Recipe: ಕೆಲಸಕ್ಕೆ ಹೋಗುವ ಹಲವು ಮಹಿಳೆಯರಿಗೆ ಪ್ರತಿದಿನ ಬೆಳಿಗ್ಗೆ ವೆರೈಟಿ ವೆರೈಟಿ ತಿಂಡಿ ರೆಡಿ ಮಾಡಿ, ಆಫೀಸಿಗೆ ಹೋಗಬೇಕಾಗಿರುತ್ತದೆ. ಇನ್‌ಸ್ಟಂಟ್ ಆಗಿ ಮಾಡಬಹುದಾದ, ನೂಡಲ್ಸ್, ಬ್ರೆಡ್ ಟೋಸ್ಟ್ ಇದೆಲ್ಲ ಬೆಳ ಬೆಳಿಗ್ಗೆ ತಿನ್ನಲಾಗುವುದಿಲ್ಲ.
ಅಲ್ಲದೇ, ಓಟ್ಸ್ ಎಷ್ಟು ದಿನ ಅಂತ ತಿಂತಾರೆ. ಅಂಥವರು ಪಾಲಕ್ ಹಾಕಿ, ಫಟಾಫಟ್ ಅಂತ ದೋಸೆ ತಯಾರಿಸಬಹುದು. ಇದು ತಿನ್ನಲು ರುಚಿಯಾಗಿರುವುದಲ್ಲದೇ, ಆರೋಗ್ಯಕ್ಕೂ ಉತ್ತಮ. ಹಾಗಾದ್ರೆ ಪಾಲಕ್ ದೋಸೆ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.
ಬೇಕಾಗುವ ಸಾಮಗ್ರಿ: ಒಂದು ಕಟ್ಟು ಪಾಲಕ್ ಸೊಪ್ಪು, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ, ಒಂದು ಸ್ಪೂನ್ ತುರಿದ ಶುಂಠಿ ಮತ್ತು ಹಸಿಮೆಣಸು, ಕೊಂಚ ಕೊತ್ತೊಂಬರಿ ಸೊಪ್ಪು, ಹಿಂಗು, 1 ಸ್ಪೂನ್ ಜೀರಿಗೆ, 1ವರೆ ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ರವೆ, ಕೊಂಚ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿಕೊಳ್ಳಿ. ಅದರಲ್ಲಿ ಚೆನ್ನಾಗಿ ವಾಶ್ ಮಾಡಿದ ಪಾಲಕ್ ಹಾಕಿ, ಕುದಿಸಿ. ಬಳಿಕ ನೀರು ಮತ್ತು ಎಲೆಯನ್ನು ಸಪರೇಟ್ ಮಾಡಿ, ಫ್ರೆಶ್ ಆಗಿರುವ ನೀರಿನಿಂದ ಪಾಲಕ್ ಎಲೆಯನ್ನು ವಾಶ್ ಮಾಡಿ. ಎಲೆಯನ್ನು ನೀರು ಹಾಕದೇ ರುಬ್ಬಿಕೊಳ್ಳಿ.
ಒಂದು ಮಿಕ್ಸಿಂಗ್ ಬೌಲ್‌ನಲ್ಲಿ 1ವರೆ ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ರವೆ ಹಾಕಿ, ಅದಕ್ಕೆ 1 ಸ್ಪೂನ್ ಜೀರಿಗೆ, ಪಾಲಕ್ ಪೇಸ್ಟ್, ಕೊಂಚ ಉಪ್ಪು, ನೀರು ಹಾಕಿ ತೆಳ್ಳಗೆ ನೀರು ದೋಸೆ ಹಿಟ್ಟಿನಂತೆ ಹಿಟ್ಟು ರೆಡಿ ಮಾಡಿಕೊಳ್ಳಿ.
ಬಳಿಕ ಇದಕ್ಕೆ, ಕೊಂಚ ಹಿಂಗು, ಕೊತ್ತೊಂಬರಿ ಸೊಪ್ಪು, ಹಸಿಮೆಣಸು ಮತ್ತು ಶುಂಠಿ ತುರಿದು ಸೇರಿಸಿಕೊಳ್ಳಿ. ಪ್ಯಾನ್ ಬಿಸಿ ಮಾಡಿ, ಎಣ್ಣೆ ಸವರಿ, ಅದರ ಮೇಲೆ ಕೊಂಚ ಈರುಳ್ಳಿ ಹರಡಿಕೊಳ್ಳಿಯ ನಂತರ ದೋಸೆ ಹಿಟ್ಟು ಹೊಯ್ದರೆ, ರುಚಿಕರವಾದ ಆರೋಗ್ಯಕರವೂ ಆದ ಪಾಲಕ್ ದೋಸೆ ರೆಡಿ. ಕಾಯಿ ಚಟ್ನಿಯೊಂದಿಗೆ ದೋಸೆ ರುಚಿಯಾಗಿರುತ್ತದೆ.
Discussion about this post