ನವದೆಹಲಿ: ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದ ತೆರವುಗೊಳಿಸುವ 90 ನಿಮಿಷಗಳ ಮೊದಲಷ್ಟೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಹಿತಿ ನೀಡಿತ್ತು ಎಂದು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ತಮ್ಮ ವಿರುದ್ಧ ಸುದ್ದಿ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ವದಂತಿಗಳಿಗೆ ತೆರೆ ಎಳೆಯುವ ಸಲುವಾಗಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಬುಧವಾರ ಅವರು ಪತ್ರಿಕಾಗೋಷ್ಠಿ ನಡೆಸಿದರು.
ಟ್ವೆಂಟಿ-20 ಮಾದರಿಯ ಕ್ರಿಕೆಟ್‌ನಲ್ಲಿ ತಂಡದ ನಾಯಕತ್ವವನ್ನು ಬಿಟ್ಟು ಕೊಡುವ ಬಗ್ಗೆ ಬಿಸಿಸಿಐ ಜೊತೆ ಸ್ಪಷ್ಟವಾಗಿ ಸಂವಹನ ನಡೆಸಿದ್ದೆ. ನಾನು ನಾಯಕತ್ವವನ್ನು ಯಾಕೆ ಬಿಟ್ಟು ಕೊಡುತ್ತಿದ್ದೇನೆ ಎಂಬುದನ್ನು ಬಿಸಿಸಿಐ ಉನ್ನತ ನಾಯಕರಿಗೆ ತಿಳಿಸಿದೆ. ಅಲ್ಲದೆ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಮಾದರಿಯಲ್ಲಿ ತಂಡದ ನಾಯಕತ್ವದಲ್ಲಿ ಮುಂದುವರಿಯುವುದಾಗಿಯೂ ಹೇಳಿದ್ದೆ. ನನ್ನ ನಿರ್ಧಾರಕ್ಕೆ ಬಿಸಿಸಿಐ ಮೆಚ್ಚುಗೆ ವ್ಯಕ್ತಪಡಿಸಿತ್ತು ಎಂದು ಕೊಹ್ಲಿ ಹೇಳಿದ್ದಾರೆ.
ಆದರೆ ಟ್ವೆಂಟಿ-20 ಮತ್ತು ಏಕದಿನ ಮಾದರಿಯ ಕ್ರಿಕೆಟ್‌ಗೆ ಬೇರೆಬೇರೆ ನಾಯಕನನ್ನು ಹೊಂದುವುದು ಬಿಸಿಸಿಐಗೆ ಇಷ್ಟವಿಲ್ಲ. ಹೀಗಾಗಿ ಟ್ವೆಂಟಿ-20 ಮಾದರಿಯ ಕ್ರಿಕೆಟ್‌ನಲ್ಲಿ ತಂಡದ ನಾಯಕತ್ವದಲ್ಲಿ ಮುಂದುವರಿಯುವಂತೆ ಕೊಹ್ಲಿ ಅವರಿಗೆ ಮನವಿ ಮಾಡಲಾಗಿತ್ತು. ಆದರೆ ಅವರು ಸಮ್ಮತಿಸಿರಲಿಲ್ಲ. ಹೀಗಾಗಿ ಏಕದಿನ ತಂಡದ ನಾಯಕತ್ವವನ್ನು ಬದಲಿಸಬೇಕಾಯಿತು ಎಂದು ಬಿಸಿಸಿಐ ಅಧ್ಯಕ್ಷ ಗಂಗೂಲಿ ಇತ್ತೀಚೆಗೆ ಹೇಳಿದ್ದರು.
ಇದನ್ನೂ ಓದಿ: 2019ರ ಕ್ರಿಕೆಟ್ ವಿಶ್ವಕಪ್ ತಂಡದ ಆಯ್ಕೆ ಕುರಿತ ಶಾಸ್ತ್ರಿ ಹೇಳಿಕೆಗೆ ಸರನ್‌ದೀಪ್ ತೀಕ್ಷ್ಣ ಪ್ರತಿಕ್ರಿಯೆ
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಲಭ್ಯವಿರುವುದಿಲ್ಲ ಎಂದು ಬಿಸಿಸಿ ಹೇಳಿತ್ತು. ಅವರು ಮಂಡಿರಜ್ಜು ನೋವಿನಿಂದ ಬಳಲುತ್ತಿರುವ ಕಾರಣ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಹೇಳಿತ್ತು. ಬಳಿಕ ಮಗಳ ಹುಟ್ಟುಹಬ್ಬದ ನೆಪವೊಡ್ಡಿ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹಬ್ಬಿತ್ತು. ಇದರಿಂದ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ರವಾನೆಯಾಗಿತ್ತು. ಆದರೆ ಇದಕ್ಕೆ ತೆರೆ ಎಳೆದಿರುವ ಕೊಹ್ಲಿ, ಏಕದಿನ ಸರಣಿಯಲ್ಲಿ ತಂಡಕ್ಕೆ ಲಭ್ಯವಿರುತ್ತೇನೆ. ರೋಹಿತ್ ಶರ್ಮಾ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಏಕದಿನ ಕ್ರಿಕೆಟ್: ಟೀಂ ಇಂಡಿಯಾ ನಾಯಕತ್ವ ಬಿಟ್ಟುಕೊಡಲು ನಿರಾಕರಿಸಿದ್ದರೇ ಕಿಂಗ್ ಕೊಹ್ಲಿ?
Discussion about this post