Fairy Tales: ಒಂದೂರಲ್ಲಿ ಓರ್ವ ದೈವೀ ಶಕ್ತಿಯುಳ್ಳ ಬಾಬಾ ವಾಸವಿದ್ದರು. ಅವರು ವಾಸವಿದ್ದ ಕೊಠಡಿ ಚಿಕ್ಕದಾಗಿತ್ತು. ಹಾಗಾಗಿ ಅವರು ಅಡಿಗೆ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಹೀಗಾಗಿ ಊರ ಜನರಲ್ಲಿ ಒಂದೊಂದು ಮನೆಯವರಂತೆ ಪ್ರತಿದಿನ ಒಬ್ಬೊಬ್ಬರು ಬಾಬಾಗೆ ಊಟ ತಂದು ಕೊಡುತ್ತಿದ್ದರು. ಅದರಂತೆಯೇ ಬಾಬಾ ಕೂಡ ಆ ಊರಿನ ಜನರಿಗೆ ಎಂಥದ್ದೇ ಸಂಕಷ್ಟ ಬಂದರೂ ಅದನ್ನು ಪರಿಹರಿಸಿ ಕೊಡುತ್ತಿದ್ದರು. ಅಲ್ಲದೇ ಬಾಬಾರಿಗೆ ಬೇರೆ ಬೇರೆ ರೂಪ ತಾಳುವ ಶಕ್ತಿ ಕೂಡ ಇತ್ತು.
ಒಂದು ದಿನ ಏನಾಯಿತೆಂದರೆ, ಶಾಂತಾಬಾಯಿ ಎಂಬಾಕೆ ತಾನು ಈದಿನ ಬಾಬಾರಿಗೆ ಅಡಿಗೆ ಮಾಡಿ ಕೊಡಬೇಕು. ರುಚಿ ರುಚಿಯಾದ ಚಪಾತಿ, ಪಲ್ಯ, ಪಾಯಸ ಮಾಡಿ ಉಣಬಡಿಸಬೇಕು ಎಂದು ಅಡಿಗೆ ತಯಾರಿಸಲು ಸಿದ್ಧಳಾಗುತ್ತಾಳೆ. ಮೊದಲು ಪಾಯಸ ತಯಾರಿಸಿ, ನಂತರ ಪಲ್ಯ ತಯಾರಿಸಿ, ಬಳಿಕ ಚಪಾತಿ ಮಾಡಲು ಕುಳಿತುಕೊಳ್ಳುತ್ತಾಳೆ.
ಘಮಘಮಿಸುವ ಚಪಾತಿ ಪರಿಮಳಕ್ಕೆ ಮನಸೋತ ನಾಯಿಯೊಂದು ಶಾಂತಾಬಾಯಿಯ ಮನೆ ಬಾಗಿಲ ಬಳಿ ಬಂದು ಬೌ ಬೌ ಎಂದು ಬೊಗಳ ತೊಡಗಿತು. ಶಾಂತಾ ಬಾಯಿ ಹಚಾ ಹಚಾ ಎಂದು ಬೈದು ನಾಯಿಯನ್ನ ಓಡಿಸಿದಳು. ಆದರೂ ಬಿಡದ ನಾಯಿ ಚಪಾತಿ ಬೇಕೆಂದು ಮತ್ತೆ ಮನೆ ಬಳಿ ಬಂದು ಬೊಗಳ ತೊಡಗಿತು. ಮತ್ತೆ ಶಾಂತಾ ಬಾಯಿ ನಾಯಿಯನ್ನು ಓಡಿಸಿದಳು. ಆದರೂ ಬಿಡದ ನಾಯಿ ಮೂರನೇ ಬಾರಿ ಬಂದು ಬೊಗಳಿತು. ಈ ಬಾರಿ ಕೋಪಗೊಂಡ ಶಾಂತಾಬಾಯಿ ಲಟ್ಟಣಿಗೆಯಿಂದ ಬಡಿದು ನಾಯಿಯ ಕಾಲು ಮುರಿದಳು. ಪೆಟ್ಟು ತಿಂದ ನಾಯಿ, ಕುಂಟುತ್ತ ಹೊರನಡೆಯಿತು.
ಶಾಂತಾಬಾಯಿ ಖುಷಿ ಖುಷಿಯಿಂದ ಚಪಾತಿ ಮಾಡುವುದನ್ನು ಮುಂದುವರಿಸಿದಳು. ಇದೀಗ ಬೆಕ್ಕಿನ ಸರದಿ. ಪಾಯಸದ ಪರಿಮಳಕ್ಕೆ ಮನಸೋತ ಬೆಕ್ಕು, ಮಿಯಾವ್ ಮಿಯಾವ್ ಎನ್ನುತ್ತ ಶಾಂತಾಬಾಯಿ ಮನೆಗೆ ಬಂತು. ನಾಯಿಯಂತೆ ಬೆಕ್ಕು ಕೂಡ, ಪಾಯಸಕ್ಕಾಗಿ ಹಠ ಮಾಡಿ, ಪೆಟ್ಟು ತಿಂದು, ಪೆಚ್ಚು ಮೋರೆ ಹಾಕಿ ಹೋಯಿತು.
ಅಂತೂ ಇಂತು ಬಾಬಾರಿಗಾಗಿ ಪಾಯಸ, ಪಲ್ಯ, ಚಪಾತಿ, ಅನ್ನ- ಸಾರು ಇತ್ಯಾದಿಗಳನ್ನು ಮಾಡಿದ ಶಾಂತಾಬಾಯಿ, ಅವನ್ನೆಲ್ಲ ಡಬ್ಬಿಗೆ ತುಂಬಿಸಿ, ಬಾಬಾರಿಗೆ ಕೊಡಲು ಬಾಬಾ ವಾಸವಿರುವ ಜಾಗಕ್ಕೆ ಹೋದಳು. ಹೋದಂತೆ ಬಾಬಾರ ಕಾಲಿಗೆ ನಮಸ್ಕರಿಸಿ, ಊಟ ಬಡಿಸಲು ಮುಂದಾದಳು. ಆದರೆ ಬಾಬಾ ಮೈ ಕೈ ಗಾಯ ಮಾಡಿಕೊಂಡು ಹೆದರಿಕೊಂಡಂತೆ ಕೂತಿದ್ದರು. ನೀರು ಕುಡಿಯಲು ಹೋಗುವಾಗ ಕುಂಟುತ್ತಿದ್ದರು. ಇದನ್ನು ನೋಡಿ ಕಂಗಾಲಾದ ಶಾಂತಾ ಬಾಯಿ, ಅಯ್ಯೋ ಶಿವನೇ, ಬಾಬಾ ಇದೇನಿದು, ದೈವೀ ಪುರುಷರಾದ ನಿಮಗೆ ಗಾಯವಾಗಿದೆ. ಕಾಲಿಗೆ ಪೆಟ್ಟಾಗಿದೆ. ಯಾರಾದರೂ ಹೊಡೆದರೆ, ಯಾರು ಆ ಪಾಪಿ ಎಂದು ಹೇಳಿ, ಊರಿನ ಜನರನ್ನೆಲ್ಲ ಒಟ್ಟುಗೂಡಿಸಿ, ಅವನಿಗೆ ಪಾಠ ಕಲಿಸಿ ಬರುತ್ತೇನೆ ಎಂದು ಒಂದೇ ಸಮನೆ ಕೋಪಗೊಂಡು, ಕಣ್ಣೀರು ಹಾಕಿದಳು.
ಆಗ ಮಾತನಾಡಿದ ಬಾಬಾ, ಏನಿಲ್ಲ ಬಿಡು ಶಾಂತಾಬಾಯಿ. ಬಂದ ವಿಷಯವೇನು ಮೊದಲು ಅದನ್ನು ಹೇಳು ಎಂದು ಕೇಳುತ್ತಾರೆ. ಅದಕ್ಕೆ ಶಾಂತಾ ಬಾಯಿ, ಬಾಬಾ ಇಂದು ನಾನು ನಿಮಗಾಗಿ ಚಪಾತಿ, ಪಲ್ಯ, ಪಾಯಸದ ಅಡಿಗೆ ಮಾಡಿ ತಂದಿದ್ದೇನೆ. ಇದನ್ನು ತಿಂದು ನನ್ನನ್ನು ಆಶಿರ್ವದಿಸಬೇಕು ನೀವು ಎಂದು ಕೇಳುತ್ತಾಳೆ.
ಆದರೆ ಆ ಊಟದ ಬುತ್ತಿಯನ್ನ ಕಂಡ ಬಾಬಾ, ಹೆದರಿ ದೂರ ಸರಿಯುತ್ತಾರೆ. ನೀ ಮಾಡಿದ ಅಡುಗೆ ತಿನ್ನಬೇಕೆ..? ಬೇಡಪ್ಪ ಬೇಡ ನಿನ್ನ ಸಹವಾಸವೂ ಬೇಡ, ನಿನ್ನ ಅಡುಗೆ ಸಹವಾಸವೂ ಬೇಡ. ಈಗ ಕೆಲ ಹೊತ್ತಿನ ಮುಂಚೆ ನಿನ್ನ ಮನೆಯಿಂದ ಬರುತ್ತಿದ್ದ ಮೃಷ್ಟಾನ್ನದ ಘಮಕ್ಕೆ ಮನಸೋತು, ಅದನ್ನು ಸವಿಯಲು ನಿನ್ನ ಮನೆಗೆ ಬಂದಿದ್ದೆ. ಆದರೆ ನೀನು ಸರಿಯಾಗಿ ಪೆಟ್ಟು ಕೊಟ್ಟು, ನನ್ನ ಮೈ ಕೈ ಗಾಯ ಮಾಡಿದೆ ಎಂದು ಹೇಳುತ್ತಾರೆ.
ಬಾಬಾರ ಮಾತು ಕೇಳಿ ಕಂಗಾಲಾದ ಶಾಂತಾ ಬಾಯಿ, ಎಂಥ ಮಾತನ್ನಾಡುತ್ತಿದ್ದೀರಿ ಬಾಬಾ. ನಾನೇಕೆ ನಿಮ್ಮನ್ನು ಹೊಡೆಯಲಿ..? ನಿಮಗಾಗಿ ಅಲ್ಲವೇ ನಾನು ಇಷ್ಟೆಲ್ಲ ಅಡಿಗೆ ಮಾಡಿದ್ದು..? ನೀವು ನನ್ನ ಮನೆಗೆ ಬಂದಿದ್ದು ನನಗೆ ಗೊತ್ತೇ ಇರಲಿಲ್ಲ ಎನ್ನುತ್ತಾಳೆ. ಆಗ ಬಾಬಾ, ನಾನು ನಿನ್ನನ್ನು ಪರೀಕ್ಷಿಸಲು ನಾಯಿ ಮತ್ತು ಬೆಕ್ಕಿನ ರೂಪದಲ್ಲಿ ನಿನ್ನ ಮನೆಗೆ ಬಂದಿದ್ದೆ. ಆದ್ರೆ ನೀನು ನನಗಾಗಿ ಅಡುಗೆ ಮಾಡುವ ಭರದಲ್ಲಿ ನಾಯಿ ಮತ್ತು ಬೆಕ್ಕಿಗೆ ಊಟ ನೀಡದೇ ಹೊಡೆದು ಕಳುಹಿಸಿದೆ.
ದೇವರಿಗೆಂದು ಪ್ರಸಾದ ಮಾಡಿದ್ದರೂ ಕೂಡ, ಹಸಿದು ಬಂದ ಜೀವಿಗಳಿಗೆ ಮೊದಲು ಆಹಾರ ನೀಡಬೇಕು. ಆಗ ದೇವರು ಸಂತುಷ್ಟನಾಗುತ್ತಾನೆ. ಅದು ದೇವರಿಗೆ ಕೊಡುವ ನೈವೇದ್ಯಕ್ಕಿಂತಲೂ ಶ್ರೇಷ್ಠವಾಗಿದೆ. ಹಸಿದವರ ಹೊಟ್ಟೆ ತುಂಬಿಸುವುದು ಉತ್ತಮ ಕಾರ್ಯವಾಗಿದೆ. ಅದು ಮನುಷ್ಯನಿಗೂ ಆಗಿರಬಹುದು, ಪ್ರಾಣಿಗಳಿಗೂ ಆಗಿರಬಹುದು. ಕರುಣೆ ಪ್ರೀತಿಗಿಂತ ದೊಡ್ಡ ಗುಣ ಮತ್ತೊಂದಿಲ್ಲ ಎಂದು ಬಾಬಾ ಹೇಳುತ್ತಾರೆ. ಆಗ ಶಾಂತಾಬಾಯಿಗೆ ತನ್ನ ತಪ್ಪು ಅರಿವಾಗುತ್ತದೆ. ಅಂದಿನಿಂದ ಆಕೆ ತನ್ನ ಮನೆಗೆ ಹಸಿದು ಬರುವ ಸಾಕು ಪ್ರಾಣಿಗಳಿಗೆ ತಪ್ಪದೇ ಊಟ ನೀಡಲು ಶುರು ಮಾಡುತ್ತಾಳೆ.
ಇದರ ಸಾರಾಂಶವೆಂದರೆ, ನಾವು ಪ್ರತೀ ಜೀವಿಗಳಿಗೂ ಪ್ರೀತಿ, ಕರುಣೆ ತೋರಿಸಬೇಕು. ಪ್ರಾಣಿಗಳನ್ನು ಹಿಂಸಿಸುವುದು, ಸುಮ್ಮ ಸುಮ್ಮನೆ ಹೊಡೆಯುವುದು, ಹಬ್ಬ ಹರಿದಿನದ ಸಮಯದಲ್ಲಿ ಅವುಗಳ ಮೇಲೆ ಬಣ್ಣ ಎರಚಿ ಹಿಂಸೆ ಮಾಡುವ ತಪ್ಪನ್ನೆಲ್ಲ ಮಾಡಕೂಡದು.
Discussion about this post