ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮಾಜಿ ಕ್ರಿಕೆಟಿಗ, ‘ದಿ ವಾಲ್’ ಅಥವಾ ‘ಗೋಡೆ’ ಖ್ಯಾತಿಯ ಕರ್ನಾಟಕದ ರಾಹುಲ್ ದ್ರಾವಿಡ್ ಅವರನ್ನು ನೇಮಕ ಮಾಡಿರುವುದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಘೋಷಿಸಿದೆ.
ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಬಳಿಕ ಹಾಲಿ ಕೋಚ್ ರವಿಶಾಸ್ತ್ರಿ ಅವರ ಅವಧಿ ಮುಕ್ತಾಯವಾಗಲಿದೆ. ನವೆಂಬರ್ ಮಧ್ಯದಲ್ಲಿ ಭಾರತದಲ್ಲಿ ನ್ಯೂಜಿಲೆಂಡ್ ವಿರುದ್ಧ ಕ್ರಿಕೆಟ್ ಸರಣಿ ನಡೆಯಲಿದ್ದು, ದ್ರಾವಿಡ್ ಅವರು ಕೋಚ್ ಆಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಓದಿ: ICC T20 WC | ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಗೆಲುವು: ಹಿಂದಿನ ಸೋಲುಗಳ ಬಗ್ಗೆ ರೋಹಿತ್ ಹೇಳಿದ್ದೇನು?
ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ಕೆಲಸ ಮಾಡುವುದು ಬಹಳ ದೊಡ್ಡ ಗೌರವ. ಉತ್ತಮ ಕೆಲಸ ಮಾಡುವತ್ತ ಗಮನ ಹರಿಸುತ್ತೇನೆ ಎಂದು ದ್ರಾವಿಡ್ ಪ್ರತಿಕ್ರಿಯಿಸಿದ್ದಾರೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮುಖ್ಯಸ್ಥರಾಗಿರುವ ದ್ರಾವಿಡ್ ಅವರು ಮುಖ್ಯ ಕೋಚ್ ಆಗಿ ಆಯ್ಕೆಯಾಗುವುದು ಈಗಾಗಲೇ ಬಹುತೇಕ ಖಚಿತವಾಗಿತ್ತು. ಕಳೆದ ತಿಂಗಳು ಐಪಿಎಲ್ ಕ್ರಿಕೆಟ್ ಟೂರ್ನಿ ಸಂದರ್ಭದಲ್ಲಿ ದುಬೈಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ದ್ರಾವಿಡ್ ಜೊತೆ ಮಾತುಕತೆ ನಡೆಸಿ ಕೋಚ್ ಹುದ್ದೆ ಒಪ್ಪಿಕೊಳ್ಳುವಂತೆ ಮನವೊಲಿಸಿದ್ದರು. ಬಳಿಕ ಔಪಚಾರಿಕವಾಗಿ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು.
1996ರಿಂದ 2012ರ ಅವಧಿಯಲ್ಲಿ ಭಾರತ ತಂಡದ ಪರ 164 ಟೆಸ್ಟ್, 344 ಏಕದಿನ ಪಂದ್ಯಗಳನ್ನು ಆಡಿರುವ ದ್ರಾವಿಡ್ ಅವರು ತಂಡಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪರ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದಾರೆ.
ಓದಿ: cricket arena: ಸೋಲು, ಗೆಲುವಿನ ಹೊಣೆ ಧೋನಿ ಹೆಗಲಿಗೆ ಬಿತ್ತಾ…
ಮುಖ್ಯ ಕೋಚ್ ಆಗಿ ದ್ರಾವಿಡ್ ನೇಮಕವಾಗಿರುವುದನ್ನು ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಸ್ವಾಗತಿಸಿದ್ದಾರೆ. ದ್ರಾವಿಡ್ ಜೊತೆ ಕೆಲಸ ಮಾಡುವುದನ್ನು ಎದುರುನೋಡುತ್ತಿರುವುದಾಗಿ ಅವರು ಹೇಳಿದ್ದಾರೆ.
Discussion about this post