ನವದೆಹಲಿ: ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಉಪನಾಯಕನಾಗಿ ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ, ಏಕದಿನ ಮತ್ತು ಟ್ವೆಂಟಿ–20 ಎರಡೂ ಮಾದರಿಯ ಕ್ರಿಕೆಟ್‌ನಲ್ಲಿ ರಾಹುಲ್ ಅವರು ಉಪನಾಯಕನಾಗಲಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟ್ವೆಂಟಿ–20 ಸರಣಿಯಲ್ಲಿ ಉಪನಾಯಕನಾಗಿ ಕರ್ತವ್ಯ ನಿರ್ವಹಿಸಿದ್ದ ರಾಹುಲ್ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಉಪನಾಯಕನಾಗಿ ಮುಂದುವರಿಯಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗೆ ಈ ತಿಂಗಳ ಕೊನೆಯಲ್ಲಿ ತಂಡದ ಆಯ್ಕೆ ನಡೆಯಲಿದ್ದು, ಅದೇ ವೇಳೆ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆ ಇದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ‘ಇಂಡಿಯಾ ಸ್ಪೋರ್ಟ್’ ಸುದ್ದಿತಾಣಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಟ್ವೆಂಟಿ–20 ಆಯ್ತು, ಇನ್ನು ಏಕದಿನ ಕ್ರಿಕೆಟ್‌ಗೂ ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕ
ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾಕ್ಕೆ ರೋಹಿತ್ ಶರ್ಮಾ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ ಎಂದು ಬುಧವಾರ ಬಿಸಿಸಿಐ ತಿಳಿಸಿತ್ತು.
ಐಸಿಸಿ ಟ್ವೆಂಟಿ–20 ವಿಶ್ವಕಪ್ ಬಳಿಕ ಭಾರತದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಟ್ವೆಂಟಿ–20 ಸರಣಿಯ ನಾಯಕತ್ವವನ್ನು ರೋಹಿತ್ ವಹಿಸಿಕೊಂಡಿದ್ದರು. ನಾಯಕನಾಗಿ ಮೊದಲ ಸರಣಿಯಲ್ಲೇ ಎಲ್ಲ ಮೂರು ಪಂದ್ಯಗಳನ್ನೂ ಗೆಲ್ಲುವ ಮೂಲಕ ರೋಹಿತ್ ಉತ್ತಮ ಆರಂಭ ಪಡೆದಿದ್ದರು. ಭಾರತ ತಂಡವು ಇದೇ ವಾರ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, 3 ಏಕದಿನ ಮತ್ತು 3 ಟೆಸ್ಟ್ ಪಂದ್ಯಗಳನ್ನು ಆಡಲಿದೆ.
Discussion about this post