ಸೆಂಚುರಿಯನ್: ಇಲ್ಲಿನ ಸೂಪರ್‌ಸ್ಪೋರ್ಟ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಆರಂಭಕ್ಕೆ ಕೆಲವೇ ದಿನಗಳಿರುವ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.
ಸೋಮವಾರ ನಡೆದ ಮೂರನೇ ದಿನದ ತರಬೇತಿಯ ಚಿತ್ರಗಳನ್ನು ಬಿಸಿಸಿಐ ಟ್ವೀಟ್ ಮಾಡಿದ್ದು, ಕ್ರಿಕೆಟ್ ಪ್ರಿಯರ ಗಮನ ಸೆಳೆದಿದೆ. ಕಾರಣವಿಷ್ಟೆ, ಬ್ಯಾಟಿಂಗ್ ಕಿಂಗ್ ಎಂದೇ ಖ್ಯಾತರಾಗಿರುವ ನಾಯಕ ವಿರಾಟ್ ಕೊಹ್ಲಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬ್ಯಾಟಿಂಗ್ ಟಿಪ್ಸ್ ನೀಡುತ್ತಿರುವ ಚಿತ್ರ ಅದರಲ್ಲಿದೆ. ಈ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
ಕೊಹ್ಲಿ ಕೂಡ ಕಳೆದೆರಡು ವರ್ಷದಿಂದ ಅಷ್ಟೇನೂ ಉತ್ತಮ ಫಾರ್ಮ್‌ನಲ್ಲಿಲ್ಲ. 2019ರ ನವೆಂಬರ್ ಬಳಿಕ ಅವರ ಬ್ಯಾಟ್‌ನಿಂದ ಒಂದೇ ಒಂದು ಶತಕವೂ ದಾಖಲಾಗಿಲ್ಲ. ಅಲ್ಲದೆ, 13 ಟೆಸ್ಟ್ ಪಂದ್ಯಗಳಲ್ಲಿ ಸರಾಸರಿ 26 ರನ್ ಗಳಿಸಿದ್ದಾರೆ. ಗರಿಷ್ಠ 74 ರನ್ ಗಳಿಸಿದ್ದೇ ಎರಡು ವರ್ಷಗಳಲ್ಲಿ ಅವರ ಪ್ರಮುಖ ಸಾಧನೆಯಾಗಿದೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್: ಕೋಚ್ ರಾಹುಲ್ ದ್ರಾವಿಡ್ ದಾಖಲೆ ಹಿಂದಿಕ್ಕುವತ್ತ ಕೊಹ್ಲಿ ಚಿತ್ತ
ಟ್ವೆಂಟಿ–20 ವಿಶ್ವಕಪ್ ಸೋಲಿನ ಬಳಿಕ ಕೊಹ್ಲಿ ವಿಶ್ರಾಂತಿ ಪಡೆದು ತಂಡದಿಂದ ಹೊರಗಿದ್ದರು. ಟ್ವೆಂಟಿ–20 ನಾಯಕತ್ವನ್ನೂ ಬಿಟ್ಟುಕೊಟ್ಟು ನಿರಾಳರಾಗಿದ್ದಾರೆ. ಟ್ವೆಂಟಿ–20 ಹಾಗೂ ಏಕದಿನ ಮಾದರಿಯ ಕ್ರಿಕೆಟ್ ತಂಡಕ್ಕೆ ಇಬ್ಬರು ನಾಯಕರು ಬೇಡವೆಂಬ ತೀರ್ಮಾನಕ್ಕೆ ಬಂದಿರುವ ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ. ಹೀಗಾಗಿ ಉಳಿದೆರಡು ಮಾದರಿಯ ನಾಯಕತ್ವದ ಹೊಣೆಗಾರಿಕೆ ಇಲ್ಲದಿರುವುದು ವಿರಾಟ್ ಅವರನ್ನು ನಿರಾಳರನ್ನಾಗಿಸಿದೆ.
ವಿಶ್ರಾಂಂತಿಯ ಬಳಿಕ ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ ತಂಡಕ್ಕೆ ಮರಳಿದ್ದ ಕೊಹ್ಲಿ ಇದೀಗ ದಕ್ಷಿಣ ಆಫ್ರಿಕಾದಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುವ ಉತ್ಸಾಹದಲ್ಲಿದ್ದಾರೆ.
— BCCI (@BCCI) December 20, 2021
Discussion about this post