ಮುಂಬೈ: ೩೪ರ ಮಹಿಳೆಯ ಮೇಲೆ ಬರ್ಬರ ಅತ್ಯಾಚಾರ, ಗುಪ್ತಾಂಗಗಳಿಗೆ ರಾಡ್ ನಿಂದ ಹಲ್ಲೆ ನಡೆಸಿ ಸಾವನ್ನಪ್ಪುವಂತೆ ಮಾಡಿದ ದುರ್ಘಟನೆಯ ಬೆನ್ನಲ್ಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದಿದ್ದು ವರದಿಯಾಗಿದೆ. ೧೫ ವರ್ಷದ ಬಾಲೆ ಉಲ್ಲಾಸನಗರದ ರೈಲ್ವೇ ಸ್ಟೇಶನ್ ಆವರಣದಲ್ಲಿರುವ ರೈಲ್ವೆ ವಸತಿಗೃಹದಲ್ಲಿ ಈ ಅತ್ಯಾಚಾರ ನಡೆದಿದೆ ಎಂದು ರೈಲ್ವೆ ಪೊಲೀಸ್ ತಿಳಿಸಿದ್ದು, ಆರೋಪಿಯನ್ನು ಪೊಕ್ಸೊ (POCSO) ಕಾಯ್ದೆಯಡಿ ಕೇಸ್ ದಾಖಲಾಗಿದೆ.
ಘಟನೆ ವಿವರ: ಬಾಲಕಿ ಶಿರಡಿಯಿಂದ ವಾಪಸ್ ಬರುತ್ತಿದ್ದಳು. ಭಿವಂದಿ ಬೈಪಾಸ್ ಬಳಿ ರೈಲಿನಿಂದ ಇಳಿದುಕೊಂಡಳು. ನಂತರ ಕಲ್ಯಾಣ್ಗೆ ತೆರಳಿ ಉಲ್ಲಾಸನಗರಕ್ಕೆ ಹೋಗುವ ಲೋಕಲ್ ರೈಲನ್ನು ಹತ್ತಿದ್ದಳು. ಉಲ್ಲಾಸನಗರದಲ್ಲಿ ರಾತ್ರಿ 9ಗಂಟೆಗೆ ಅವಳು ಇಳಿದಾಗ ಆಕೆಗೆ ಇಬ್ಬರು ಸ್ನೇಹಿತರು ಸಿಕ್ಕಿದ್ದಾರೆ. ಆಗ ಮೂವರೂ ಸ್ಕೈವಾಕ್ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಯೊಬ್ಬ ಹತ್ತಿರ ಬಂದಿದ್ದಾನೆ.
ಆತ ತನ್ನ ಬಳಿ ಇದ್ದ ಸುತ್ತಿಗೆಯಿಂದ ಬಾಲಕಿಯ ಸ್ನೇಹಿತರನ್ನು ಹೆದರಿಸಿದ. ಅವರಿಬ್ಬರೂ ಓಡಿದ ನಂತರ ಈಕೆಯನ್ನು ಅಪಹರಿಸಿ, ರೇಪ್ ಮಾಡಿದ್ದಾನೆಂದು ರೈಲ್ವೆ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ. ಆ ಬಾಲಕಿ ರಾತ್ರಿಯಿಡೀ ಸಂಕಷ್ಟಪಟ್ಟು, ಬೆಳಗ್ಗೆ ಅಲ್ಲಿಂದ ಪಾರಾಗಿದ್ದಾಳೆ. ನಂತರ ತನ್ನ ಸ್ನೇಹಿತೆಯೊಬ್ಬಳಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾಳೆ. ಆ ಸ್ನೇಹಿತೆ ನಮಗೆ ತಿಳಿಸಿದಳು ಎಂದು ಕಮಿಷನರ್ ಮಾಹಿತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಎರಡು ಠಾಣೆಗಳಲ್ಲಿ ದೂರಿಗೆ ನಕಾರ: ಬಾಲಕಿ ಅತ್ಯಾಚಾರಕ್ಕೆ ಒಳಗಾಗಿ ಕಷ್ಟಪಡುತ್ತಿದ್ದರೆ, ಎರಡು ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದು ನಿಜಕ್ಕೂ ವಿಷಾದನೀಯ. ಈ ಎರಡೂ ಠಾಣೆಗಳ ಸಿಬ್ಬಂದಿ, ಕ್ರೈಂ ನಮ್ಮ ಠಾಣೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಪ್ರಕರಣ ದಾಖಲಿಸಲಿಲ್ಲ. ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ ಬಗ್ಗೆಯೂ ತನಿಖೆ ನಡೆಸುತ್ತೇವೆ. ಸದ್ಯ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಂದ ಕೌನ್ಸಲಿಂಗ್ಗೆ ಕರೆದೊಯ್ಯಲಾಗುತ್ತದೆ ಎಂದು ರೈಲ್ವೆ ಕಮಿಷನರ್ ಖಾಲಿದ್ ಮಾಹಿತಿ ನೀಡಿದ್ದಾರೆ.

























Discussion about this post