Mahashivaratri: ಇಂದು ಮಹಾ ಶಿವರಾತ್ರಿ ಹಬ್ಬ. ಮಾಘ ಮಾಸದ ಶಿವರಾತ್ರಿ ವಿಶೇಷ ರಾತ್ರಿಯಾಗಿರುವ ಕಾರಣ. ಇದನ್ನು ಮಹಾ ಶಿವರಾತ್ರಿ ಎಂದು ಹೇಳುತ್ತಾರೆ. ಈ ದಿನ ಭಕ್ತರು ಉಪವಾಸ ಮಾಡಿ, ನೀರಿನ ಅಭಿಷೇಕ, ಬಿಲ್ವಪತ್ರೆ ಅರ್ಪಣೆ, ಜಾಗರಣೆ ಎಲ್ಲವೂ ಮಾಡುತ್ತಾರೆ. ಏಕೆಂದರೆ ಶಿವರಾಾತ್ರಿಯ ದಿನ ಈ ಎಲ್ಲ ನಿಯಮ ಪಾಲಿಸಿದರೆ, ಮರಣದ ಬಳಿಕ ಶಿವನ ಸನ್ನಿಧಾನದಲ್ಲಿ ಜಾಗ ಸಿಗುತ್ತದೆ. ಸ್ವರ್ಗ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಇಂಥ ನಂಬಿಕೆ ಬಗ್ಗೆ ಗುರುಚರಿತ್ರೆಯಲ್ಲಿ ಬರುವ ಕಥೆಯೊಂದನ್ನು ನಾವು ನಿಮಗೆ ಹೇಳಲಿದ್ದೇವೆ.
ಒಂದೂರಲ್ಲಿ ಓರ್ವ ಚಾಂಡಾಳಿ ಇದ್ದಳು. ಆಕೆ ಜೀವನ ಪೂರ್ತಿ ಮಾಡಬಾರದ ಕೆಲಸವನ್ನೇ ಮಾಡಿದ್ದಳು. ಇನ್ನೊಬ್ಬರ ಕಷ್ಟ, ಇನ್ನೊಬ್ಬರ ಅಳುವಿಗೆ ಕಾರಣವಾಗಿದ್ದಳು. ಮೋಸ, ವಂಚನೆ, ಅಡ್ಡದಾರಿ ಹೀಗೆ ಇದೇ ಅವಳ ಕೆಲಸವಾಗಿತ್ತು. ಒಮ್ಮೆ ಆಕೆ ಮಾಡಿದ ಪಾಪದ ಕರ್ಮವಾಗಿ ಆಕೆಯನ್ನು ಊರಿನಿಂದ ಹೊರಗಟ್ಟಲಾಯಿತು. ಊಟ ನೀರು ಸಿಗದೆ ಆಕೆ ಪರದಾಡಿದಳು. ಕ್ರಮೇಣ ರೋಗಿಷ್ಠಳಾದಳು.
ಎಷ್ಟೇ ಕಷ್ಟಪಟ್ಟರೂ ಗೋಗರೆದರೂ ಆಕೆಗೆ ಊಟ, ನೀರು ಸಿಗಲೇ ಇಲ್ಲ. ಕೊನೆಗೆ ಅಲ್ಲೇ ಬಿದ್ದಿದ್ದ ಎಲೆ ಹಿಡಿದು ಭಿಕ್ಷೆ ಬೇಡಲು ಶುರು ಮಾಡಿದಳು. ತನ್ನೂರಿನಿಂದ ಅನ್ನ ಆಹಾರಕ್ಕಾಗಿ ಅಲೆದಲೆದು ಗೋಕರ್ಣ ತಲುಪಿದ್ದಳು. ಅನ್ನ ನೀರು ಇಲ್ಲದ ಕಾರಣ ದೇಹದಲ್ಲಿ ಶಕ್ತಿಯೇ ಇಲ್ಲದಂತಾಗಿ, ಇನ್ನೇನು ಸಾವು ಸಮೀಪಿಸುವ ಹಂತಕ್ಕೆ ಬಂದಿದ್ದಳು. ಅದರಲ್ಲಿ ಆಕೆ ಭಿಕ್ಷೆ ಬೇಡುತ್ತಿದ್ದುದ್ದನ್ನು ಕಂಡ ಓರ್ವ ವ್ಯಕ್ತಿ ಆಕೆಗೆ 1 ಬಿಲ್ವಪತ್ರೆ ಕೊಟ್ಟ. ಆದರೆ ಆ ಚಾಂಡಾಳಿಗೆ ಬಿಲ್ವಪತ್ರೆಯ ಮಹತ್ವ ಗೊತ್ತಿರಲಿಲ್ಲ. ಆಕೆ, ಇದು ತೆಗೆದುಕೊಂಡು ನಾನೇನು ಮಾಡಲಿ ಎಂದು ಅದನ್ನು ಬಿಸಾಕಿದಳು.
ಆಕೆಯ ಅದೃಷ್ಟಕ್ಕೆ ಆ ಬಿಲ್ವಪತ್ರೆ ಹೋಗಿ, ಅಲ್ಲೇ ಮರದ ಬುಡದಲ್ಲಿ ಇದ್ದ ಶಿವಲಿಂಗದ ಮೇಲೆ ಬಿತ್ತು. ಅಲ್ಲಿಗೆ ಶಿವನಿಗೆ ಬಿಲ್ವಪತ್ರೆ ಅರ್ಪಣೆಯಾದಂತಾಯಿತು. ಅದೇ ಸ್ಥಳದಲ್ಲಿ ಕೊಂಚ ನೀರು ಸಿಕ್ಕಿತೆಂದು ಕುಡಿಯಲು ಹೋದಳು, ಆದರೆ ಆ ನೀರು ಚೆಲ್ಲಿ ಹೋಯಿತು. ನೀರು ಶಿವಲಿಂಗಕ್ಕೆ ಬಿದ್ದು, ಆ ಚಾಂಡಾಳಿಯ ಕೈಯಿಂದಲೇ ಜಲಾಭಿಷೇಕವೂ ಆಯಿತು. ಅದೇ ಸ್ಥಳದಲ್ಲಿ ಚಾಂಡಾಳಿ ಸತ್ತು ಬಿದ್ದಳು.
ಇಡೀ ಜೀವನದಲ್ಲಿ ಬರೀ ಪಾಪವನ್ನೇ ಮಾಡಿದ್ದ ಆಕೆ, ತನ್ನ ಕೊನೆಗಾಲದಲ್ಲಿ ಅನ್ನ, ನೀರು ಇಲ್ಲದೇ ಉಪವಾಸವಿದ್ದಳು. ಗೋಕರ್ಣಕ್ಕೆ ಬಂದು, ಅಲ್ಲೇ ಇದ್ದ ಪವಿತ್ರ ಶಿವಲಿಂಗಕ್ಕೆ ತನಗೇ ಗೊತ್ತಿಲ್ಲದೇ, ಬಿಲ್ವಪತ್ರೆ ಅರ್ಪಿಸಿ, ಜಲಾಭಿಷೇಕವೂ ಮಾಡಿದ್ದಳು. ಆಕೆ ಸಾಯುವ ದಿನ ಶಿವರಾತ್ರಿಯಾಗಿತ್ತು. ಆಕೆ ಉಪವಾಸವಿದ್ದು, ನಡಿಗೆಯ ಮೂಲಕ ಗೋಕರ್ಣಕ್ಕೆ ಬಂದು, ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸಿ, ಜಲಾಭಿಷೇಕ ಮಾಡಿದ ಪುಣ್ಯ ಪ್ರಾಪ್ತಿಯಿಂದ ಶಿವರಾಾತ್ರಿಯ ದಿನವೇ ಆಕೆಗೆ ಮರಣ ಬಂದು, ಶಿವಸನ್ನಿಧಾನ ಪ್ರಾಪ್ತಿಯಾಯಿತು.
Discussion about this post