ಚಿಕ್ಕಮಗಳೂರು; ಕುರಿಗಳ ಮಾರಾಟ ಹಾಗೂ ಕೊಂಡುಕೊಳ್ಳಲು ಅನುಕೂಲವಾಗುವಂತೆ ಜಿಲ್ಲಾ ಕೇಂದ್ರದಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಅಗತ್ಯವಿದ್ದು ಇದರ ನಿರ್ಮಾಣಕ್ಕೆ ಎಂಪಿಎಂಸಿ ಬಳಿ ಸೂಕ್ತ ಜಾಗ ಮಂಜೂರು ಮಾಡಿ ಅಗತ್ಯ ನೆರವು ನೀಡುವಂತೆ ಕುರಿ ಮತ್ತು ಉಣ್ಣೆ ಸಹಕಾರ ಸಂಘ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್ ಒತ್ತಾಯಿಸಿದರು.
ನಗರದ ಸ್ಕೌಟ್ಸ್ ಭವನದಲ್ಲಿ ಗುರುವಾರ ನಡೆದ ೨೦೨೦-೨೦೨೧ ನೇ ಸಾಲಿನ ಕುರಿ ಮತ್ತು ಉಣ್ಣೆ ಸಹಕಾರ ಸಂಘ ನಿಗಮದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ದೇಶದಲ್ಲಿ ಅನೇಕ ಸಹಕಾರ ಸಂಘ-ಸಂಸ್ಥೆಗಳು ತಮ್ಮದೇ ಆದ ಧ್ಯೇಯೋದ್ದೇಶ ಹೊಂದಿ ಕಾರ್ಯನಿರ್ವಹಿಸುತ್ತಿವೆ. ಅದರಂತೆ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ಕುರಿಗಾಹಿಗಳ ಸರ್ವತೋಮುಖ ಅಭಿವೃದ್ಧಿಗೆ ಸ್ಥಾಪಿತವಾಗಿದೆ. ಸಾಲ ಸೌಲಭ್ಯದ ಜೊತೆಗೆ ಅವರ ಸಂಕಷ್ಟಗಳಿಗೆ ಸಂಘ ಶ್ರಮಿಸಲಿದೆ ಎಂದರು.
ರಾಜ್ಯದಲ್ಲಿ ಸುಮಾರು ೬೦ ಲಕ್ಷಕ್ಕೂ ಅಧಿಕ ಕುರಿಗಾಹಿಗಳಿದ್ದಾರೆ. ಆದರೆ ಅವರಿಗೆ ಸರ್ಕಾರದಿಂದ ನಿರೀಕ್ಷಿತ ಸೌಲಭ್ಯಗಳು ಸಿಗುತ್ತಿಲ್ಲ, ಸರ್ಕಾರ ಆಯವ್ಯಯದಲ್ಲಿ ಪಶುಸಂಗೋಪನೆ ಇಲಾಖೆಗೆ ಕೇವಲ ೫೦ ಕೋಟಿ ಮೀಸಲಿಟ್ಟಿದೆ. ಎಮ್ಮೆ, ಮೇಕೆ, ಹಸು, ಕೋಳಿ ಮುಂತಾದ ಪ್ರಾಣಿಗಳಿಗೆ ಇರುವ ಪ್ರಾಧ್ಯಾನ್ಯತೆ ಕುರಿಗಳಿಗೆ ಇಲ್ಲದಂತಾಗಿದೆ. ರಾಷ್ಟ್ರಮಟ್ಟದ ಎನ್‌ಸಿಡಿಸಿ ಮೂಲಕ ಕುರಿಗಾಹಿಗಳಿಗೆ ಹೆಚ್ಚಿನ ಸಾಲಸೌಲಭ್ಯವನ್ನು ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಕುರಿ ಮತ್ತು ಉಣ್ಣೆ ಸಹಕಾರ ಸಂಘವು ಕೇವಲ ಸಾಲ ಸೌಲಭ್ಯ ನೀಡಲು ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಸಂಕಷ್ಟದಲ್ಲಿರುವ ಕುರಿಗಾಹಿಗಳ ನೆರವಿಗೆ ಧಾವಿಸುವುದು ಸಂಘದ ಉದ್ದೇಶ. ೧೬೦೦ ಸದಸ್ಯರ ಬಲವನ್ನು ಸಹಕಾರ ಸಂಸ್ಥೆ ಹೊಂದಿದೆ. ಜಿಲ್ಲೆಯಲ್ಲಿ ಕಳೆದ ವರ್ಷಗಳ ಹಿಂದೆ ಚಿರತೆ ಮತ್ತಿತರ ಕಾಡು ಪ್ರಾಣಿಗಳಿಂದ ಪ್ರಾಣ ಕಳೆದುಕೊಂಡ ಕುರಿಗಳಿಗೆ ಸಹಕಾರ ಸಂಘ ಮತ್ತು ಅರಣ್ಯ ಇಲಾಖೆ ಸಹಕಾರದಲ್ಲಿ ಪರಿಹಾರ ನೀಡಲಾಗಿದೆ. ದೇವಗೊಂಡನಹಳ್ಳಿಯಲ್ಲಿ ಶಿವಕುಮಾರ ಎಂಬುವವರ ೨೦ ಕುರಿಗಳು ಕಾಡು ಪ್ರಾಣಿ ದಾಳಿಗೆ ತುತ್ತಾದಾಗ ಸರ್ಕಾರದಿಂದ ೧ ಲಕ್ಷ ಪರಿಹಾರ ಒದಗಿಸಲಾಗಿದೆ ಎಂದರು.
ಆಧುನೀಕತೆಗೆ ತಕ್ಕಂತೆ ಬದಲಾಗುವ ನಿಟ್ಟಿನಲ್ಲಿ ಪ್ರತಿ ವರ್ಷವೂ ಕುರಿಗಾಹಿಗಳಿಗೆ ಬಂಡೂರು, ಮತ್ತು ಹೆಸರಘಟ್ಟದಲ್ಲಿ ಕುರಿಗಳ ಸಾಕಾಣಿಕೆ, ಮಾಂಸ ಉತ್ಪಾದನೆ, ಮೇವು, ಜೊತೆಗೆ ಸರ್ಕಾರದಿಂದ ದೊರೆಯುವ ಸಾಲ ಸೌಲಭ್ಯಗಳ ಕುರಿತು ಮೂರು ದಿನಗಳ ಕಾಲ ಉಚಿತ ತರಬೇತಿ ನೀಡಲಾಗುತ್ತಿತ್ತು. ಆದರೆ ಕೋವಿಡ್ ಕಾರಣದಿಂದ ೨ ವರ್ಷದಿಂದ ತರಬೇತಿ ನೀಡಲಾಗುತ್ತಿಲ್ಲ ಮುಂದಿನ ದಿನಗಳಲ್ಲಿ ಇದು ವಿಳಂಬವಾದಲ್ಲಿ ಜಿಲ್ಲೆಯಲ್ಲಿಯೇ ಸಂಘದ ಸಹಕಾರದಲ್ಲಿ ತಜ್ಞರುಗಳನ್ನು ಕರೆಸಿ ತರಬೇತಿ ಆಯೋಜಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಸಹಕಾರ ಸಂಘಗಳು ಬಲಿಷ್ಟವಾಗಲು ಸದಸ್ಯರ ಸಹಕಾರ ಸದಸ್ಯತ್ವ ನೊಂದಣಿ ಅಗತ್ಯ. ಸಂಘದಲ್ಲಿ ಅಥವಾ ಸೌಲಭ್ಯಗಳು ಸಿಗಬೇಕಾದ ಸನ್ನಿವೇಶದಲ್ಲಿ ಸದಸ್ಯತ್ವ ಪಡೆದುಕೊಳ್ಳುತ್ತಾರೆ. ನೈಜ ಕುರಿಗಾಹಿ ಫಲಾನುಭವಿಗಳಿಗೆ ಸೌಲಭ್ಯಗಳು ಸಿಗಬೇಕು. ಲಕ್ಷಾಂತರ ಕುರಿಗಾಹಿಗಳಿದ್ದು ಅವರಿಗೆ ಅನುಕೂಲವಾಗುವಂತೆ ಸಂಘವು ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ಸ್ವಸಹಾಯ ಸಂಘಗಳಿಗೆ ಇದುವರೆಗೂ ಮೂರು ಕೋಟಿವರೆಗೆ ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದರು.
ಸ್ವ-ಉದ್ಯೋಗ ಕಂಡು ಕೊಳ್ಳಲು ಅನುಕೂಲವಾಗುವಂತೆ ಎಲ್ಲಾ ಬ್ಯಾಂಕ್‌ಗಳು ಕುರಿಗಾಹಿಗಳಿಗೆ ಸಾಲ ಸೌಲಭ್ಯ ಒದಗಿಸಲಿವೆ ಆದರೆ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಬ್ಯಾಂಕುಗಳ ಆರ್ಥಿಕವಾಗಿ ದಿವಾಳಿಯಾಗದಂತೆ ನೋಡಿಕೊಳ್ಳಬೇಕು, ಕಳೆದ ಬಾರಿಯಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್‌ನೊಂದಿಗೆ ಸಂಘವು ಸಾಲ ಸೌಲಭ್ಯ ಪಡೆದುಕೊಳ್ಳಲು ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು ಆದರೆ ಬಹುತೇಕರು ಸಕಾಲಕ್ಕೆ ಸಾಲ ಮರುಪಾವತಿ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಂಘದ ಉಪಾಧ್ಯಕ್ಷ ಕೆ.ಸಿ.ಕೆಂಗೇಗೌಡ ಮಾತನಾಡಿ ಸದಸ್ಯರ ಠೇವಣಿ ಹಣ, ಷೇರು ಹಣದಿಂದ ಸಂಘವು ಹಲವು ವರ್ಷಗಳಿಂದ ಉತ್ತಮವಾಗಿ ನಡೆದುಕೊಂಡು ಬರುತ್ತಿದೆ ಮತ್ತಷ್ಟು ಸಬಲವಾಗಲು ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆದುಕೊಳ್ಳಲು ಸದಸ್ಯರ ಸಹಕಾರ ಅಗತ್ಯ ಅವರುಗಳೇ ಸಂಘದ ದೊಡ್ಡ ಶಕ್ತಿ. ಸರ್ಕಾರದ ಸೌಲಭ್ಯಗಳು ನೈಜ ಕುರಿಗಾಹಿಗಳಿಗೆ ಸಿಗಬೇಕು, ಸಂಕಷ್ಟಗಳು ಎದುರಾದಾಗ ನಿವಾರಿಸುವ ನಿಟ್ಟಿನಲ್ಲಿ ಸಂಘವು ನಿರಂತರವಾಗಿ ಕಾರ್ಯ ಮಾಡಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಜಿ.ಆರ್.ಪರಮೇಶ್ವರಪ್ಪ, ಲಕ್ಷ್ಮಣಗೌಡ, ಮೂರ್ತಿ, ಬಸವರಾಜ್, ಎನ್.ಹೆಚ್.ಗೋಪಾಲ್, ಟಿ.ಎಸ್.ಗೀತಾಬಾಯಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಮನು ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

























Discussion about this post