ನವದೆಹಲಿ: ಸೇನೆಯ ಅಲ್ಪಾವಧಿಯ (ಶಾರ್ಟ್ ಸರ್ವೀಸ್ ಕಮಿಷನ್) ಸೇವೆಯಿಂದ ಪೂರ್ಣಾವಧಿಗೆ (ಪರನ್ಮೆಟ್ ಕಮಿಷನ್) ನೇಮಕ ಆಗಿರುವ 39 ಮಹಿಳಾ ಅಧಿಕಾರಿಗಳ ಹೊಸ ಸೇವಾ ಸ್ಥಿತಿ ಏನೆಂಬುದನ್ನು ಇನ್ನೇಳು ಕೆಲಸದ ದಿನಗಳಲ್ಲಿ ಖಾತರಿ ಪಡಿಸುವಂತೆ ಸುಪ್ರೀಂಕೋಟ್೯ ಕೇಂದ್ರ ಸರ್ಕಾರ ಮತ್ತು ಸೇನೆಗೆ ಶುಕ್ರವಾರ ಸೂಚಿಸಿದೆ.
ಅಲ್ಪಾವಧಿ ಸೇವೆಯು 10 ವರ್ಷವಾಗಿದ್ದು ಈ ವಿಭಾಗದ ಹುದ್ದೆಗಳಿಗೆ ಮಾತ್ರ ಮಹಿಳೆಯರನ್ನು ನೇಮಕ ಮಾಡಿಕೊಳ್ಳುತ್ತಿತ್ತು. ಮಹಿಳೆಯರ ದೇಹ ಪ್ರಕೃತಿ, ಶ್ರಮದಾಯಕ ಕೆಲಸ, ತಾಯ್ತನ ಇನ್ನಿತರ ಕಾರಣ ನೀಡಿ ಪೂರ್ಣಾವಧಿಗೆ ಸೇವೆಗೆ (ನಿವೃತ್ತರಾಗುವವರೆಗೆ) ಮಹಿಳೆಯರನ್ನು ಪರಿಗಣಿಸುತ್ತಿರಲಿಲ್ಲ. 10 ವರ್ಷದ ಸೇವೆಯ ನಂತರವೂ ಸೇನೆಯಲ್ಲಿ ಮುಂದುವರಿಯಲು ಬಯಸಿದ ಮಹಿಳಾ ಅಧಿಕಾರಿಗಳಿಗೆ ನಾಲ್ಕು ವರ್ಷ ವಿಸ್ತರಣೆಯಷ್ಟೆ ಈ ಮೊದಲು ಸಿಗುತ್ತಿತ್ತು.
ಪೂರ್ಣಾವಧಿ ಸೇವೆ ನಿರಾಕರಿಸಲಾದ 71 ಮಹಿಳಾ ಅಧಿಕಾರಿಗಳು, ಸೇನೆಯ ಲಿಂಗತಾರತಮ್ಯದ ವಿರುದ್ಧ ಕಳೆದ ವರ್ಷ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸರ್ವೋನ್ನತ ನ್ಯಾಯಾಲಯ, ಈಗ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಪುರುಷರ ಸರಿಸಮಾನವಾಗಿದ್ದಾರೆ. ಸೇನೆಯಲ್ಲೂ ಅವಕಾಶ ಸಿಕ್ಕರೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಾರೆ. ಆದರೆ, ಸರ್ಕಾರ ಮತ್ತು ಸೇನೆ ಇನ್ನೂ ಪುರುಷ ಪ್ರಧಾನ ಮನಸ್ಥಿತಿಯಲ್ಲೇ ಇವೆ ಎಂದು ತಪರಾಕಿ ಹಾಕಿತ್ತು.
ಅಲ್ಪಾವಧಿ ಸೇವೆಯಲ್ಲಿರುವ ಮಹಿಳಾ ಅಧಿಕಾರಿಗಳು ಸೇವೆ ಮುಂದುವರಿಸಲು ಇಚ್ಛಿಸಿದರೆ ಅರ್ಹರನ್ನು ಪೂಣಾವಧಿ ಸೇವೆಗೆ ಪರಿಗಣಿಸಲು ಸಮಿತಿ ರಚಿಸಿ ನೇಮಕ ಪ್ರಕ್ರಿಯೆ ಆರಂಭಿಸಬೇಕು ಎಂದು ನಿರ್ದೇಶನ ನೀಡಿತ್ತು. ಈ ಪ್ರಕ್ರಿಯೆ ವಿಳಂಬ ಮಾಡಿದ ಸರ್ಕಾರದ ಕಿವಿಹಿಂಡಿ, ಸಬೂಬು ಸಲ್ಲದು, ಕಾರ್ಯ ಆಗಬೇಕು ಎಂದು ತಾಕೀತು ಮಾಡಿತ್ತು. ನಂತರ ಮಹಿಳಾ ಅಧಿಕಾರಿಗಳಿಗಾಗಿಯೇ ಪೂರ್ಣಾವಧಿ ಆಯೋಗವನ್ನು ಹೊಸದಾಗಿ ರಚಿಸಿದ ಸರ್ಕಾರ, 71 ಮಹಿಳಾ ಅಧಿಕಾರಿಗಳ ಪೈಕಿ 39 ಮಂದಿ ಅರ್ಹರು ಎಂದು ಹೇಳಿತು. ಉಳಿದವರಲ್ಲಿ ಏಳು ಮಂದಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು 25 ಮಂದಿಯ ಶಿಸ್ತು ತೃಪ್ತಿಕರ ವಾಗಿಲ್ಲ ಎಂದು ತಿಳಿಸಿತು.
ಆದರೆ, ಈ 25 ಮಂದಿಯ ಕುರಿತು ವಿಸ್ತೃತ ವರದಿ ನೀಡುವಂತೆ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಬಿ.ವಿ.ನಾಗರತ್ನ ಅವರನ್ನು ಒಳಗೊಂಡ ನ್ಯಾಯಪೀಠ ಸೂಚಿಸಿದೆ. ಅ.1ರ ವಿಚಾರಣೆಯಲ್ಲಿ ಯಾವುದೇ ಮಹಿಳಾ ಅಧಿಕಾರಿಯನ್ನು ಸೇವೆಯಿಂದ ಬಿಡುಗಡೆ ಮಾಡಬಾರದು ಎಂದು ಪೀಠ ಹೇಳಿತ್ತು.
Women in Indian Army Gets Permanent Commission
ಇದನ್ನೂ ಓದಿ: ಕಾಶ್ಮೀರದ ಶೋಪಿಯಾನ್ ನಲ್ಲಿ ಇಬ್ಬರು ಉಗ್ರರು ಬಲಿ
ಇದನ್ನೂ ಓದಿ: Kashmir: ಕಾಶ್ಮೀರದಲ್ಲಿ ನಾಗರಿಕರ ಮೇಲಿನ ದಾಳಿ: ಪಾಕಿಸ್ತಾನದ ಐಎಸ್ಐ ಹಸ್ತಕ್ಷೇಪ
Discussion about this post