ರಾಂಚಿ: ನ್ಯೂಜಿಲೆಂಡ್ನ ಮಾರ್ಟಿನ್ ಗಪ್ಟಿಲ್ ಅವರು ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು. ಈ ಮೂಲಕ ಅವರು ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದರು.
ಅತಿಥೇಯ ಭಾರತ ತಂಡದ ವಿರುದ್ಧ ಶುಕ್ರವಾರ ರಾತ್ರಿ ರಾಂಚಿಯಲ್ಲಿ ನಡೆದ ಟ್ವೆಂಟಿ-20 ಕ್ರಿಕೆಟ್ನಲ್ಲಿ ಗಪ್ಟಿಲ್ ಅವರು ಈ ಸಾಧನೆ ಮಾಡಿದರು. ಅವರು ಈವರೆಗೆ 3248 ರನ್ ಕಲೆಹಾಕಿದ್ದಾರೆ. ಕೊಹ್ಲಿ ಅವರ ಬತ್ತಳಿಕೆಯಲ್ಲಿ 3227 ರನ್ ಇವೆ.
ಇದನ್ನೂ ಓದಿ: ನಾಯಕ ರೋಹಿತ್, ರಾಹುಲ್ ಅಬ್ಬರದ ಬ್ಯಾಟಿಂಗ್: ನ್ಯೂಜಿಲೆಂಡ್ ವಿರುದ್ಧ ಟ್ವೆಂಟಿ-20 ಸರಣಿ ಗೆದ್ದ ಭಾರತ
ಆದರೆ ಸರಾರಸರಿ ಲೆಕ್ಕಾಚಾರದಲ್ಲಿ ಕೊಹ್ಲಿ ಅವರು ಗಪ್ಟಿಲ್ಗಿಂತಲೂ ಭಾರಿ ಮುಂದಿದ್ದಾರೆ. ಗಪ್ಟಿಲ್ ಅವರು 30 ರನ್ ಸರಾಸರಿಯಲ್ಲಿ ಈ ಸಾಧನೆ ಮಾಡಿದ್ದರೆ ಕೊಹ್ಲಿ ಅವರ ಸರಾಸರಿ ರನ್ ಗಳಿಗೆ 52 ಇದೆ. ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ 3000ಕ್ಕೂ ಹೆಚ್ಚು ರನ್ ಗಳಿಸಿರುವ ರೋಹಿತ್ ಶರ್ಮಾ ಅವರು ಮೂರನೇ ಸ್ಥಾನದಲ್ಲಿದ್ದಾರೆ.
ಭಾರತದ ವಿರುದ್ಧದ ಎರಡನೇ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ್ದ ಗಪ್ಟಿಲ್ ಕೇವಲ 15 ಎಸೆತಗಳಲ್ಲಿ 31 ರನ್ ಗಳಿಸಿದ್ದರು. ಆದರೆ ದೀಪಕ್ ಚಾಹರ್ ಎಸೆತದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ಗೆ ಕ್ಯಾಚ್ ನೀಡಿ ಬೇಗನೆ ನಿರ್ಗಮಿಸಿದ್ದರಿಂದ ತಂಡದ ಮೊತ್ತವನ್ನು ಹೆಚ್ಚಿಸುವುದು ಅವರಿಗೆ ಸಾಧ್ಯವಾಗಲಿಲ್ಲ. ಅತ್ತ ರಾಹುಲ್, ರೋಹಿತ್ ಆಕರ್ಷಕ ಬ್ಯಾಟಿಂಗ್ನಿಂದಾಗಿ ನ್ಯೂಜಿಲೆಂಡ್ ತಂಡವು ಟ್ವೆಂಟಿ-20 ಕ್ರಿಕೆಟ್ ಸರಣಿಯಲ್ಲಿ ಭಾರತ ವಿರುದ್ಧ 2-0 ಅಂತರದಿಂದ ಸೋಲನುಭವಿಸಿದೆ. ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ತಂಡವು ರನ್ನರ್ ಅಪ್ ಆಗಿತ್ತು.
Discussion about this post