Spiritual Story: ಹಿಂದೂಗಳು ಯಾವುದೇ ಶುಭಕಾರ್ಯ ಮಾಡುವ ಮುನ್ನ ಪ್ರಥಮ ಪೂಜಿತ ಮಹಾಗಣಪತಿಯ ಆಶೀರ್ವಾದ ಪಡೆಯುತ್ತಾರೆ. ವಿಘ್ನ ನಿವಾರಕನಾದ ಮಹಾಗಣಪತಿಯ ಬಳಿ ಸಕಲ ಕಷ್ಟಗಳನ್ನ ನಿವಾರಿಸಿ, ಕಾರ್ಯಸಿದ್ಧಿಯಾಗುವಂತೆ ಕೋರುತ್ತಾರೆ. ಇಂಥ ಸಿದ್ಧಿವಿನಾಯಕನ ಆಶೀರ್ವಾದ ಸಿಕ್ಕಿ, ಅಂದುಕೊಂಡ ಕೆಲಸ ಪರಿಪೂರ್ಣಗೊಳ್ಳಲಿ ಎಂದು ಜನ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಬರ್ತಾರೆ. ಸಿದ್ಧಿವಿನಾಯಕ ದೇವಸ್ಥಾನ ಎಷ್ಟನೇ ಇಸವಿಯಲ್ಲಿ ಸ್ಥಾಪಿತವಾಯ್ತು..? ಇದನ್ನು ಯಾರು ಕಟ್ಟಿಸಿದರು, ಯಾಕೆ ಕಟ್ಟಿಸಿದರು..? ಇಲ್ಲಿರುವ ಸಿದ್ಧಿವಿನಾಯಕನ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ..
ಸೆಲೆಬ್ರಿಟಿ, ರಾಜಕಾರಣಿಗಳ ನೆಚ್ಚಿನ ದೇವರೀತ
ಮಹಾರಾಷ್ಟ್ರದ(Maharashtra) ಮುಂಬೈನ(Mumbai) ಪ್ರಭಾದೇವಿಯಲ್ಲಿರುವ ಈ ಸಿದ್ಧಿವಿನಾಯಕ ದೇವಸ್ಥಾನ(Siddhivinayaka Temple) ದೇಶದಲ್ಲೇ ಪ್ರಸಿದ್ಧ ಮತ್ತು ಶ್ರೀಮಂತ ದೇವಸ್ಥಾನಗಳಲ್ಲೊಂದು. ತಮ್ಮ ಸಿನಿಮಾ ರಿಲೀಸ್ ಆಗೋಕ್ಕೂ ಮುನ್ನ ಬಾಲಿವುಡ್ ಸೆಲೆಬ್ರಿಟಿಗಳು (Bollywood celebrities)ಸಿದ್ಧಿವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ರಾಜಕಾರಣಿಗಳು(Politicians) ಚುನಾವಣೆಗೂ(election) ಮುನ್ನ ಬಂದು ಸಿದ್ಧಿ ವಿನಾಯಕನ ಆಶೀರ್ವಾದ ಪಡೆದು ಹೋಗ್ತಾರೆ. ಇಲ್ಲಿ ಬಂದು ದೇವರ ದರ್ಶನ ಮಾಡಿದವರು ಯಾರೂ ಈವರೆಗೆ ಸೋಲು ಕಂಡಿಲ್ಲ ಅನ್ನೋ ಮಾತಿದೆ.
200 ವರ್ಷ ಹಳೆಯದಾದ ಈ ದೇವಸ್ಥಾನ ಅತ್ಯಂತ ಪ್ರಸಿದ್ಧ ದೇವಸ್ಥಾನವಾಗಿದೆ. ದೇವಸ್ಥಾನದ ಮುಂಭಾಗದಲ್ಲಿಯೇ ಬೆಳ್ಳಿಯ ಇಲಿ ವಿಗ್ರಹವಿದೆ. ಭಕ್ತಾದಿಗಳು ಇಲಿಯ ಕಿವಿಯಲ್ಲಿ ತಮ್ಮ ಬೇಡಿಕೆ ಹೇಳಿಕೊಂಡರೆ, ಮೂಷಿಕನ ಮೂಲಕ ಅದು ಸಿದ್ಧಿ ವಿನಾಯಕನಿಗೆ ತಲುಪಿ, ತಮ್ಮ ಬೇಡಿಕೆ ಈಡೇರುತ್ತದೆ ಎಂಬುದು ಭಕ್ತರ ನಂಬಿಕೆ. ಸಿದ್ಧಿ ವಿನಾಯಕನ ಮತ್ತೊಂದು ವಿಶೇಷತೆ ಅಂದ್ರೆ ಇದು ಚತುರ್ಭುಜ ಮೂರ್ತಿಯಾಗಿದೆ. ಇದರ ಅಕ್ಕ ಪಕ್ಕ ರಿದ್ಧಿ ಮತ್ತು ಸಿದ್ಧಿ ಮೂರ್ತಿಗಳಿದೆ.
ಸಿದ್ಧಿವಿನಾಯಕ ದೇವಸ್ಥಾನ ಸ್ಥಾಪಿಸಿದ್ದು ಯಾರು..?
1801 ನವೆಂಬರ್ 19ರಂದು ಲಕ್ಷ್ಮಣ್ ವಿಠು ಮತ್ತು ದೇವುಬಾಯಿ ಪಾಟೀಲ್ ಎಂಬುವವರು ಈ ದೇವಸ್ಥಾನವನ್ನ ಕಟ್ಟಿದರು ಅಂತಾ ಹೇಳಲಾಗಿದೆ. ದೇವುಬಾಯಿಗೆ ಮಕ್ಕಳಿಲ್ಲದ ಕಾರಣ ಆಕೆ ಇಲ್ಲಿನ ಗಣಪತಿಯಲ್ಲಿ ಒಂದು ಮಾತನ್ನ ಕೋರಿಕೊಂಡಳಂತೆ. ನನಗೆ ಮಕ್ಕಳಿಲ್ಲ, ಮಕ್ಕಳು ಆಗುವುದೂ ಇಲ್ಲ. ಆದ್ರೆ ನಿನ್ನಲ್ಲಿ ಬಂದು ಯಾವ ಮಹಿಳೆ ಸಂತಾನಕ್ಕಾಗಿ ಪ್ರಾರ್ಥಿಸುತ್ತಾಳೋ ಅಂಥವರಿಗೆ ಸಂತಾನ ಭಾಗ್ಯ ನೀಡು, ನಿನ್ನ ಬಳಿ ಬಂದು ತಮ್ಮ ಆಸೆ ಈಡೇರಿಸುವಂತೆ ಕೋರಿಕೊಳ್ಳುವ ಭಕ್ತರ ಆಸೆಗಳೆಲ್ಲ ಈಡೇರಿಸು ಎಂದು ಬೇಡಿದಳಂತೆ.
ಆಕೆಯ ಬೇಡಿಕೆಯಂತೆ ಸಿದ್ಧಿವಿನಾಯಕ ಭಕ್ತರ ಬೇಡಿಕೆ ಈಡೇರಿಸುತ್ತಿದ್ದಾನೆ. ಆದ್ದರಿಂದ ಬಾಲಿವುಡ್ ಮಂದಿ ತಮ್ಮ ಯಾವುದೇ ಫಿಲ್ಮ್ ರಿಲೀಸ್‌ಗೂ (Movie release)ಮುನ್ನ ಸಿದ್ಧಿವಿನಾಯಕನ ದರ್ಶನ ಮಾಡಿ, ಆಶೀರ್ವಾದ ಪಡೆದು ನಂತರ ಫಿಲ್ಮ್ ರಿಲೀಸ್ ಮಾಡ್ತಾರೆ. ಚುನಾವಣಾ ಸಮಯ ಬಂತಂದ್ರೆ, ರಾಜಕಾರಣಿಗಳ ದಂಡು ಸಿದ್ಧಿವಿನಾಯಕನ ದರ್ಶನಕ್ಕಾಗಿ ಬರುತ್ತದೆ. ಜಾತಿ ಬೇಧವಿಲ್ಲದೇ ಭಕ್ತರು ಸಿದ್ಧಿವಿನಾಯಕನ ದರ್ಶನ ಪಡೆಯಲು ಬರುತ್ತಾರೆ.
ಪ್ರತೀ ವರ್ಷದ ಆದಾಯ 83 ಕೋಟಿ
ಪ್ರತಿದಿನ 40 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಸಿದ್ಧಿವಿನಾಯಕನ ದರ್ಶನಕ್ಕೆ ಬರುತ್ತಾರೆ. ಭಕ್ತಾದಿಗಳು ಹಾಕುವ ದಕ್ಷಿಣೆ, ದೇವಸ್ಥಾನಕ್ಕೆ ಬರುವ ದೇಣಿಗೆ ಎಲ್ಲ ಸೇರಿ, ವರ್ಷದ ಆದಾಯ 83 ಕೋಟಿಯಾಗಿದೆ.
ದೇವಸ್ಥಾನಕ್ಕೆ ಹೋಗುವುದು ಹೇಗೆ..?
ದೇವಸ್ಥಾನದಿಂದ 1.8 ಕಿಲೋಮೀಟರ್ ದೂರದಲ್ಲಿ ದಾದರ್ ರೈಲ್ವೆ ಸ್ಟೇಷನ್ ಇದೆ. ಈ ರೈಲ್ವೆ ಸ್ಟೇಶನ್‌ಗೆ ಬಂದರೆ, ನೀವು ಬಸ್, ಆಟೋ ಅಥವಾ ಟ್ಯಾಕ್ಸಿ ಮೂಲಕ, ಸಿದ್ಧಿವಿನಾಯಕ ದೇವಸ್ಥಾನಕ್ಕೆ ಹೋಗಬಹುದು. ಈ ದೇವಸ್ಥಾನಕ್ಕೆ ಎರಡು ಗೇಟ್‌ಗಳಿದ್ದು, ಮುಖ ದರ್ಶನ ಗೇಟ್ ಮೂಲಕ ನೀವು ದೇವಸ್ಥಾನ ಪ್ರವೇಶ ಮಾಡಬಹುದು. ದೇವರ ದರ್ಶನಕ್ಕಾಗಿ ನೀವು ಒಂದೂವರೆಯಿಂದ ಮೂರು ಗಂಟೆಗಳ ಕಾಲ ಕಾಯಬೇಕಾಗುತ್ತದೆ. ಮುಂಜಾನೆ 4 ಗಂಟೆಯಿಂದ 10.45ರವರೆಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಬಳಿಕ ಮಧ್ಯಾಹ್ನ 1.30ಯಿಂದ ರಾತ್ರಿ 10 ಗಂಟೆಯವರೆಗೂ ದರ್ಶನಕ್ಕೆ ಅವಕಾಶವಿದೆ. ದೇವರ ದರ್ಶನದ ಬಳಿಕ, ನೀವು 20 ರೂಪಾಯಿ ನೀಡಿ, ಎರಡು ಲಡ್ಡು ಪ್ರಸಾದ ಖರೀದಿಸಬಹುದು.
Discussion about this post