ಬಾಯಿಯಲ್ಲಿ ನೀರೂರಿಸುವ ಹುಣಸೆ ಹಣ್ಣನ್ನು ತಿಳಿಯದವರು ಯಾರಿಲ್ಲ? ಹಸಿ ಹುಣಸೆ ಕಾಯಿಗಳನ್ನಂತೂ ಉಪ್ಪು ಖಾರದ ಪುಡಿಯ ಜೊತೆಗೆ ಮೆಲ್ಲದವರೇ ಇಲ್ಲ. ವಿಶಿಷ್ಟವಾದ ಹುಳಿ ರುಚಿಯನ್ನು ಹೊಂದಿರುವ ಈ ಹುಣಸೆ ಹಣ್ಣು ಫ್ಯಾಬೇಸಿ ಫ್ಯಾಮಿಲಿಗೆ ಸೇರಿದೆ. ದಕ್ಷಿಣ ಭಾರತದ ಅಡುಗೆ ಮನೆಯಲ್ಲಂತೂ ಇದು ಚಿರಪರಿಚಿತ. ಪುಳಿಯೊಗರೆ, ತೊಕ್ಕು, ಗೊಜ್ಜುಗಳಂಥ ಅಡುಗೆಗಳನ್ನು ಮಾಡಿ ನಾವು ಸವಿಯುವುದಿಲ್ಲವೇ? ಅಡುಗೆಗಷ್ಟೇ ಅಲ್ಲ ಇದನ್ನು ಚ್ಯಾಕಲೇಟ್, ಕ್ಯಾಂಡಿಗಳಲ್ಲಿಯೂ ಬಳಸುತ್ತಾರೆ. 90ರ ದಶಕದ ಮಕ್ಕಳನ್ನು ಕೇಳಿ ಎಲ್ಲರೂ ತಾವು ತಿಂದ ಹುಣಸೆಯ ಕ್ಯಾಂಡಿಯ ಬಗ್ಗೆ ಸವಿಯಾಗಿ ಹೇಳುತ್ತಾರೆ. ಹಾಗಾದರೆ ಬನ್ನಿ ನಾವೂ ನಮ್ಮ ಮಕ್ಕಳಿಗೆ ಇದರ ಸವಿ ಉಣಿಸೋಣ. ಈ ಕಟ್ಟಾಮಿಟ್ಟಾ ಕ್ಯಾಂಡಿ ಮಾಡುವದಾದರೂ ಹೇಗೆ?
ಕಟ್ಟಾಮಿಟ್ಟಾ ಕ್ಯಾಂಡಿ ಮಾಡುವುದು ಹೇಗೆ?

ಬೇಕಾಗುವ ಸಾಮಾಗ್ರಿಗಳು
1. ಒಂದು ಕಪ್ ಸ್ವಚ್ಛಗೊಳಿಸಿದ ಹುಣಸೆಹಣ್ಣು
2. 2 ರಿಂದ 3 ಚಮಚ ಬೆಲ್ಲ
3. ಅರ್ಧ ಚಮಚ ಖಾರದ ಪುಡಿ
4. ಅರ್ಧ ಚಮಚ ಜೀರಿಗೆ
5. ಅರ್ಧ ಚಮಚ ಉಪ್ಪು
6. ಒಂದು ಚಮಚ ಅಡುಗೆ ಎಣ್ಣೆ
7. ಐಸ್ ಕ್ರೀಮ್ ಕಡ್ಡಿಗಳು
ಮೊದಲು ಜೀರೆಗೆ ಮತ್ತು ಉಪ್ಪನ್ನು ಕುಟ್ಟುವ ಕಲ್ಲಿಗೆ ಹಾಕಿ ಕುಟ್ಟಿ ಪುಡಿಮಾಡಿ ಕೊಳ್ಳಿ.
ಅದಕ್ಕೆ ಬೆಲ್ಲ ಮತ್ತು ಖಾರದ ಪುಡಿ ಸೇರಿಸಿ ಬೆಲ್ಲ ಪುಡಿಯಾಗುವವರೆಗೆ ಕುಟ್ಟಿ ಕೊಳ್ಳಿ. (ನೀವು ಬೆಲ್ಲದ ಪುಡಿ ಬಳಸುತ್ತಿದ್ದರೆ ಅದು ಬೇಗ ಪುಡಿಯಾಗುತ್ತದೆ.)
ಕುಟ್ಟಿದ ಪುಡಿಗೆ ಹುಣಸೆಹಣ್ಣು ಸೇರಿಸಿ 10 ರಿಂದ 15 ನಿಮಿಷದವರೆಗೆ ಹುಣಸೆ ಹಣ್ಣು ಪೇಸ್ಟ್ ಆಗುವವರೆಗೂ ಕುಟ್ಟಿ.
ನಂತರ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಟ್ಟುಕೊಳ್ಳಿ.
ಕೈಗೆ ಸ್ವಲ್ಪ ಎಣ್ಣೆಯನ್ನು ಸವರಿಕೊಂಡು ಐಸ್ ಕ್ರೀಮ್ ಕಡ್ಡಿಯ ತುದಿಗೆ ದಪ್ಪಗೆ ಮೆತ್ತಿ. ಈಗ ನಿಮ್ಮ ಕಟ್ಟಾಮಿಟ್ಟಾ ಕ್ಯಾಂಡಿ ತಯಾರಾಯಿತು.
ಅದನ್ನು ಮಕ್ಕಳಿಗೆ ಕೊಡಿ, ಅವರ ಜೊತೆಗೆ ನಿಮ್ಮ ಬಾಲ್ಯದ ನೆನಪುಗಳನ್ನೂ ಹಂಚಿಕೊಳ್ಳಿ.
Khtatta-Meetha Imli Candy
ಇದನ್ನೂ ಓದಿ:ಉತ್ತಮ ಆರೋಗ್ಯಕ್ಕೆ ಪ್ರೋಟೀನ್‌ಯುಕ್ತ ಬೇಳೆಗಳು
Discussion about this post