಿಯ ಪ್ರಿಯಾಂಕ ಕಾಣಿಸ್ತಾಳೆ ನೋಡಿ ಅಂತಾರೆ ಪ್ರಿಯಾಂಕ.
ಹೆಂಡತಿಯ ಅಭಿನಯದ ಬಗ್ಗೆ ನಟ ಉಪೇಂದ್ರರಿಗೆ ಖುಷಿ ಇದೆ. ಮಾಲಾಶ್ರೀ ಅವರು ಇಂಥ ಪಾತ್ರ ಮಾಡ್ತಾ ಇದ್ದರು. ಈಗ ಪ್ರಿಯಾಂಕ ಅಭಿನಯಿಸಿದ್ದಾರೆ. ಚಿತ್ರಕ್ಕೆ ಎಲ್ಲದಕ್ಕಿಂತ ಕಥೆ ಬಹಳ ಮುಖ್ಯ. ಅದನ್ನು ಚೆನ್ನಾಗಿ ಮಾಡಿದ್ದಾರೆ ಅಂತ ನನಗೆ ಅನಿಸ್ತಿದೆ. ಹೀಗಾಗಿ, ಪ್ರಿಯಾಂಕಾ ಭಿನ್ನವಾಗಿ ಚಿತ್ರದಲ್ಲಿ ಮೂಡಿ ಬರುವುದರಲ್ಲಿ ಆಶ್ಚರ್ಯವಿಲ್ಲ ಎಂದು ಹೆಂಡತಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು ಉಪೇಂದ್ರ.
ಗುರುಮೂರ್ತಿ ನಿರ್ದೇಶನದ ಉಗ್ರಾವತಾರ ಚಿತ್ರವನ್ನು ಎಂ.ಕೆ. ಪಿಕ್ಚರ್ಸ್ ಬ್ಯಾನರ್ ನಲ್ಲಿ ಮುನಿಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ. ಸಂಗೀತ ರಾಧಾಕೃಷ್ಣ ಬಸ್ರೂರ್, ನಂದಕುಮಾರ್ ಛಾಯಾಗ್ರಹಣವಿದೆ.
ಇದನ್ನೂ ಓದಿ: Funeral: ಮಣ್ಣಲ್ಲಿ ಮಣ್ಣಾದ ಕಾಫಿನಾಡಿನ ಅಳಿಯ ಪುನೀತ್ ರಾಜಕುಮಾರ್
Discussion about this post