Spiritual: ಸಾಮಾನ್ಯವಾಗಿ ಜೀವಭಯ, ಭೂತದ ಭಯವಿದ್ದಾಗ, ಅದಕ್ಕೆ ಪರಿಹಾರವೇನೆಂದು ಕೇಳಿದರೆ, ಕೆಲವರು ನೀಡುವ ಸಲಹೆ ಎಂದರೆ, ಹನುಮಾನ್ ಚಾಲೀಸಾ ಹೇಳುವುದು ಅಥವಾ ಕೇಳುವುದು. ಯಾಕಂದ್ರೆ ಹನುಮಾನ್ ಚಾಲೀಸಾ ಹೇಳುವುದರಿಂದ ನಮ್ಮ ಮನಸ್ಸಿನಲ್ಲಿರುವ ಭಯ ಹೋಗಿ, ನಮಗೆ ಧೈರ್ಯ ಬರುತ್ತದೆ.
ನಮ್ಮಲ್ಲಿನ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮತ್ತು ನಮ್ಮ ಬಳಿ ನಕಾರಾತ್ಮಕ ಶಕ್ತಿ ಸುಳಿಯುವುದಿಲ್ಲವೆಂಬ ನಂಬಿಕೆ ಇದೆ. ಹಾಗಾಗಿ ನಾವಿಂದು ಹನುಮಾನ್ ಚಾಲೀಸಾ ಯಾವ ಸಮಯದಲ್ಲಿ, ಯಾವ ಸ್ಥಳದಲ್ಲಿ, ಯಾರಿಂದ ಮತ್ತು ಯಾಕಾಗಿ ರಚಿಸಲ್ಪಟ್ಟಿತು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಜೈ ಹನುಮಾನ ಜ್ಞಾನ ಗುಣ ಸಾಗರ, ಜೈ ಕಪೀಸ ತಿಹು ಲೋಕ ಉಜಾಗರ, ರಾಮದೂತ ಅತುಲಿತ ಬಲಧಾಮ, ಅಂಜನಿಪುತ್ರ ಪವನ ಸುತ ನಾಮ.. ಹೀಗೆ ಮುಖ್ಯಪ್ರಾಣನ ಗುಣಗಾನ ಮಾಡಿ ತುಳಸೀದಾಸರು ಹನುಮಾನ್ ಚಾಲೀಸಾವನ್ನ ರಚಿಸಿದರು. ಇಷ್ಟು ಚಂದದ, ಶಕ್ತಿಯುತವಾದ ಹನುಮಾನ್ ಚಾಲೀಸಾ ರಚಿಸುವಾಗ ತುಳಸೀದಾಸರು ಜೈಲಿನಲ್ಲಿದ್ದರು.
ಇವರನ್ನು ಜೈಲಿಗೆ ಹಾಕಿದ್ದು, ಮೊಘಲ್ ಚಕ್ರವರ್ತಿ ಜಲಾಲುದ್ದೀನ್ ಮೊಹಮ್ಮದ್ ಅಕ್ಬರ್. ತುಳಸೀದಾಸರಂಥ ಸಾಧು ಸಂತರನ್ನ ಜೈಲಿಗೆ ಹಾಕಲು ಕಾರಣವೇನೆಂದರೆ, ತುಳಸೀದಾಸರು, ಜಲಾಲುದ್ದೀನ್ ಮೊಹಮ್ಮದ್ ಅಕ್ಬರ್‌ನನ್ನು ಕಂಡು ಕೈ ಮುಗಿದಿರಲಿಲ್ಲವಂತೆ. ಇದೇ ದೊಡ್ಡ ಅಪರಾಧವೆಂಬಂತೆ, ಜಲಾಲುದ್ದೀನ್ ತುಳಸೀದಾಸರಿಗೆ 40 ದಿನ ಸೆರೆವಾಸದ ಶಿಕ್ಷೆ ನೀಡಿದ್ದ.
ಸೆರೆವಾಸ ಅನುಭವಿಸುತ್ತ ತುಳಸೀದಾಸರು, ಹನುಮಾನ್ ಚಾಲೀಸಾವನ್ನು ರಚಿಸಿ, ಭಕ್ತಿಯಿಂದ ಪಠಿಸಲು ಶುರು ಮಾಡಿದರು. ದಾಸರು ಹನುಮಾನ್ ಚಾಲೀಸಾ ಪಠಿಸಲು ಶುರುಮಾಡಿದ ಕೆಲ ದಿನಗಳಲ್ಲೇ, ಜಲಾಲುದ್ದೀನ್ ರಾಜ್ಯವಾಗಿದ್ದ ಫತೇಪುರ್ ಸಿಕ್ರಿಯಲ್ಲಿ ಅಚ್ಚರಿಯ ಘಟನೆಗಳು ಜರುಗತೊಡಗಿದವು.
ದೈತ್ಯ ಮಂಗಗಳು ರಾಜ್ಯಕ್ಕೆ ಕಾಲಿಟ್ಟು, ಕಾಟ ನೀಡಲು ಆರಂಭಿಸಿದವು. ಜನರ ಆಹಾರ ಕಿತ್ತು ತಿನ್ನಲು ಪ್ರಾರಂಭಿಸಿದವು. ಇಷ್ಟಕ್ಕೇ ನಿಲ್ಲದ ವಾನರ ಸೇನೆ, ಅಕ್ಬರ್‌ನ ಆಸ್ಥಾನಕ್ಕೂ ಲಗ್ಗೆ ಇಟ್ಟವು. ಅಲ್ಲಿನ ಆಹಾರಗಳು ತಿಂದವು. ಅಲ್ಲಿನ ಮಂತ್ರಿ ಮಹೋದಯರಿಗೆಲ್ಲ ತೊಂದರೆ ಕೊಡಲು ಶುರುಮಾಡಿದವು.
ವಾನರ ಸೇನೆಯ ದಾಂಧಲೆ ನೋಡಿ, ಅಕ್ಬರ್ ಚಿಂತಾಕ್ರಾಂತನಾದ. ಮಂತ್ರಿಗಳನ್ನು ಕರೆಸಿ ಮಂಗಗಳನ್ನು ಓಡಿಸಲು ವ್ಯವಸ್ಥೆ ಮಾಡಲು ಹೇಳಿದ. ಬೇಟೆಗಾರರನ್ನು, ಮಂಗಗಳನ್ನು ಬಂಧಿಸುವವರನ್ನೆಲ್ಲ ಕರೆಸಿ, ಮಂಗಗಳನ್ನು ಓಡಿಸಲು ಪ್ರಯತ್ನಿಸಿದ. ಆದರೆ ಅವರ್ಯಾರೂ ಮಂಗಗಳಿಗೆ ತೊಂದರೆ ಕೊಡಲಾಗಲಿಲ್ಲ. ಬಂಧಿಸಲಾಗಲಿಲ್ಲ.
ಬದಲಾಗಿ ಅರಮನೆಯಲ್ಲಿ ಮಂಗಗಳ ಕಾಟ ದುಪ್ಪಟ್ಟಾಯಿತು. ಈ ವೇಳೆ ಅರಮನೆಯಲ್ಲಿದ್ದ ವೃದ್ಧ ಮಂತ್ರಿಯೊಬ್ಬರು ಅಕ್ಬರ್‌ನನ್ನು ಕುರಿತು, ನಿಮಗೆ ಕೈ ಮುಗಿಯಲಿಲ್ಲವೆಂಬ ಕಾರಣಕ್ಕೆ ದೈವಿಕ ಶಕ್ತಿಯುಳ್ಳ ತುಳಸೀದಾಸರನ್ನು ನೀವು ಬಂಧನದಲ್ಲಿಟ್ಟಿರಿ. ಇದೇ ಕಾರಣಕ್ಕೆ ಅರಮನೆಯಲ್ಲಿ, ರಾಜ್ಯದಲ್ಲಿ ಇಷ್ಟೆಲ್ಲ ತೊಂದರೆ ಸಂಭವಿಸಿದೆ. ನೀವು ತಕ್ಷಣ ತುಳಸೀದಾಸರನ್ನು ಬಿಡಿಗಡೆ ಮಾಡಿ, ಅವರಲ್ಲಿ ಕ್ಷಮೆ ಕೇಳಿ ಎಂದು ಸಲಹೆ ನೀಡುತ್ತಾರೆ.
ಮಂತ್ರಿಗಳ ಮಾತಿನಂತೆ ರಾಜ ತುಳಸೀದಾಸರನ್ನು ಬಿಡುಗಡೆಗೊಳಿಸಿ, ತನ್ನ ತಪ್ಪಿಗೆ ಕ್ಷಮೆ ಕೇಳುತ್ತಾನೆ. ಇದರೊಂದಿಗೆ ತಮ್ಮ ರಾಜ್ಯಕ್ಕೆ ಮಂಗಗಳು ದಾಳಿ ಮಾಡಲು ಕಾರಣವೇನು ಅಂತಾ ಕೇಳಿದಾಗ, ತುಳಸೀದಾಸರು ತಾವು ರಚಿಸಿದ ಹನುಮಾನ್ ಚಾಲೀಸಾ ಬಗ್ಗೆ ವಿವರಿಸುತ್ತಾರೆ.
ನಾನು ಭಕ್ತಿಯಿಂದ ಹನುಮನನ್ನು ನೆನೆದು ಹನುಮಾನ್ ಚಾಲೀಸಾವನ್ನು ರಚಿಸಿ, ಪಠಿಸಿದೆ. ಈ ಸೆರೆವಾಸದಿಂದ ಆದಷ್ಟು ಬೇಗ ನನಗೆ ಮುಕ್ತಿ ಕೊಡಿಸು ಎಂದು ಬೇಡಿದೆ. ನನ್ನ ಕಷ್ಟವನ್ನು ಅರಿತ ಹನುಮ, ಈ ರೀತಿಯಾಗಿ ನನ್ನನ್ನು ಸೆರೆವಾಸದಿಂದ ಬಿಡುಗಡೆಗೊಳಿಸಿದ. ಇದೇ ರೀತಿ ಯಾರು ಭಕ್ತಿಯಿಂದ ಹನುಮಾನ್ ಚಾಲೀಸಾವನ್ನು ಪಠಿಸುತ್ತಾರೆ.
ಅಥವಾ ಕೇಳಿಸಿಕೊಳ್ಳುತ್ತಾರೋ, ಅವರ ಕಷ್ಟಗಳನ್ನ ಹನುಮ ಪರಿಹರಿಸುತ್ತಾನೆ. ಅವರಲ್ಲಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ. ಜೀವಭಯ ದೂರವಾಗುತ್ತದೆ. ಪ್ರತಿನಿತ್ಯ ಹನುಮಾನ್ ಚಾಲೀಸಾ ಪಠಿಸುವವರಿಗೆ ಮಾಟ ಮಂತ್ರ ಪ್ರಯೋಗಗಳು ತಗುಲುವುದಿಲ್ಲ. ದುಷ್ಟ ಶಕ್ತಿಗಳು ಅವರ ಬಳಿ ಸುಳಿಯುವುದಿಲ್ಲ.
ಒಟ್ಟಾರೆಯಾಗಿ ಹನುಮಾನ್ ಚಾಲೀಸಾ ಪಠಿಸುವವರು ಧೈರ್ಯವಂತರಾಗಿರುತ್ತಾನೆ. ಸಕಲ ಕಷ್ಟಗಳನ್ನು ಎದುರಿಸುವ ಶಕ್ತಿ ಅವರಲ್ಲಿರುತ್ತದೆ. ಆಂಜನೇಯನ ಕೃಪೆ ಅವರ ಮೇಲಿರುತ್ತದೆ ಎಂದು ಹೇಳುತ್ತಾರೆ.
Discussion about this post