ಬೆಂಗಳೂರು: ಭಾರತೀಯ ಕ್ರಿಕೆಟ್‌ನ ಸ್ಪಿನ್ ಬೌಲಿಂಗ್ ವಿಭಾಗದ ಪ್ರಮುಖ ಹೆಸರುಗಳಲ್ಲೊಂದು ಹರಭಜನ್ ಸಿಂಗ್. ತಮ್ಮ ವೈಯಕ್ತಿಕ ಸಾಧನೆಗಳಿಂದಲೇ ಹಲವು ಬಾರಿ ಭಾರತೀಯ ಕ್ರಿಕೆಟ್‌ಗೆ ಹೆಮ್ಮೆಯ ಕ್ಷಣಗಳನ್ನು ತಂದಿರುವ ಸಾಧಕ. ಇಎಎಸ್ ಪ್ರಸನ್ನ, ಬಿಎಸ್ ಚಂದ್ರಶೇಖರ್, ಬಿಷನ್‌ಸಿಂಗ್ ಬೇಡಿ ಮುಂತಾದ ಸ್ಪಿನ್ ದಿಗ್ಗಜರ ಸ್ಪಿನ್ ವೈಭವ ಕಾಲದ ನಂತರ ಅದನ್ನು ಮುಂದುವರೆಸಿದ ಕೀರ್ತಿ ಕರ್ನಾಟಕದ ಮತ್ತೊಬ್ಬ ಸಾಧಕ ಅನಿಲ್ ಕುಂಬ್ಳೆಯೊಂದಿಗೆ ಹರ್ಭಜನ್ ಸಿಂಗ್‌ರದ್ದು.
ತಮ್ಮ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಅವರು ದಾಟಿರುವ ಮೈಲಿಗಲ್ಲುಗಳು ನೂರಾರು, ಆಡಿರುವ ಸ್ಫೂರ್ತಿದಾಯಕ ಆಟ ಮರೆಯಲಾರದಂತಹದು. ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್ ಸಾಧನೆ ಮಾಡಿದ ಆಟಗಾರ ಹರ್ಭಜನ್ ಸಿಂಗ್. ಅದೂ ಎಂತಹ ಪಂದ್ಯದಲ್ಲಿ? ಸತತ 15 ಜಯಗಳನ್ನು ಸಾಧಿಸಿ ಇನ್ನೊಂದು ಜಯ ಸಾಧಿಸಿದ್ದರೆ ವಿಶ್ವದಾಖಲೆ ನಿರ್ಮಿಸುತ್ತಿದ್ದ ಆಸ್ಟ್ರೇಲಿಯಾದೆದುರು 2001ರ ಕಲ್ಕತ್ತಾ ಟೆಸ್ಟ್‌ನಲ್ಲಿ. ಅವರ ಸತತ ಗೆಲುವಿನ ಸರಣಿಯನ್ನು ಮುರಿದಿದ್ದೇ ಭಾರತ. ಆ ಸರಣಿಯಲ್ಲಿ 32 ವಿಕೆಟ್‌ಗಳನ್ನು ಪಡೆದ ಹರ್ಭಜನ್ ಸಾಧನೆ ಅದ್ವಿತೀಯ.
ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 417 ವಿಕೆಟ್‌ಗಳು, ಏಕದಿನ ಪಂದ್ಯಗಳಲ್ಲಿ 269 ವಿಕೆಟ್‌ಗಳು ಹಾಗೂ T20 ಪಂದ್ಯಗಳಲ್ಲಿ 25 ವಿಕೆಟ್‌ಗಳನ್ನು ಪಡೆದಿದ್ದಾರೆ ಹರ್ಭಜನ್ ಸಿಂಗ್. ಇದಲ್ಲದೇ ಭಾರತ ಗೆದ್ದ ಎರಡು ವಿಶ್ವಕಪ್ (2011ರ ಏಕದಿನ ಪಂದ್ಯಾವಳಿ ಹಾಗೂ 2007ರ T20 ಪಂದ್ಯಾವಳಿ) ಪಂದ್ಯಾವಳಿಗಳಲ್ಲೂ ಹರ್ಭಜನ್‌ರದ್ದು ಪ್ರಮುಖ ಪಾತ್ರ. ಇದಲ್ಲದೇ ದೇಶೀಯ ಪಂದ್ಯಾವಳಿ ಐಪಿಎಲ್‌ನಲ್ಲೂ ಅವರದು ಅದ್ಭುತ ಸಾಧನೆಯೇ.
ಇಂತಹ ಶ್ರೇಷ್ಠ ಸಾಧನೆ ಮಾಡಿರುವ ಹರ್ಭಜನ್ ಕಳೆದ ಶುಕ್ರವಾರ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಈ ನಿರ್ಧಾರವನ್ನು ಟ್ವಿಟರ್ ಮೂಲಕ ಘೋಷಿಸಿದ ಹರ್ಭಜನ್ ಸಿಂಗ್ ಈ ಮೂಲಕ ಭಾರತೀಯ ಕ್ರಿಕೆಟ್‌ನ ಮತ್ತೊಂದು ವರ್ಣರಂಜಿತ ಅಧ್ಯಾಯ ಮುಗಿಯಿತೆಂದು ಘೋಷಿಸಿದಂತಾಗಿದೆ.
ಇತ್ತೀಚೆಗೆ ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ಹರ್ಭಜನ್ ನಾನು ಭಾರತವನ್ನು ಪ್ರತಿನಿಧಿಸಲು ಪ್ರಾರಂಭಿಸಿದಾಗ ಆಸ್ಟ್ರೇಲಿಯಾ ಕ್ರಿಕೆಟ್ ಪ್ರಪಂಚದಲ್ಲಿ ಅಗ್ರಮಾನ್ಯ ತಂಡವಾಗಿತ್ತು. ಅವರೆದುರು ಎಷ್ಟು ಹೆಚ್ಚು ಆಡುತ್ತೇವೋ ಅಷ್ಟೂ ನಮ್ಮ ಆಟ ಉತ್ತಮಗೊಳ್ಳುತ್ತದೆ ಎಂದು ನಾನು ಅರಿತಿದ್ದೆ. ಅಂತಹ ಕಠಿಣ ತಂಡದೆದುರು ಆಡುವ ಸವಾಲನ್ನು ನೇರವಾಗಿಯೇ ಸ್ವೀಕರಿಸಲು ನಾನು ಬಯಸುತ್ತಿದ್ದೆ. ಇದರಲ್ಲಿ ನಾನು ಯಶಸ್ವಿಯೂ ಆಗಿದ್ದು ನಾನು ಹೆಚ್ಚಿನ ವಿಕೆಟ್‌ಗಳನ್ನು ಪಡೆದಿರುವುದೂ ಆಸ್ಟ್ರೇಲಿಯಾ ತಂಡದ ವಿರುದ್ಧವೇ. ನಾನು ಯಾವಾಗಲೂ ಆಸ್ಟ್ರೇಲಿಯಾದೆದುರು ಬೌಲಿಂಗ್ ಮಾಡುವುದನ್ನು ಆನಂದಿಸುತ್ತಿದ್ದೆ ಎಂದಿದ್ದಾರೆ ಹರ್ಭಜನ್ ಸಿಂಗ್.
Harbhajan Singh says I always enjoyed bowling against Australia
ಇದನ್ನೂ ಓದಿ: Cricket: 2018-20ರ ಅವಧಿಯಲ್ಲಿ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಬಗ್ಗೆ ಗಂಭೀರವಾಗಿ ಆಲೋಚಿಸಿದ್ದೆ: ಅಶ್ವಿನ್
ಇದನ್ನೂ ಓದಿ: ಏಕದಿನ ಕ್ರಿಕೆಟ್: ಟೀಂ ಇಂಡಿಯಾ ನಾಯಕತ್ವ ಬಿಟ್ಟುಕೊಡಲು ನಿರಾಕರಿಸಿದ್ದರೇ ಕಿಂಗ್ ಕೊಹ್ಲಿ?
Discussion about this post