ಸೆಂಚುರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ಗೆ ದಿನಗಣನೆ ಆರಂಭವಾಗಿದ್ದು, ಟೀಂ ಇಂಡಿಯಾ ಆಟಗಾರರ ಅಭ್ಯಾಸ ಭರದಿಂದ ಸಾಗಿದೆ. ಈ ಮಧ್ಯೆ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಮಾಡಿದ್ದ ಬ್ಯಾಟಿಂಗ್ ಸಾಧನೆಯನ್ನು ಹಿಂದಿಕ್ಕುವತ್ತ ನಾಯಕ ವಿರಾಟ್ ಕೊಹ್ಲಿ ಚಿತ್ತ ನೆಟ್ಟಿದ್ದಾರೆ.
ದ್ರಾವಿಡ್ ಅವರ ಇಡೀ ಕ್ರಿಕೆಟ್ ವೃತ್ತಿಜೀವನದ ರನ್ ಜತೆ ಹೋಲಿಕೆ ಮಾಡಿದರೆ ದಕ್ಷಿಣ ಆಫ್ರಿಕಾದಲ್ಲಿ ಅವರ ಸರಾಸರಿ ಗಳಿಗೆ ಕಡಿಮೆಯೇ ಇದೆ. ಅವರು ದಕ್ಷಿಣ ಆಫ್ರಿಕಾದಲ್ಲಿ ಒಟ್ಟು 22 ಇನ್ನಿಂಗ್ಸ್ ಆಡಿದ್ದು, 29.71ರ ಸರಾಸರಿಯೊಂದಿಗೆ 624 ರನ್ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಎರಡು ಅರ್ಧಶತಕಗಳು ಸೇರಿವೆ.
ಕೊಹ್ಲಿ ಅವರು 2 ಶತಕ ಹಾಗೂ 2 ಅರ್ಧಶತಕ ಗಳಿಸಿ ಕೇವಲ 10 ಇನ್ನಿಂಗ್ಸ್‌ಗಳಲ್ಲಿ 55.80ರ ಸರಾಸರಿಯೊಂದಿಗೆ 558 ರನ್ ಗಳಿಸಿದ್ದಾರೆ. ದ್ರಾವಿಡ್ ಅವರು ಗಳಿಸಿರುವ ಒಟ್ಟು ರನ್ ಹಿಂದಿಕ್ಕಲು ಕೊಹ್ಲಿಗೆ ಇನ್ನು ಬೇಕಾಗಿರುವುದು ಕೇವಲ 66 ರನ್‌ಗಳು.
ಇದನ್ನೂ ಓದಿ: IND vs SA Test Cricket: ಮುಂದಿನ ಮೂರು ದಿನಗಳ ಅಭ್ಯಾಸ ನಿರ್ಣಾಯಕವೆಂದ ರಾಹುಲ್ ದ್ರಾವಿಡ್
ಆದರೆ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗಿಂತ ಕೊಹ್ಲಿ ತುಂಬಾ ಹಿಂದಿದ್ದಾರೆ. ಸಚಿನ್ ಅವರು ದಕ್ಷಿಣ ಆಫ್ರಿಕಾದಲ್ಲಿ 15 ಟೆಸ್ಟ್‌ಗಳನ್ನು ಆಡಿದ್ದು, 46.44ರ ಸರಾಸರಿಯೊಂದಿಗೆ 1,161 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕಗಳು ಹಾಗೂ 3 ಅರ್ಧಶತಕಗಳು ಸೇರಿವೆ.
ದಕ್ಷಿಣ ಆಫ್ರಿಕಾ ವಿರುದ್ಧ ಒಟ್ಟಾರೆಯಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದವರ ಪೈಕಿ ಕೊಹ್ಲಿ ಸದ್ಯ ನಾಲ್ಕನೇ ಸ್ಥಾನದಲ್ಲಿದ್ದಾರೆ.
Discussion about this post