ಬೆಂಗಳೂರು: ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಯವರನ್ನು ಅಂತರರಾಷ್ಟ್ರೀಯ ಪುರುಷರ ಕ್ರಿಕೆಟ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇಲ್ಲಿಯವರೆಗೂ ಈ ಹುದ್ದೆಯನ್ನು ಅಲಂಕರಿಸಿದ್ದ ಕನ್ನಡಿಗ ಅನಿಲ್ ಕುಂಬ್ಳೆ ತಮ್ಮ 9 (3 ವರ್ಷಗಳ 3 ಗರಿಷ್ಠ ಅವಧಿ) ವರ್ಷಗಳ ಸುದೀರ್ಘ ಸೇವಾ ಅವಧಿಯನ್ನು ಮುಗಿಸಿದ ನಂತರ ಅವರ ಜಾಗವನ್ನು ಸೌರವ್ ತುಂಬಿದ್ದಾರೆ.
ಈ ವಿಷಯವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ತನ್ನ ಬುಧವಾರದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. “ಈ ಹುದ್ದೆಗೆ ಸೌರವ್ ಗಂಗೂಲಿಯವರನ್ನು ಹರ್ಷದಿಂದ ಸ್ವಾಗತಿಸುತ್ತೇನೆ” ಎಂದು ಪ್ರಕಟಣೆಯ ಭಾಗವಾಗಿ ಐಸಿಸಿ ಛೇರ್ ಗ್ರೆಗ್ ಬಾರ್ಕ್ಲೇ ತಿಳಿಸಿದ್ದಾರೆ. ಒಬ್ಬ ಯಶಸ್ವೀ ಕ್ರಿಕೆಟ್ ಆಟಗಾರನಾಗಿ ಹಾಗೂ ಆಡಳಿತಗಾರನಾಗಿ ಅವರ ಅಗಾಧ ಅನುಭವವು ಕ್ರಿಕೆಟ್ ವಿಷಯದಲ್ಲಿ ನಾವು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಲಿರುವ ಪ್ರಮುಖ ನಿರ್ಧಾರಗಳಿಗೆ ಸಹಕಾರಿಯಾಗಲಿದೆ ಎಂದೂ ಅವರು ತಿಳಿಸಿದ್ದಾರೆ.
ಅವಧಿ ಮುಗಿಸಿ ನಿವೃತ್ತರಾದ ಅನಿಲ್ ಕುಂಬ್ಳೆಯವರ ಅಮೂಲ್ಯ ಸೇವೆಯನ್ನು ಪ್ರಶಂಸಿಸಿದ ಬಾರ್ಕ್ಲೇ ಅನಿಲ್ ಕುಂಬ್ಳೆಯವರ ನಾಯಕತ್ವವು ಡಿಆರ್ಎಸ್ ಪದ್ಧತಿಯನ್ನು ನಿಯಮಿತವಾಗಿ ಉಪಯೋಗಿಸುವ ಮೂಲಕ ಹಾಗೂ ಸಂಶಯಾತ್ಮಕ ಬೌಲಿಂಗ್ ಶೈಲಿಯನ್ನು ಗುರುತಿಸುವ ಉತ್ತಮ ವಿಧಾನಗಳನ್ನು ರೂಪಿಸುವ ಮೂಲಕ ಕ್ರೀಡೆಯ ಅಂತರರಾಷ್ಟ್ರೀ ಮಟ್ಟವನ್ನು ಉನ್ನತ ಮಟ್ಟಕ್ಕೇರಿಸುವಲ್ಲಿ ಅಮೂಲ್ಯ ಕಾಣಿಕೆ ನೀಡಿದೆ ಎಂದು ತಿಳಿಸಿದ್ದಾರೆ.
ಐಸಿಸಿ ವರ್ಲ್ಡ್ ಚಾಂಪಿಯನ್ಶಿಪ್ ಪಂದ್ಯಾವಳಿಯನ್ನು ಈಗಿರುವ ರೂಪದಲ್ಲೇ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿರುವ ಪ್ರಕಟಣೆಯಲ್ಲಿ ಆಪ್ಘಾನಿಸ್ತಾನದಲ್ಲಿ ಸರಕಾರವು ಬದಲಾಗಿರುವ ಕಾರಣ ಅಲ್ಲಿನ ಕ್ರಿಕೆಟ್ ಮಂಡಳಿಯ ಪ್ರಸಕ್ತ ಸ್ಥಿತಿ ಹಾಗೂ ಒಟ್ಟಾರೆ ಆಪ್ಘಾನಿಸ್ತಾನದ ಕ್ರಿಕೆಟ್ ಭವಿಷ್ಯವನ್ನು ನಿರ್ಧರಿಸಲು ಕಾರ್ಯಸಮಿತಿಯೊಂದನ್ನು ರಚಿಸಲಾಗಿದೆ ಎಂದೂ ಅವರು ತಿಳಿಸಿದರು.
Sourav Ganguly Elected As Chair of ICC Mens’ Cricket Committee After Anil Kumble’s Term Ended
ಇದನ್ನೂ ಓದಿ: World Diabetes Day: ಕ್ರಿಕೆಟ್ನಲ್ಲಿ ಮಾತ್ರವಲ್ಲದೇ ಮಧುಮೇಹದಲ್ಲೂ ಭಾರತದೊಂದಿಗೆ ಸ್ಪರ್ಧೆಗೆ ಬಿದ್ದಿರುವ ಪಾಕಿಸ್ತಾನ
ಇದನ್ನೂ ಓದಿ: Cricket again: ಯುವರಾಜ್ ಸಿಂಗ್ ಮತ್ತೆ ಕ್ರಿಕೆಟ್ ಗೆ ?
Discussion about this post