ಅಂತರರಾಷ್ಟ್ರೀಯ ಡಯಾಬಿಟಿಸ್ ಒಕ್ಕೂಟ (ಐಡಿಎಫ್)ದ ವರದಿಯ ಪ್ರಕಾರ ಪಾಕೀಸ್ತಾನದಲ್ಲಿ ಮಧುಮೇಹಕ್ಕೀಡಾಗುತ್ತಿರುವವರ ಸಂಖ್ಯೆ ದಿನೇ-ದಿನೇ ಹಚ್ಚುತ್ತಿದ್ದು ಸುಮಾರು 3.5 ಕೋಟಿ ಜನ ಪಾಕೀಸ್ತಾನೀಯರು ಮಧುಮೇಹಿಗಳಾಗಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸದ್ಯದ ಅಂಕಿ-ಅಂಶಗಳ ಪ್ರಕಾರ 2019ರಿಂದೀಚೆಗೆ ಮಧುಮೇಹಿಗಳ ಸಂಖ್ಯೆಯಲ್ಲಿ ಶೇಕಡಾ 70ರಷ್ಟು ಏರಿಕೆಯಾಗಿದೆಯೆಂದು ವರದಿಗಳು ತಿಳಿಸಿವೆ. ಒಕ್ಕೂಟದ ಅಂದಾಜಿನ ಪ್ರಕಾರ 2021ರ ಅಂತ್ಯದ ವೇಳೆಗೆ ಇದು ಸುಮಾರ 4,00,000 ಜನರ ಬಲಿ ಪಡೆಯುವ ಸಾಧ್ಯತೆಯಿದ್ದು ಇದು ಮಧ್ಯಪ್ರಾಚ್ಯ ಹಾಗೂ ಉತ್ತರ ಆಫ್ರಿಕಾ ವಲಯಗಳ ಒಟ್ಟಾರೆ ಸಂಖ್ಯೆಗಿಂತಲೂ ಹೆಚ್ಚಾಗಿದೆ.
ಮುಂಬರುವ ಡಿಸೆಂಬರ್ 6ರಂದು ಬಿಡುಗಡೆಯಾಗಲಿರುವ ಐಡಿಎಫ್ ಅಟ್ಲಾಸ್‌ನ 10ನೇ ಆವೃತ್ತಿಯಲ್ಲಿ ಇದು ಪ್ರಕಟವಾಗಲಿದ್ದು ಈ ವರದಿಯ ಪ್ರಕಾರ ಪಾಕೀಸ್ತಾನದ ಪ್ರತಿ ನಾಲ್ವರು ವಯಸ್ಕರಲ್ಲಿ ಒಬ್ಬರಿಗೆ ಮಧುಮೇಹ ಉಂಟಾಗಲಿದ್ದು ಇದು ದೇಶದ ಒಟ್ಟು ಜನಸಂಖ್ಯೆಯ 26.7% ಜನರನ್ನು ಕಾಡಲಿದೆ. ಇದು ಪಾಕೀಸ್ತಾನಕ್ಕೆ ವಿಶ್ವದಲ್ಲೇ ಅತಿ ಹೆಚ್ಚು ಜನರಿಗೆ ಮಧುಮೇಹ ಉಂಟಾದ ರಾಷ್ಟ್ರವೆಂಬ ಕುಖ್ಯಾತಿಯನ್ನು ನೀಡಲಿದೆಯೆಂದು “ಪಾಕೀಸ್ತಾನ್ ಟುಡೇ” ಪತ್ರಿಕೆ ವರದಿ ಮಾಡಿದೆ.
ಅಂತರರಾಷ್ಟ್ರೀಯ ಡಯಾಬಿಟಿಸ್ ಒಕ್ಕೂಟದ ಮುಂದುವರೆದ ಅಂಕಿ-ಅಂಶಗಳ ಪ್ರಕಾರ 11 ಮಿಲಿಯನ್ ಪಾಕಿಸ್ತಾನೀಯರು ಗ್ಲೂಕೋಸ್ ಸಹನೆಯ ಕ್ಷಮತೆಯಲ್ಲಿ ನ್ಯೂನತೆಗಳನ್ನು ಹೊಂದಿದ್ದು 2ನೇ ವಿಧದ ಮಧುಮೇಹಕ್ಕೀಡಾಗುವ ಅಪಾಯ ಹೊಂದಿದ್ದಾರೆ. ಇದಲ್ಲದೇ, ಒಟ್ಟು ಜನಸಂಖ್ಯೆಯ ಸುಮಾರು ಶೇಕಡಾ 26.9ಕ್ಕೂ ಹೆಚ್ಚಿನ ಸಂಖ್ಯೆಯ ಜನರು ಮಧುಮೇಹದಿಂದ ಬಳಲುತ್ತಿದ್ದು ಇವರಿಗೆ ತಮ್ಮ ಸ್ಥಿತಿಯ ಅರಿವೇ ಇಲ್ಲ ಎನ್ನಲಾಗಿದೆ.
ಇದೇ ವರದಿಯ ಪ್ರಕಾರ ವಿಶ್ವದಲ್ಲಿ ಸುಮಾರು 537 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದು ಇದು ಒಕ್ಕೂಟವು 2019ರಲ್ಲಿ ನೀಡಿದ್ದ ಮುನ್ಸೂಚನೆಗಿಂತ ಶೇಕಡಾ 16ರಷ್ಟು ಹೆಚ್ಚಾಗಿದೆ. ಪಾಕೀಸ್ತಾನದ ಬಕಾಯ್ ವೈದ್ಯಕೀಯ ವಿಶ್ವವಿದ್ಯಾಲಯದ ಮಧುಮೇಹ ಹಾಗೂ ಅಂತ:ಸ್ರಾವ ಶಾಸ್ತ್ರಗಳ ವಿಭಾಗದ ನಿರ್ದೇಶಕ ಹಾಗೂ ಪ್ರಾಧ್ಯಾಪಕ ಅಬ್ದುಲ್ ಬಾಸಿತ್‌ರ ಪ್ರಕಾರ ಪಾಕೀಸ್ತಾನದಲ್ಲಿ ವೇಗವಾಗಿ ಏರುತ್ತಿರುವ ಮಧುಮೇಹದ ಸಮಸ್ಯೆಯು ದೇಶದ ಜನರ ಮತ್ತು ಕುಟುಂಬಗಳ ಆರೋಗ್ಯ ಮತ್ತು ಸೌಖ್ಯದ ವಿಷಯದಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇದರೊಂದಿಗೆ, ಮಧ್ಯಪ್ರಾಚ್ಯ ಹಾಗೂ ಉತ್ತರ ಆಫ್ರಿಕಾ ವಲಯದಲ್ಲಿ ಪ್ರತಿ 6 ಜನರಲ್ಲಿ ಒಬ್ಬರಿಗೆ ಮಧುಮೇಹ ಇದ್ದು ಇವರ ಒಟ್ಟು ಸಂಖ್ಯೆ ಸುಮಾರು 73 ಮಿಲಿಯನ್ ಇದೆ. ಮಧುಮೇಹವಿದ್ದರೂ ಅದರ ಅರಿವಿಲ್ಲದ ಸುಮಾರು 240 ಮಿಲಿಯನ್ ಜನರು ವಿಶ್ವದಲ್ಲಿದ್ದು ಅವರಲ್ಲಿ 27 ಮಿಲಿಯನ್ ಜನರು ಮಧ್ಯಪ್ರಾಚ್ಯ ಹಾಗೂ ಉತ್ತರ ಆಫ್ರಿಕಾ ಪ್ರದೇಶದಲ್ಲಿದ್ದಾರೆ.
ಇದು ನಿಜಕ್ಕೂ ಆತಂಕ ತರುವ ವಿಷಯವಾಗಿದ್ದು ಎಲ್ಲರೂ ಎಚ್ಚರಿಕೆಯಿಂದಿರಬೇಕಾದ ಅವಶ್ಯಕತೆ ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿದೆ.
Pakistan in the verge of becoming world’s next diabetes capital as reported by IDF report
ಇದನ್ನೂ ಓದಿ: ಆರೋಗ್ಯಕರ ಜೀರ್ಣಕ್ರಿಯೆ ನಿಮ್ಮದಾಗಬೇಕೇ? ಹಾಗಾದೆರೆ ಇಲ್ಲಿವೆ ಆಯುರ್ವೇದದ 9 ಸುಲಭೋಪಾಯಗಳು
ಇದನ್ನೂ ಓದಿ: Ayurveda Day :ಆಯುಷ್ ಕ್ಷೇಮ ಕೇಂದ್ರಗಳ ಮೂಲಕ ಆರೋಗ್ಯವಂತರನ್ನಾಗಿಸುವುದು ಕೇಂದ್ರದ ಆಶಯ
Discussion about this post