ನವದೆಹಲಿ: ಟಿ–20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಪಂದ್ಯ ಆಡುವ ಮೂಲಕ ಟೀಮ್ ಇಂಡಿಯಾ ಅಭಿಯಾನ ಆರಂಭಿಸಲಿದೆ. ಇದೇ 24ರಂದು ಪಂದ್ಯ ನಡೆಯಲಿದ್ದು, ಹೈ ವೋಲ್ಟೇಜ್ ಪಂದ್ಯ ವೀಕ್ಷಿಸಲು ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾತರದಿಂದಿದ್ದಾರೆ. ಪಂದ್ಯದ ಟಿಕೆಟ್‌ಗಳೂ ಈಗಾಗಲೇ ಖಾಲಿಯಾಗಿವೆ.
ಈ ಮಧ್ಯೆ, ಪಾಕಿಸ್ತಾನ ತಂಡದಿಂದ ಭಾರತಕ್ಕೆ ಹೆಚ್ಚಿನ ಸವಾಲು ಎದುರಾಗದು ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಅಜಿತ್ ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ‘ಕ್ಲಾಸ್ ಆಫ್ 2007’ ಶೋದಲ್ಲಿ ಮಾತನಾಡಿದ ಅವರು, ‘ಭಾರತ–ಪಾಕ್ ನಡುವಣ ಪಂದ್ಯದ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಇರುವುದು ನಿಜ. ಆದರೆ ಭಾರತ ತಂಡ ಈಗಿರುವ ಫಾರ್ಮ್, ಪರಿಸ್ಥಿತಿಯಿನ್ನು ಗಮನಿಸಿದರೆ ಪಾಕಿಸ್ತಾನದಿಂದ ಹೆಚ್ಚಿನ ಸವಾಲು ಎದುರಾಗದು ಎಂದೆನಿಸುತ್ತದೆ. ಆದರೂ ವಿರಾಟ್ ಕೊಹ್ಲಿ ಬಳಗವು ಪಾಕಿಸ್ತಾನ ತಂಡವನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಬಾರದು’ ಎಂದು ಎಚ್ಚರಿಕೆ ನೀಡಿದ್ದಾರೆ.
ಓದಿ: ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಮುಖ್ಯಕೋಚ್
‘ಕ್ರಿಕೆಟ್ ಒಂದು ಮೋಜಿನ ಆಟ. ಪಂದ್ಯದ ಯಾವುದೇ ಕ್ಷಣದಲ್ಲೂ ಏನು ಬೇಕಾದರೂ ಆಗಬಹುದು. ವಿಶೇಷವಾಗಿ ಟಿ–20 ಮಾದರಿಯ ಕ್ರಿಕೆಟ್‌ನಲ್ಲಿ ಪಂದ್ಯದ ಗತಿಯು ಯಾವ ಕ್ಷಣದಲ್ಲೂ ಬದಲಾಗಬಹುದು ಮತ್ತು ಮತ್ತೊಂದು ತಂಡದ ಪರ ವಾಲಬಹುದು. ಹೀಗಾಗಿ ಪಾಕಿಸ್ತಾನ ತಂಡದ ಬಗ್ಗೆ ತಾತ್ಸಾರದ ಭಾವನೆ ಸಲ್ಲ’ ಎಂದು ಅವರು ಹೇಳಿದ್ದಾರೆ.
ಟಿ–20 ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಇಂದಿನಿಂದ (ಭಾನುವಾರ) ಆರಂಭವಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ತಂಡಗಳು ಬಿ ಗುಂಪಿನ ಅರ್ಹತಾ ಸುತ್ತಿನಲ್ಲಿ ಮುಖಾಮುಖಿಯಾಗುತ್ತಿವೆ.
Discussion about this post