ಪಾಟ್ನಾ: ನ್ಯಾಯದಾನ ವಿಳಂಬವು ನ್ಯಾಯದ ನಿರಾಕರಣೆ ಎಂದು ಕಾನೂನಿನ ಪರಿಭಾಷೆಯಲ್ಲಿ ಹೇಳಲಾಗುತ್ತದೆ. ಆದರೆ, ಬಿಹಾರದ ಅರಾರಿಯಾ ಜಿಲ್ಲೆಯ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಅಡಿಯ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯವು ಒಂದೇ ದಿನದಲ್ಲಿ ಸಾಕ್ಷ್ಯಗಳ ಹೇಳಿಕೆ ದಾಖಲು ಮಾಡಿಕೊಂಡು, ವಾದ, ಪ್ರತಿವಾದ ಆಲಿಸಿ, ಸಾಕ್ಷ್ಯಗಳ ಪಾಟೀಸವಾಲು ನಡೆಸಿ ಅಪರಾಧಿಗೆ ಜೀವಾವಧಿ ಸಜೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿದೆ. ಅತ್ಯಾಚಾರ ಸಂತ್ರಸ್ತರ ಪರಿಹಾರ ನಿಧಿಯಿಂದ ಸಂತ್ರಸ್ತ ಬಾಲಕಿಗೆ 7 ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ಆದೇಶಿಸಿದೆ.
ಈ ರೀತಿ ಒಂದೇ ದಿನದಲ್ಲಿ ಪ್ರಕರಣದ ಎಲ್ಲ ವಿಚಾರಣೆಯನ್ನು ಮುಗಿಸಿ ತೀರ್ಪು ನೀಡಿದ ಬಹುಶಃ ದೇಶದಲ್ಲಿ ಮೊದಲ ಪ್ರಕರಣ ಇದಾಗಿದೆ. 2018ರ ಆಗಸ್ಟ್ 8ರಂದು ಮಧ್ಯಪ್ರದೇಶದ ಡಾಟಿಯಾದ ಕೋರ್ಟ್ ಮೂರು ದಿನ ವಿಚಾರಣೆ ನಡೆಸಿ ತೀರ್ಪು ನೀಡಿತ್ತು.
ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಶಿಕಾಂತ ರೈ ಕಳೆದ ಅಕ್ಟೋಬರ್ 4ರಂದು ಈ ಪ್ರಕರಣದ ವಿಚಾರಣೆ ನಡೆಸಿ ಅವತ್ತೆ ತೀರ್ಪು ನೀಡಿದ್ದಾರೆ. ಆದರೆ ಇದು ಈಗ ಬೆಳಕಿಗೆ ಬಂದಿದೆ.
ಪ್ರಕರಣದ ತನಿಖಾಧಿಕಾರಿಯೂ ಸಂಶಯಕ್ಕೆ ಆಸ್ಪದ ಇಲ್ಲದಂತೆ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಸ್ಥಳದ ಮಹಾಜರು, ಸಂತ್ರಸ್ತೆಯ ಪರೀಕ್ಷೆ, ಹೇಳಿಕೆ ಪಡೆಯುವುದರಿಂದ ಹಿಡಿದು ಸಾಕ್ಷ್ಯ ಸಂಗ್ರಹವನ್ನು ಸಮಪರ್ಕವಾಗಿ ದಾಖಲಿಸಿದ್ದಾರೆ. ಆರೋಪಿಯ ಪರ ವಕೀಲರು ಘಟನೆ ನಡೆದ ಸ್ಥಳದ ಬಗ್ಗೆ ಯಾವುದೇ ತಕರಾರು ಎತ್ತಲಿಲ್ಲ’ ಎಂದು ರೈ ತಮ್ಮ 20 ಪುಟಗಳ ತೀಪಿರ್ನಲ್ಲಿ ಉಲ್ಲೇಖಿಸಿದ್ದಾರೆ.
ಈ ಪ್ರಕರಣವು ಕಳೆದ ಜುಲೈ 22ರಂದು ನಡೆದಿತ್ತು. 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಜುಲೈ 23ರಂದು ಎಫ್ಐಆರ್ ದಾಖಲಾಗಿ ಸೆಪ್ಟೆಂಬರ್ 24ರಂದು ಆರೋಪಿಯ ವಿರುದ್ಧ ಆರೋಪ ನಿಗದಿ ಮಾಡಲಾಯಿತು. ಈ ಪ್ರಕರಣದ ತನಿಖೆಯನ್ನು ಅರಾರಿಯಾ ಮಹಿಳಾ ಠಾಣೆಯ ಅಧಿಕಾರಿ ರೀಟಾ ಕುಮಾರಿ ನಡೆಸಿದ್ದರು ಎಂದು ಸರ್ಕಾರಿ ವಕೀಲೆ ಶ್ಯಾಮಲಾ ಯಾದವ್ ಹೇಳಿದ್ದಾರೆ.
Bihar POCSO Special Court Verdict In One Day
ಇದನ್ನು ಓದಿ: ಕೇವಲ 9 ದಿನಗಳಲ್ಲಿ ನ್ಯಾಯಾಲಯ ತೀರ್ಪು: ಪೊಕ್ಸೊ ಆರೋಪಿಗೆ 25 ವರ್ಷ ಜೈಲು
ಇದನ್ನೂ ಓದಿ:ಬಾಲಕಿ ಮೇಲೆ ಪರಿಚಿತರಿಂದಲೇ ಅತ್ಯಾಚಾರ: 24 ಆರೋಪಿಗಳು ಅಂದರ್
Discussion about this post