Tech News: ಜಂಪ್ ಡಿಪಾಸೆಟ್ ಸ್ಕ್ಯಾಮ್ ಇತ್ತೀಚೆಗೆ ಹೆಚ್ಚಾಗುತ್ತಿದೆ. ವಿದ್ಯಾವಂತರೇ ಈ ಸ್ಕ್ಯಾಮ್‌ಗೆ ಹೆಚ್ಚಾಗಿ ಬಲಿಯಾಗುತ್ತಿರುವುದು ಬೇಸರದ ಸಂಗತಿ. ಮೊದಲೆಲ್ಲ ಈ ಲಿಂಕ್ ಪ್ರೆಸ್ ಮಾಡಿ, ನಿಮ್ಮ ಮೊಬೈಲ್‌ಗೆ ಬಂದ ಓಟಿಪಿ ಹೇಳಿ ಎಂದು ಮೋಸಗಾರರು ಮೋಸ ಮಾಡುತ್ತಿದ್ದರು. ಆದರೆ ಇದೀಗ ಸ್ವಲ್ಪ ಮುಂದುವರೆದಿರುವ ಸ್ಕ್ಯಾಮರ್‌ಗಳು, ಹಣವನ್ನು ನಮಗೇ ಕಳುಹಿಸಿ, ನಮ್ಮ ಅಕೌಂಟ್‌ನಲ್ಲಿರುವ ಅಷ್ಟೂ ಹಣವನ್ನು ತಮ್ಮ ಪಾಲು ಮಾಡಿಕೊಳ್ಳುತ್ತಿದ್ದಾರೆ. ಇದನ್ನೇ ಜಂಪ್ ಡಿಪಾಸೆಟ್ ಎನ್ನಲಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.
ಸ್ಕ್ಯಾಮರ್ ಮೊದಲು ನಿಮ್ಮ ಅಕೌಂಟ್‌ಗೆ ಸಾವಿರದಿಂದ 2 ಸಾವಿರದವರೆಗೆ ದುಡ್ಡು ಹಾಕುತ್ತಾನೆ. ನೀವೇನಾದ್ರೂ ಯಾರು ದುಡ್ಡು ಕಳಿಸಿದ್ದು, ಬ್ಯಾಂಕ್ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡೋಣಾ ಅಂತಾ ಪಿನ್ ಹಾಕಿದ್ರೋ, ಅಲ್ಲಿಗೆ ನಿಮ್ಮ ಅಕೌಂಟ್ ಖಾಲಿ ಆದಂತೆ. ಏಕೆಂದರೆ, ಜನರ ಮೂರ್ಖತೆಯನ್ನು, ಹಣದಾಸೆಯನ್ನು ಅರಿತಿರುವ ಸ್ಕ್ಯಾಮರ್, ಹಣ ಕಳುಹಿಸುವುದರ ಜೊತೆಗೆ, ನಿಮಗೆ ವಿತ್‌ಡ್ರಾವಲ್ ರಿಕ್ವೆಸ್ಟ್ ಕಳುಹಿಸಿರುತ್ತಾನೆ.
ಹಾಗಾಗಿ ನೀವು ಗೂಗಲ್ ಪೇ, ಫೋನ್ ಪೇನಲ್ಲಿ ಪಿನ್ ಹಾಕಿದ ಬಳಿಕ, ನಿಮ್ಮ ಅಕೌಂಟ್‌ನಲ್ಲಿದ್ದ ಹಣವೆಲ್ಲ, ಸ್ಕ್ಯಾಮರ್ ಪಾಲಾಗುತ್ತದೆ. ಇಂಥ ಸ್ಕ್ಯಾಮ್‌ಗಳಿಂದ ನೀವು ತಪ್ಪಿಸಿಕೊಳ್ಳಬೇಕು ಅಂದ್ರೆ, ದುಡ್ಡ ಬಂದ ಅರ್ಧ ಗಂಟೆ ಬಳಿಕ, ಹಣ ಕಳುಹಿಸಿದ್ದು ಯಾರು..? ಬ್ಯಾಲೆನ್ಸ್ ಎಷ್ಟಿದೆ ಎಂದು ಚೆಕ್ ಮಾಡಬಹುದು. ಇದರಿಂದ ಸ್ಕ್ಯಾಮರ್ ಕಳುಹಿಸಿದ ಹಣ ನಿಮ್ಮದಾಗುವುದಲ್ಲದೇ, ವಿತ್‌ಡ್ರಾವಲ್ ರಿಕ್ವೆಸ್ಟ್ ಎಕ್ಸ್‌ಪೈರ್ ಆಗಿರುತ್ತದೆ. ಈ ವೇಳೆ ನೀವು ಪಿನ್ ಹಾಕಿ ಗೂಗಲ್ ಪೇ ಓಪನ್ ಮಾಡಿದ್ರೂ, ನಿಮ್ಮ ಅಕೌಂಟ್‌ನಿಂದ ದುಡ್ಡು ಹೋಗುವುದಿಲ್ಲ.
ಇನ್ನೊಂದು ರೀತಿಯ ಸ್ಕ್ಯಾಮ್ ಕೂಡ ಶುರುವಾಗಿದೆ. ನಿಮ್ಮ ಮೊಬೈಲ್‌ಗೆ ದುಡ್ಡು ಕ್ರೆಡಿಟ್ ಆಗಿದೆ ಎಂದು ಮೆಸೇಜ್ ಬರುತ್ತದೆ. ಆದರೆ ಅಷ್ಟು ದುಡ್ಡು ನಿಮ್ಮ ಅಕೌಂಟ್‌ಗೆ ಬಂದಿರುವುದಿಲ್ಲ. ಆದರೆ ನಿಮಗೆ ಓರ್ವ ವ್ಯಕ್ತಿ ಕಾಲ್ ಮಾಡಿ, ನಂಬರ್ ತಪ್ಪಾಗಿ ಟೈಪ್ ಮಾಡಿದ ಕಾರಣ, ನಿಮ್ಮ ಅಕೌಂಟ್‌ಗೆ ಇಂತಿಷ್ಟು ದುಡ್ಡು ಬಂದಿದೆ. ಗೂಗಲ್ ಪೇ ಥ್ರೂ ನಿಮ್ಮ ಅಕೌಂಟ್‌ಗೆ ಅಮೌಂಟ್ ಹೋಗಿದೆ. ನಿಮ್ಮ ಅಕೌಂಟ್‌ಗೆ ಕ್ರೆಡಿಟ್ ಆದಷ್ಟು ದುಡ್ಡು ಈಗಲೇ ರಿಟರ್ನ್ ಮಾಡಿ ಎನ್ನುತ್ತಾರೆ.
ಅವರು ಅದೆಷ್ಟು ಅರ್ಜೆಂಟ್ ಮಾಡುತ್ತಾರೆ ಎಂದರೆ, ನೀವು ಆ ತಕ್ಷಣವೇ ಅವರಿಗೆ ದುಡ್ಡು ಕಳಿಸಲೇಬೇಕು. ನಿಮಗೆ ಬ್ಯಾಲೆನ್ಸ್ ಚೆಕ್ ಮಾಡಲು, ಅಥವಾ ನಿಮ್ಮ ಮೊಬೈಲ್‌ಗೆ ನಿಜವಾಗಿಯೂ ಹಣ ಬಂದಿದೆಯೇ ಅಂತಲೂ ನೋಡಲು ಬಿಡುವುದಿಲ್ಲ. ಅಷ್ಟು ಅರ್ಜೆಂಟ್ ಆಗಿ ಹಣ ಕೇಳುತ್ತಾರೆ. ಆದರೆ ನೀವು ತಕ್ಷಣ ಹಣ ಕಳುಹಿಸುವ ತಪ್ಪು ಮಾತ್ರ ಮಾಡಲೇಬಾರದು.
ಮೊದಲು ಕಾಲ್ ರಿಸಿವ್ ಮಾಡಿ, ನಾನು ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿ, ಹಣ ಕ್ರೆಡಿಟ್ ಆಗಿದೆಯಾ ನೋಡಿಕೊಂಡು ಹಣ ಕಳುಹಿಸುತ್ತೇನೆ ಎಂದು ಹೇಳಿ, ಕಾಲ್ ಕಟ್ ಮಾಡಿ. ಬಳಿಕ ನಿಮ್ಮ ಮೊಬೈಲನ್ನು ಅರ್ಧ ಗಂಟೆ ಸೈಲೆಂಟ್ ಮೋಡ್‌ಗೆ ಹಾಕಿ, ನಿಮ್ಮ ಕೆಲಸ ನೀವು ಮಾಡಿ. ಅರ್ಧ ಗಂಟೆ ಬಿಟ್ಟು, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿ, ನಿಮಗೆ ನಿಜವಾಗಿಯೂ ಅಷ್ಟು ಅಮೌಂಟ್ ಕ್ರೆಡಿಟ್ ಆಗಿದೆಯಾ ಅಂತಾ ನೋಡಿ.
ಏಕೆಂದರೆ, ನಿಮ್ಮ ಅಕೌಂಟ್‌ಗೆ ಇಂತಿಷ್ಟು ಅಮೌಂಟ್ ಕ್ರೆಡಿಟ್ ಆಗಿದೆ ಎಂದು ಬರೀ ಮೆಸೇಜ್ ಬರುವ ಸಾಧ್ಯತೆ ಇರುತ್ತದೆ. ಆದ್ರೆ ಅಷ್ಟು ಅಮೌಂಟ್ ನಿಮ್ಮ ಅಕೌಂಟ್‌ಗೆ ಬಂದಿರುವುದಿಲ್ಲ. ಹಾಗಾಗಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಇದೆ ಎಂದು ನಿಮಗೆ ಈ ಮೊದಲೇ ಗೊತ್ತಿರಬೇಕು. ಬಳಿಕ ನಿಮ್ಮ ಅಕೌಂಟ್‌ಗೆ ದುಡ್ಡು ಬಂದಿದೆಯೋ ಇಲ್ಲವೋ ಎಂದು ಚೆಕ್ ಮಾಡಿ, ಹಣವನ್ನು ಕಳುಹಿಸಬೇಕೋ, ಬೇಡವೋ ಎಂದು ನಿರ್ಧರಿಸಿ.
ನಿಮ್ಮ ಅಕೌಂಟ್‌ಗೆ ದುಡ್ಡು ಕ್ರೆಡಿಟ್ ಆಗದೇ ಇದ್ದಲ್ಲಿ, ಇದೊಂದು ಸ್ಕ್ಯಾಮ್ ಎಂದು ನೀವು ಅರ್ಥ ಮಾಡಿಕೊಳ್ಳಬೇಕು. ಮತ್ತೆ ಆ ಕಡೆಯಿಂದ ಕಾಲ್ ಬಂದರೆ, ಹಣ ಕ್ರೆಡಿಟ್ ಆಗಿಲ್ಲ, ಹಣ ಕಳುಹಿಸುವುದಿಲ್ಲವೆಂದು ಹೇಳಿ. ಈ ರೀತಿ ಅನುಭವ ಪಡೆದ ವ್ಯಕ್ತಿಯೊಬ್ಬರಿಗೆ, ನಿಮ್ಮ ಅಕೌಂಟ್‌ಗೆ ಇಂತಿಷ್ಟು ಹಣ ಕ್ರೆಡಿಟ್ ಆಗಿದೆ ಎಂದು ಬಂದಿದ್ದ ಮೆಸೇಜ್, ಕೆಲ ಗಂಟೆಯಲ್ಲೇ ಡಿಲೀಟ್ ಆಗಿದ್ದು ಇದೆ. ಅವರು ಆ ನಂಬರ್‌ನ್ನು ರಿಪೋರ್ಟ್ ಕೂಡ ಮಾಡಿದ್ದಾರೆ.
ಹಾಗಾಗಿ ನಮ್ಮ ಕಷ್ಟ ಕಾಲಕ್ಕೆ ಸಹಾಯಕ್ಕೆ ಬರುವ ಆನ್‌ಲೈನ್ ಪೇಮೆಂಟ್‌ಗಳು ಎಷ್ಟು ಉತ್ತಮವೋ, ಸ್ಕ್ಯಾಮರ್‌ಗಳ ಕಣ್ಣು ಬಿದ್ದರೆ, ಅದೇ ಆನ್‌ಲೈನ್ ಪೇಮೆಂಟ್ ಮೆಥಡ್, ನಮ್ಮ ಅಕೌಂಟ್ ಖಾಲಿ ಮಾಡಿ, ನಮ್ಮನ್ನು ಕಷ್ಟಕಾಲಕ್ಕೆ ದೂಡಬಹುದು. ಎಚ್ಚರದಿಂದಿರೋಣ.
Discussion about this post