ನವದೆಹಲಿ: ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ಗೆ ಟೀಂ ಇಂಡಿಯಾ ನಾಯಕನಾಗಿ ಇತ್ತೀಚೆಗಷ್ಟೇ ಆಯ್ಕೆಯಾಗಿರುವ ರೋಹಿತ್ ಶರ್ಮಾ ಅವರು ಗಾಯದಿಂದ ಬಳಲುತ್ತಿದ್ದಾರೆ. ಅವರು ಸೂಕ್ತ ಸಮಯದಲ್ಲಿ ಗುಣಮುಖರಾಗಿ ತಂಡಕ್ಕೆ ಮರಳದಿದ್ದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಕನ್ನಡಿಗ ಕೆ.ಎಲ್.ರಾಹುಲ್ ಅವರಿಗೆ ನಾಯಕತ್ವದ ಹೊಣೆ ವಹಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಮಂಡಿರಜ್ಜು ನೋವಿನಿಂದ ಬಳಲುತ್ತಿರುವ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಸದ್ಯ ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: IND vs SA Test Cricket: ಮಳೆ ಕಾಟ, ಎರಡನೇ ದಿನ ನಡೆಯದ ಆಟ
ಯುಎಇಯಲ್ಲಿ ನಡೆದಿದ್ದ ಟ್ವೆಂಟಿ–20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ನಾಯಕತ್ವ ತೊರೆದಿದ್ದರು. ನಂತರ ಏಕದಿನ ಕ್ರಿಕೆಟ್‌ನಲ್ಲೂ ತಂಡದ ನಾಯಕತ್ವದಿಂದ ಅವರನ್ನು ತೆರವುಗೊಳಿಸಲಾಗಿತ್ತು. ಎರಡೂ ಮಾದರಿಯ ಕ್ರಿಕೆಟ್‌ಗೆ ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ಐಸಿಸಿ ಟ್ವೆಂಟಿ–20 ವಿಶ್ವಕಪ್ ಬಳಿಕ ಭಾರತದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಟ್ವೆಂಟಿ–20 ಸರಣಿಯ ನಾಯಕತ್ವವನ್ನು ರೋಹಿತ್ ವಹಿಸಿಕೊಂಡಿದ್ದರು. ಸರಣಿಯನ್ನು ಭಾರತ ವೈಟ್‌ವಾಷ್ ಮಾಡಿತ್ತು.
ಬಳಿಕ ಟೀಂ ಇಂಡಿಯಾ ಉಪನಾಯಕನನ್ನಾಗಿ ಕೆ.ಎಲ್.ರಾಹುಲ್ ಅವರನ್ನು ಆಯ್ಕೆಮಾಡಲಾಗಿತ್ತು.
ಇದೀಗ, ರೋಹಿತ್ ಪೂರ್ತಿ ಚೇತರಿಸಿಕೊಂಡಿಲ್ಲ. ಅವರು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್ ಸರಣಿ ವೇಳೆಗೆ ಗುಣಮುಖರಾಗದಿದ್ದರೆ, ಕೆ.ಎಲ್. ರಾಹುಲ್ ಅವರಿಗೆ ನಾಯಕತ್ವದ ಹೊಣೆ ವಹಿಸಲಾಗುವುದು ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.
ಇದನ್ನೂ ಓದಿ: IND vs SA Test Cricket: ರಾಹುಲ್ ಆಕರ್ಷಕ ಶತಕ, ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಮೇಲುಗೈ
Discussion about this post