ನವದೆಹಲಿ: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಅವರು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಡುವುದಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.
ರಾಹುಲ್ ಅವರು ಎಡ ತೊಡೆಯ ಸ್ನಾಯುವಿನ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರ ಬದಲಿಗೆ ಸೂರ್ಯಕುಮಾರ್ ಯಾದವ್ ಅವರಿಗೆ ಸ್ಥಾನ ಕಲ್ಪಿಸಲಾಗಿದೆ ಎಂದು ಬಿಸಿಸಿಐ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಅತ್ಯುತ್ತಮ ಫಾರ್ಮ್ನಲ್ಲಿರುವ ರಾಹುಲ್ ಅನುಪಸ್ಥಿತಿ ಟೀಂ ಇಂಡಿಯಾಕ್ಕೆ ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ರಾಹುಲ್ ಅವರನ್ನು ತಂಡದ ಬ್ಯಾಟಿಂಗ್ ವಿಭಾಗದ ಪ್ರಮುಖ ಆಧಾರ ಎಂದೇ ಪರಿಗಣಿಸಲಾಗಿತ್ತು.
ಎರಡನೇ ಟೆಸ್ಟ್ ವೇಳೆಗೆ ತಂಡವನ್ನು ಕೂಡಿಕೊಳ್ಳಲಿರುವ ವಿರಾಟ್ ಕೊಹ್ಲಿ ನಾಯಕತ್ವವನ್ನೂ ನಿರ್ವಹಿಸಲಿದ್ದಾರೆ. ಆದರೆ, ರೋಹಿತ್ ಶರ್ಮಾ ಅವರಿಗೆ ಇಡೀ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.
ಇದನ್ನೂ ಓದಿ: ಐಪಿಎಲ್ 2022: ಚೆನ್ನೈಯಲ್ಲಿ ವಿದಾಯ ಪಂದ್ಯ ಆಡುವ ಬಯಕೆ ವ್ಯಕ್ತಪಡಿಸಿದ ಎಂ.ಎಸ್.ಧೋನಿ
ರಾಹುಲ್ ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್ಸಿಎ) ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
29 ವರ್ಷ ವಯಸ್ಸಿನ ರಾಹುಲ್ ಅವರು ಈವರೆಗೆ 40 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 35.16ರ ಸರಾಸರಿಯೊಂದಿಗೆ 2321 ರನ್ ಗಳಿಸಿದ್ದಾರೆ. 2016ರಲ್ಲಿ ಚೆನ್ನೈಯಲ್ಲಿ ಇಂಗ್ಲೆಂಡ್ ವಿರುದ್ಧ 199 ರನ್ ಗಳಿಸಿದ್ದು ಟೆಸ್ಟ್ ಕ್ರಿಕೆಟ್ನಲ್ಲಿ ಅವರ ಜೀವನಶ್ರೇಷ್ಠ ನಿರ್ವಹಣೆಯಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ನವೆಂಬರ್ 25ರಂದು ಕಾನ್ಪುರದಲ್ಲಿ ಆರಂಭವಾಗಲಿದೆ.
ಇನ್ನಷ್ಟು ಸುದ್ದಿ…
ವಿರಾಮದ ವೇಳೆ ವಿರಾಟ್ ಸೆಲ್ಫೀ: ಅನುಷ್ಕಾರನ್ನು ‘ಮೈ ರಾಕ್’ ಎಂದ ಕಿಂಗ್ ಕೊಹ್ಲಿ
ಟ್ವೆಂಟಿ-20 ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್: ವಿರಾಟ್ ಕೊಹ್ಲಿಯ ಹಿಂದಿಕ್ಕಿದ ಮಾರ್ಟಿನ್ ಗಪ್ಟಿಲ್
ನಾಯಕ ರೋಹಿತ್, ರಾಹುಲ್ ಅಬ್ಬರದ ಬ್ಯಾಟಿಂಗ್: ನ್ಯೂಜಿಲೆಂಡ್ ವಿರುದ್ಧ ಟ್ವೆಂಟಿ-20 ಸರಣಿ ಗೆದ್ದ ಭಾರತ
Discussion about this post