ಭಾರತದ ಪ್ರಮುಖ ಹಬ್ಬ ದಸರಾ. ಉತ್ತರ ಭಾರತದಲ್ಲಿ ದಸರಾ/ದಶಹರಾ ಎಂದೂ ಮತ್ತು ದಕ್ಷಿಣ ಭಾರತದಲ್ಲಿ ನವರಾತ್ರಿ ಎಂದೂ ಕರೆಯಲ್ಪಡುವ ಶರನ್ನವರಾತ್ರಿಯು ದೇವಿ ದುರ್ಗೆಯನ್ನು ಆರಾಧಿಸುವ ಪ್ರಮುಖವಾದ ಹಬ್ಬ. ಜಗನ್ಮಾತೆ ದುರ್ಗಾದೇವಿಯು ಅಸುರೀಶಕ್ತಿಗಳ ಮೇಲೆ ವಿಜಯ ಸಾಧಿಸಿ ತನ್ನ ಸದ್ಭಕ್ತರನ್ನು ಕಾಪಾಡಿದ ಈ ಪರ್ವಕಾಲ ದುಷ್ಟಶಕ್ತಿಗಳು ತಾತ್ಕಾಲಿಕವಾಗಿ ಎಷ್ಟೇ ವಿಜೃಂಭಿಸಿದರೂ ಅಂತಿಮವಾಗಿ ಜಯ ಸಿಗುವುದು ದೈವಶಕ್ತಿಗೇ ಎನ್ನುವ ಪರಮ ಸತ್ಯವು ಸರ್ವರ ಅನುಭವಕ್ಕೆ ಬರುವ ಕಾಲ. ಈ ವರ್ಷ ಅಕ್ಟೋಬರ್ 7ರಿಂದ ದಸರಾ ಸಂಭ್ರಮ ಆರಂಭವಾಗಲಿದೆ. 15ರಂದು ವಿಜಯದಶಮಿಯೊಂದಿಗೆ ನವರಾತ್ರಿ ಸಂಪನ್ನವಾಗಲಿದೆ.
ಕೋಟಿ-ಕೋಟಿ ದೇವಾನುದೇವತೆಗಳಿಗೂ ಚೈತನ್ಯದಾಯಿನಿಯೂ, ಸರ್ವಶಕ್ತಳೂ, ಜಗನ್ಮಾತೆಯೂ ಆದ ದೇವಿಯನ್ನು ಭಾರತದೇಶದ ವಿವಿಧ ರಾಜ್ಯಗಳಲ್ಲಿ ಆಯಾ ಪ್ರದೇಶಗಳ ಸಂಸ್ಕೃತಿ-ಸಂಪ್ರದಾಯಗಳಿಗೆ ಅನುಸಾರವಾಗಿ ಅತ್ಯಂತ ವೈಭವಪೂರ್ಣವಾಗಿ ಈ ಪರ್ವಕಾಲದಲ್ಲಿ ಆರಾಧಿಸಲಾಗುತ್ತದೆ. ಉತ್ತರ ಭಾರತದ ರಾಜ್ಯಗಳಲ್ಲಿ ದೇವಿಯ ವಿವಿಧ ರೀತಿಯ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಪೂಜಿಸಿದರೆ ದಕ್ಷಿಣ ಭಾರತದಲ್ಲಿ ಆ ಒಂಭತ್ತೂ ದಿನ ದೈನಂದಿನ ವಿಶೇಷತೆಗಳಿಗನುಣವಾಗಿ ದೇವಿಯ ವಿವಿಧ ರೂಪಗಳನ್ನು ಆರಾಧಿಸುತ್ತಾರೆ.
ಆಶ್ವಯುಜ ಶುಕ್ಲ ಪಾಡ್ಯಮಿಯಂದು ಪ್ರಾರಂಭವಾಗುವ ನವರಾತ್ರಿ ಉತ್ಸವ ಘಟಸ್ಥಾಪನೆಯಿಂದ ಪ್ರಾರಂಭವಾಗುತ್ತದೆ. ಮೊದಲನೆಯ ದಿನ ದುರ್ಗಾದೇವಿಯನ್ನು ಪ್ರತಿಷ್ಠಾಪಿಸುವ ಕೋಣೆಯಲ್ಲಿ ಮಣ್ಣನ್ನು ಚೌಕಾಕಾರವಾಗಿ ಹಾಕಿ ಧಾನ್ಯಗಳ ಬೀಜಗಳನ್ನು ಬಿತ್ತಲಾಗುತ್ತದೆ. ಇದನ್ನು “ಘಟಸ್ಥಾಪನೆ”ಯೆಂದೂ ಕರೆಯಲಾಗುತ್ತದೆ. ಇದು ತಾಯಿ ದುರ್ಗೆಯನ್ನು ಆಹ್ವಾನಿಸುವ ಕ್ರಿಯೆಯಾಗಿದ್ದು ಇದನ್ನು ಒಂದು ಶುಭಮುಹೂರ್ತದಲ್ಲಿ ನೆರವೇರಿಸಲಾಗುತ್ತದೆ.
ಅಷ್ಟಾದಶ ಶಕ್ತಿಪೀಠಗಳಲ್ಲಿ ಹಾಗೂ ದೇವಿಯು ಪ್ರಮುಖವಾಗಿ ಪೂಜಿಸಲ್ಪಡುವ ಎಲ್ಲಾ ದೇವಾಲಯಗಳಲ್ಲಿ ನವರಾತ್ರಿ ಉತ್ಸವಗಳು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತವೆ. ದೇವಿ ಆರಾಧನೆಯ ಅಂಗವಾಗಿ ಚಂಡೀಹೋಮ ಮುಂತಾದ ಅನೇಕ ಹೋಮ-ಹವನಗಳು ಹಾಗೂ ಅರ್ಚನೆ-ಆರಾಧನೆಗಳು ನಡೆಯುತ್ತವೆ.

ನಿತ್ಯಪೂಜಾ ವಿಧಾನಗಳು
ಪಾಡ್ಯಮಿ: ನವರಾತ್ರಿಯ ಪ್ರಥಮ ದಿನದಂದು ದೇವಿಯನ್ನು ಶೈಲಪುತ್ರಿಯೆಂದು ಪರ್ವತರಾಜನ ಪುತ್ರಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಈ ರೂಪದಲ್ಲಿ ತಾಯಿಯು ವೃಷಭಾರೂಢಳಗಿರುತ್ತಾಳೆ, ಅಂದರೆ ಎತ್ತನ್ನು ವಾಹನವಾಗಿಸಿಕೊಂಡಿದ್ದಾಳೆ. ದೇವಿಯು ಚಂದ್ರನನ್ನು ತನ್ನ ಮಸ್ತಿಷ್ಕದಲ್ಲಿ ಧರಿಸಿ, ಬಲಗೈಯಲ್ಲಿ ತ್ರಿಶೂಲವನ್ನು ಧರಿಸಿ, ಎಡಗೈಯಲ್ಲಿ ಕಮಲದ ಹೂವನ್ನು ಹಿಡಿದು, ಶ್ವೇತವಸ್ತ್ರಧಾರಿಣಿಯಾಗಿರುತ್ತಾಳೆ. ಇವಳಿಗೆ ಮಲ್ಲಿಗೆ ಹೂವು ಅತ್ಯಂತ ಪ್ರಿಯವಾಗಿದ್ದು ಅದರಿಂದ ಪೂಜಿಸಿದರೆ ಪ್ರಸನ್ನಳಾಗುತ್ತಾಳೆ. ಮೂಲಾಧಾರ ಚಕ್ರದಲ್ಲಿ ಸ್ಥಿತಳಾಗಿದ್ದು, ಸಾಧಕರಿಗೆ ಇಲ್ಲಿಂದಲೇ ಯೋಗಸಾಧನೆಯ ಆರಂಭವಾಗುತ್ತದೆ. ಇವಳನ್ನು ಆರಾಧಿಸುವುದರಿಂದ ಮನಸ್ಸಿನ ಚಂಚಲತೆಯು ದೂರವಾಗಿ ಏಕಾಗ್ರತೆ ಸಾಧ್ಯವಾಗುತ್ತದೆ ಹಾಗೂ ಮಾತೃತ್ವ ಸಿದ್ಧಿಯಾಗುತ್ತದೆ.
ಬಿದಿಗೆ: ನವರಾತ್ರಿಯ ಎರಡನೇ ದಿನವಾದ ಬಿದಿಗೆಯಂದು ತಾಯಿಯನ್ನು ಬ್ರಹ್ಮಚಾರಿಣಿಯೆಂದು ಪೂಜಿಸಲಾಗುತ್ತದೆ. ದೇವಿಯನ್ನು ತಪಸ್ವಿನಿಯ ರೂಪದಲ್ಲಿ ಆರಾಧಿಸಲಾಗುತ್ತದೆ. ಈಕೆಯನ್ನು ಸಂತೃಪ್ತಿಗೊಳಿಸಿದರೆ ವಿವಾಹ ಸಂಬಂಧಿ ದೋಷಗಳೇನಾದರೂ ಇದ್ದರೆ ನಿವಾರಣೆಯಾಗಿ ಶೀಘ್ರ ವಿವಾಹಯೋಗ ಉಂಟಾಗುತ್ತದೆನ್ನುವ ಪ್ರತೀತಿಯಿದೆ.
ತದಿಗೆ: ಮೂರನೇ ದಿನವಾದ ತದಿಗೆಯಂದು ತಾಯಿಯನ್ನು “ಚಂದ್ರಘಂಟಾ” ಎಂಬ ಹೆಸರಿನಿಂದ ಆರಾಧಿಸಲಾಗುತ್ತದೆ. ಈ ತಾಯಿಯನ್ನು ಆರಾಧಿಸುವುದರಿಂದ ಶತೃಗಳ ದಮನವಾಗುತ್ತದೆನ್ನುವ ನಂಬಿಕೆಯಿದೆ. ಶತ್ರುಗಳ ನಾಶವಾದರೆ ಮನುಷ್ಯ ನಿರಾತಂಕವಾಗಿ ಅಭಿವೃದ್ಧಿಯನ್ನು ಸಾಧಿಸಬಹುದೆನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ಚತುರ್ಥಿ: ನವರಾತ್ರಿಯ ನಾಲ್ಕನೆಯ ದಿನದಂದು ತಾಯಿಯನ್ನು “ಕೂಷ್ಮಾಂಡ” ಎಂಬ ಹೆಸರಿನಿಂದ ಯಕ್ಷಿಯ ರೂಪದಲ್ಲಿ ಆರಾಧಿಸಲಾಗುತ್ತದೆ. ತಾಯಿಯನ್ನು ಈ ರೂಪದಲ್ಲಿ ಆರಾಧಿಸುವುದರಿಂದ ಉಂಟಾಗುವ ಶುಭಫಲಗಳೆಂದರೆ ರೋಗನಿವಾರಣೆ ಹಾಗೂ ಉತ್ತಮ ಆರೋಗ್ಯವರ್ಧನೆ. ಆರೋಗ್ಯ ಭಾಗ್ಯಕ್ಕಿಂತಾ ಹೆಚ್ಚಿನ ಐಶ್ವರ್ಯ ಯಾವುದಿದೆ?
ಪಂಚಮಿ: ನವರಾತ್ರಿಯ ಐದನೆಯ ದಿನದಂದು ತಾಯಿಯನ್ನು “ಸ್ಕಂದಮಾತಾ” ಎನ್ನುವ ಹೆಸರಿಂದ ಪೂಜಿಸಲಾಗುತ್ತದೆ. ಜಗತ್ತನ್ನೇ ಸೃಷ್ಟಿಸಿದ ಜಗನ್ಮಾತೆ ತನ್ನ ಅತೀವ ಪುತ್ರವಾತ್ಸಲ್ಯದ ಪ್ರತಿರೂಪವೇ ಆಗಿ ಕಂಗೊಳಿಸುವ ಅತ್ಯಂತ ಶುಭಸಂದರ್ಭವಿದಾಗಿದ್ದು ತನ್ನ ಎಲ್ಲಾ ಸಂತಾನದ ಮೇಲೆ ತನ್ನ ಕರುಣಾಪೂರ್ಣ ದೃಷ್ಟಿಯಿಂದ ಹರಸುತ್ತಾಳೆ. ಈ ತಾಯಿಯ ಆರಾಧನೆಯಿಂದ ಉಂಟಾಗುವ ಶುಭಫಲಗಳೆಂದರೆ ಉತ್ತಮ ಸಂತಾನಪ್ರಾಪ್ತಿ, ಮಕ್ಕಳ ಶ್ರೇಯೋಭಿವೃದ್ಛಿ.
ಷಷ್ಠಿ: ನವರಾತ್ರಿಯ ಆರನೆಯ ದಿನದಂದು ಪೂಜಿಸಲಾಗುವ ತಾಯಿಯ ರೂಪದ ಹೆಸರು ಕಾತ್ಯಾಯಿನಿ. ಕತ್ಯಗೋತ್ರದಲ್ಲಿ ಉದ್ಭವಿಸಿದವಳಾದದ್ದರಿಂದ ಬಂದ ಹೆಸರಿದು. “ಗೌರಿ” ಎಂದೂ ಕರೆಯುತ್ತಾರೆ. ಈ ತಾಯಿಯ ಆರಾಧನೆಯಿಂದ ವಂಶಾಭಿವೃದ್ಧಿ ಹಾಗೂ ವಿವಾಹಪ್ರಾಪ್ತಿಯ ಶುಭಫಲಗಳುಂಟಾಗುತ್ತವೆ.
ಸಪ್ತಮಿ: ನವರಾತ್ರಿಯ ಏಳನೆಯ ದಿನದಂದು ತಾಯಿಯನ್ನು “ಕಾಳರಾತ್ರಿ” ಎನ್ನುವ ಹೆಸರಿನಿಂದ ಪೂಜಿಸಲಾಗುತ್ತದೆ. ಭಯಂಕರ ರೂಪದಿಂದ ಮಾನವಮಾತ್ರದವರಲ್ಲಿ ಭಯ ಹುಟ್ಟಿಸುವಂತೆ ತೋರುತ್ತಾಳಾದರೂ ತನ್ನ ಭಕ್ತರನ್ನು ಬಾಧಿಸುವವರನ್ನು ನಾಶ ಮಾಡುತ್ತಾಳೆ, ಅದಕ್ಕಾಗಿ ಇಂತಹ ರೂಪ ಧರಿಸಿದ್ದಾಳೆ. ತಾಯಿಯನ್ನು ಈ ರೂಪದಲ್ಲಿ ಪೂಜಿಸಿದರೆ ಶತ್ರುಮರ್ದನ, ಯತ್ನಿಸಿದ ಕಾರ್ಯಗಳಲ್ಲಿ ಜಯ, ಮತ್ತಿತರ ಶುಭಫಲಗಳ ಪ್ರಾಪ್ತಿಯುಂಟಾಗುವುವೆಂಬ ಅಚಲ ನಂಬಿಕೆಯಿದೆ.
ಅಷ್ಟಮಿ: ನವರಾತ್ರಿಯ ಎಂಟನೆಯ ದಿನದಂದು ತಾಯಿಯನ್ನು “ಮಹಾಗೌರಿಯ” ರೂಪದಲ್ಲಿ ಆರಾಧಿಸಲಾಗುತ್ತದೆ. ನಿರ್ಮಲ ಸ್ವರೂಪದಿಂದ ಕಂಗೊಳಿಸುವ ಈ ತಾಯಿಯನ್ನು ಭಕ್ತಿ-ಶ್ರದ್ಧೆಗಳಿಂದ ಪೂಜಿಸಿದರೆ ಪರಿಪೂರ್ಣಜ್ಞಾನವನ್ನು ಪ್ರಸಾದಿಸುತ್ತಾಳೆ.
ನವಮಿ: ನವರಾತ್ರಿಯ ಒಂಭತ್ತನೆಯ ದಿನದಂದು ಪೂಜಿಸಲ್ಪಡುವ ತಾಯಿಯ ದಿವ್ಯರೂಪದ ಹೆಸರು “ಸಿದ್ಧಿದಾತ್ರಿ.” ಹೆಸರೇ ಸೂಚಿಸುವಂತೆ ಈ ತಾಯಿಯನ್ನು ಭಕ್ತಿಯಿಂದ ಆರಾಧಿಸಿದರೆ ಸರ್ವಸಿದ್ಧಿಗಳನ್ನೂ ನೀಡುತ್ತಾಳೆ. ಇಷ್ಟಾರ್ಥಸಿದ್ಧಿಯುಂಟಾಗಿ ಯತ್ನಿಸಿದ ಕಾರ್ಯಗಳೆಲ್ಲದರಲ್ಲೂ ಜಯ ನೀಡುತ್ತಾಳೆ.
ಈ ರೀತಿ ಒಂಭತ್ತೂ ದಿನಗಳು ತಾಯಿಯನ್ನು ವಿವಿಧ ರೂಪಗಳಲ್ಲಿ ಆರಾಧಿಸಿದ ನಂತರ ವಿಜಯದಶಮಿಯಂದು ಚಂಡಿಹೋಮವೇ ಮೊದಲಾದ ಹೋಮಗಳಿಂದಲೂ ಉತ್ಸವ-ಮೆರವಣಿಗೆಗಳಿಂದಲೂ ವೈಭವಪೂರಿತವಾಗಿ ಆಚರಿಸಲಾಗುತ್ತದೆ. ಇದಲ್ಲದೇ, ನವರಾತ್ರಿಯ ಮೊದಲ ಮೂರು ದಿನಗಳು ತಾಯಿಯನ್ನು ಸಿಂಹವಾಹಿನಿಯಾದ ದುರ್ಗಾದೇವಿಯ ವಿವಿಧ ಅವತಾರಗಳ ರೂಪದಲ್ಲಿ ಪೂಜಿಸಲಾಗುತ್ತದೆ.
ನವರಾತ್ರಿಯ ಒಂಭತ್ತೂ ದಿನಗಳು ಮನೆ-ಮನೆಗಳಲ್ಲಿ ಬೊಂಬೆಗಳನ್ನು ಇಟ್ಟು ಪೂಜಿಸುವ ಪರಿಪಾಠ ಶತ-ಶತಮಾನಗಳಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಿದ್ದು ಅದೊಂದು ದೇವಲೋಕವೇ ಧರೆಗಿಳಿದು ಬರುವ, ನೋಡುಗರ ಮನಸೂರೆಗಳ್ಳುವ ಮಹತ್ವದ ಆಚರಣೆ. ಇಂತಹ ಪ್ರತಿ ಮನೆಗಳಿಗೂ ಪುಟ್ಟ-ಪುಟ್ಟ ಮಕ್ಕಳು ಭೇಟಿ ನೀಡಿ ಬೊಂಬೆಗಳನ್ನು ನೋಡಿ ಸಂಭ್ರಮಿಸುವುದನ್ನು ನೋಡಲು ಎರಡು ಕಣ್ಣುಗಳು ಸಾಲವು. ಒಂಭತ್ತು ವರ್ಷಕ್ಕಿಂತ ಕಿರಿಯ ಹೆಣ್ಣುಮಕ್ಕಳನ್ನು ತಾಯಿಯ ಪ್ರತಿರೂಪವೆಂದೇ ಭಾವಿಸಿ, ಸತ್ಕರಿಸಿ, ಆಶೀರ್ವಾದ ಪಡೆಯುವ ಪದ್ಧತಿ ಇದರ ಒಂದು ಪ್ರಮುಖ ಆಚರಣೆ. ಇದು ಹೆಚ್ಚಾಗಿ ದಕ್ಷಿಣಭಾರತದಲ್ಲಿ ಆಚರಣೆಯಲ್ಲಿರುವ ಪದ್ಧತಿಯಾಗಿದ್ದು ಇಂದಿಗೂ ಅನೇಕ ಕುಟುಂಬಗಳು ಇದನ್ನು ವಂಶಪಾರಂಪರ್ಯವಾಗಿ ಆಚರಿಸುತ್ತಾ ಬರುತ್ತಿದ್ದು, ಕೆಲವೆಡೆ ಸ್ಪರ್ಧೆಗಳೂ ನಡೆದು ಬಹುಮಾನಗಳನ್ನೂ ನೀಡಲಾಗುತ್ತದೆ. ಪುಟ್ಟ-ಪುಟ್ಟ ಮಕ್ಕಳು ಬೊಂಬೆಗಳನ್ನು ನೋಡಲು ಮನೆಗೆ ಬಂದಾಗ ಅವರಿಗೆ ಬೊಂಬೆ-ಬಾಗಿನವೆಂದು ಅನೇಕ ಬಗೆಯ ರುಚಿಯಾದ ತಿಂಡಿಗಳನ್ನು ನೀಡಿ ಸತ್ಕರಿಸಲಾಗುತ್ತದೆ.
ದಕ್ಷಿಣ ಭಾರತದಲ್ಲಿ, ಅದರಲ್ಲೂ, ಮೈಸೂರಿನಲ್ಲಿ ಅತ್ಯಂತ ಶ್ರದ್ಧಾಭಕ್ತಿಗಳಿಂದಲೂ ಹಾಗೂ ಅತ್ಯಂತ ವೈಭವಯುತವಾಗಿಯೂ ಆಚರಿಸುವ ನವರಾತ್ರಿ ಅಥವಾ ದಸರೆಯನ್ನು ಹಾಗೂ ವಿಜಯದಶಮಿಯಂದು ನಡೆಯುವ ದಸರಾ ಮೆರವಣಿಗೆಯ ಸೊಬಗನ್ನು ವರ್ಣಿಸಲು ಪದಗಳು ಸಾಲವು. ದೇಶ-ವಿದೇಶಗಳಿಂದ ಈ ಸುಂದರ ಮೆರವಣಿಗೆಯನ್ನು ನೋಡಿ ಆನಂದಿಸಲು ಕೋಟ್ಯಂತರ ಮಂದಿ ಸೇರುತ್ತಾರೆ. ಜಗನ್ಮಾತೆಯ ಮುಖ್ಯ ಅಷ್ಟಾದಶ ಶಕ್ತಿಪೀಠಗಳು ಹಾಗೂ ಇತರ ಶಕ್ತಿಪೀಠಗಳಲ್ಲಿ ನವರಾತ್ರಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
Dasara countdown starts worshipping goddess Durga will bring peace prosperity
ಇದನ್ನೂ ಓದಿ: ಆಹಾ ದಸರಾ! ಗಜಪಡೆಗೆ ಅರಮನೆಯಲ್ಲಿ ಅದ್ಧೂರಿ ಸ್ವಾಗತ
ಇದನ್ನೂ ಓದಿ: ಅಕ್ಟೋಬರ್ 4: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್























Discussion about this post