ಚಿಕ್ಕಮಗಳೂರು: ಕಳೆದ 6 ವರ್ಷಗಳಿಂದ ವಿಧಾನ ಪರಿಷತ್ ಸದಸ್ಯರಾಗಿ ಜಿಲ್ಲೆಗೆ ಪ್ರಾಣೇಶ್ ಅವರ ಕೊಡುಗೆ ಶೂನ್ಯ ಎಂದು ಕಾಂಗ್ರೆಸ್ ಮುಖಂಡ ಹೆಚ್.ಹೆಚ್. ದೇವರಾಜ್ ಟೀಕಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿ ಮಾತನಾಡಿದ ಅವರು ಬಿಜೆಪಿ ಸರ್ಕಾರಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯ ಅಧಿಕಾರ ವಿಕೇಂದ್ರಿಕರಣದಲ್ಲಿ ಆಸಕ್ತಿ ಇಲ್ಲ, ಆ ದುರುದ್ದೇಶದಿಂದಲೇ ಜಿಲ್ಲಾ, ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸದೆ ಮುಂದೂಡಿದೆ ಇದೀಗ ಮತಕೇಳುವ ಯಾವುದೇ ನೈತಿಕತೆ ಪಕ್ಷಕ್ಕಿಲ್ಲ ಎಂದು ಟೀಕೆ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯರಾಗಿ ಕಳೆದ ೬ ವರ್ಷಗಳಿಂದ ಎಷ್ಟು ಗ್ರಾಮಪಂಚಾಯಿತಿಗಳಿಗೆ ಭೇಟಿ ನೀಡಿ, ಸಮಸ್ಯೆಗಳನ್ನು ಆಲಿಸಿದ್ದೀರಿ? ಎಂಬುದನ್ನು ಸ್ಪಷ್ಟಪಡಿಸಲಿ, ಜನರೇಟರ್ ವಿತರಣೆಯನ್ನೇ ತಮ್ಮ ಸಾಧನೆ ಎಂದು ಪುಕ್ಕಟ್ಟೆ ಪ್ರಚಾರ ಪಡೆದುಕೊಳ್ಳುವುದು ವಿಪರ್ಯಾಸ. ಬಹುತೇಕ ಗ್ರಾ.ಪಂಗಳಲ್ಲಿ ಜನರೇಟರ್‌ಗಳು ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿವೆ.
ಜಿಲ್ಲೆಯ ಮೂಡಿಗೆರೆ, ಬಾಳೂರು, ಕಳಸ ಸೇರಿದಂತೆ ಅನೇಕ ಕಡೆಗಳಲ್ಲಿ ತೀವ್ರ ಅತಿವೃಷ್ಟಿ, ಬೆಳೆಹಾನಿ ಸಂಭವಿಸಿ ರೈತರು, ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ ಅವರ ಸಮಸ್ಯೆಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಆ ಭಾಗದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಇಂದಿಗೂ ನಿವೇಶನ ಒದಗಿಸಿ ಕೊಡಲು ಸಾಧ್ಯವಾಗಿಲ್ಲ ಎಂದು ದೂಷಿಸಿದರು.
ಗ್ರಾಮಪಂಚಾಯಿತಿಗಳಿಗೆ ಬೇಕಾದ ಅನುದಾನ ಜತೆಗೆ ರಸ್ತೆ, ಚರಂಡಿ, ಕುಡಿಯುವ ನೀರು ಮತ್ತಿತರ ಮೂಲ ಸೌಲಭ್ಯ ಒದಗಿಸಬೇಕಾದುದು ಚುನಾಯಿತ ಪ್ರತಿನಿಧಿಗಳ ಕೆಲಸ. ಆದರೆ ಪರಿಷತ್ ಸದಸ್ಯರು ಗ್ರಾ.ಪಂಗಳಿಗೆ ಅನುದಾನ ಬಿಡುಗಡೆಗೊಳಿಸುವಲ್ಲಿ ವಿಫಲರಾಗಿದ್ದಾರೆ. ಸರ್ಕಾರದ ಅನುದಾನದಲ್ಲಿ ಕೊಟ್ಟ ಜನರೇಟರ್‌ನ್ನು ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಇವರ ಅಧಿಕಾರವಧಿಯಲ್ಲಿ ಜಿಲ್ಲೆಗೆ ಕೊಡುಗೆ ಶೂನ್ಯ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿಶಾಂತೇಗೌಡ ಅವರು ಪರಿಷತ್ ಸದಸ್ಯರಾಗಿದ್ದ ವೇಳೆ ಜಿಲ್ಲೆಗೆ ಹಲವು ಯೋಜನೆಗಳನ್ನು ತಂದು ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕರಗಡ ನೀರಾವರಿ ಯೋಜನೆಗೆ ಸುಮಾರು ೧೦ ಕೋಟಿ ರೂ ಅನುದಾನ ಮಂಜೂರು ಮಾಡಿಸಿದ್ದಾರೆ. ಇದೀಗ ಬಿಜೆಪಿ ಜನರ ಭಾವನೆಗಳನ್ನು ಕೆರಳಿಸುವ ಕಾರ್ಯಕ್ಕೆ ಮುಂದಾಗಿದೆ, ಕಂದಾಯ ಸಚಿವರು ಬೆಳೆಹಾನಿ ಪ್ರತಿ ಹೇಕ್ಟೇರ್ ಪ್ರದೇಶಕ್ಕೆ ೧೫ ಸಾವಿರ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಆದರೆ ಇದುವರೆಗೂ ರೈತನಿಗೆ ಯಾವುದೇ ಬೆಳೆ ವಿಮೆ ಬಂದಿಲ್ಲ, ಇದೆಲ್ಲಾ ಚುನಾವಣೆಯ ಗಿಮಿಕ್ ಅಂತಾ ಟೀಕೆ ವ್ಯಕ್ತಪಡಿಸಿದರು.
ಗ್ರಾಮಪಂಚಾಯಿತಿ ಸದಸ್ಯರಿಗೆ ಯಾವುದೇ ಪಕ್ಷದ ಚಿಹ್ನೆ ಇರುವುದಿಲ್ಲ ಆ ನಿಟ್ಟಿನಲ್ಲಿ ಯಾವುದೇ ಆಮಿಷಕ್ಕೆ, ಒಳಗಾಗದೆ ನಿರ್ಬಯದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಜಯರಾಜ್ ಅರಸ್, ಜಮೀಲ್ ಅಹ್ಮದ್, ಎಂ.ಡಿ.ರಮೇಶ್, ನಾಗೇಶ್, ಕುಶ ಉಪಸ್ಥಿತರಿದ್ದರು.

























Discussion about this post