ಜೈಪುರ: ವೈಯಕ್ತಿಕ ಗುರಿಸಾಧನೆಗಿಂತಲೂ ತಂಡಕ್ಕಾಗಿ ಆಡುವಂತಹ, ಸಂಘಟಿತವಾಗಿ ಹೋರಾಡುವಂಥ ಸಂಸ್ಕೃತಿಯನ್ನು ಟೀಂ ಇಂಡಿಯಾದ ಹೊಸ ಕೋಚ್ ರಾಹುಲ್ ದ್ರಾವಿಡ್ ಅವರು ಹುಟ್ಟು ಹಾಕಲಿದ್ದಾರೆ ಎಂದು ಭಾರತ ಟ್ವೆಂಟಿ-20 ಕ್ರಿಕೆಟ್ ತಂಡದ ಉಪನಾಯಕ ಕೆ.ಎಲ್. ರಾಹುಲ್ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಟ್ವೆಂಟಿ-20 ಸರಣಿಯ ಪೂರ್ವಭಾವಿಯಾಗಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ-ಎ ತಂಡದಲ್ಲಿ ದ್ರಾವಿಡ್ ಜೊತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.
ರಾಹುಲ್ ದ್ರಾವಿಡ್ ಅವರು ಭಾರತ-ಎ ತಂಡದ ಕೋಚ್ ಆಗಿದ್ದಾಗ ತಂಡದ ಪರ ಆಟವಾಡಿದ್ದೇನೆ. ಅವರು ತಂಡದಲ್ಲಿ ಸಾಂಘಿಕ ವಾತಾವರಣ ನಿರ್ಮಿಸುತ್ತಾರೆ. ಕ್ರಿಕೆಟ್ ಆಟಗಾರರಾಗಿ ನಮ್ಮನ್ನು ಅತ್ಯುತ್ತಮವಾಗಿ ಪ್ರದರ್ಶನ ನೀಡುವಂತೆ ಸಿದ್ಧಗೊಳಿಸಲು ಯತ್ನಿಸುತ್ತಾರೆ ಎಂದು ರಾಹುಲ್ ಹೇಳಿದ್ದಾರೆ.
ಆಟಗಾರನೊಬ್ಬ ವೈಯಕ್ತಿಕವಾಗಿ ಒಂದು ಗುರಿ ಸಾಧಿಸುವುದಕ್ಕಿಂತಲೂ ತಂಡಕ್ಕಾಗಿ ಆಡುವುದು ಬಹು ಮುಖ್ಯ ಎಂಬುದು ಅವರ ಧೋರಣೆ. ಸಾಂಘಿಕ ಹೋರಾಟದ ವಾತಾವರಣವನ್ನು ತಂಡದಲ್ಲಿ ನಿರ್ಮಿಸಬೇಕೆಂಬುದು ಅವರ ಉದ್ದೇಶ. ಟೀಂ ಇಂಡಿಯಾ ಯಶಸ್ಸಿನತ್ತ ಸಾಗುವಂತೆ ಮಾಡಲು ಯೋಜನೆ ರೂಪಿಸುವ ನಿಟ್ಟಿನಲ್ಲಿ ಅವರು ಕಾರ್ಯಪ್ರವೃತ್ತರಾಗಲಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯ ಇಂದು (ಬುಧವಾರ) ರಾತ್ರಿ 7 ಗಂಟೆಗೆ ಜೈಪುರದಲ್ಲಿ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಪಂದ್ಯವು ನೇರ ಪ್ರಸಾರವಾಗಲಿದೆ.
ಇನ್ನಷ್ಟು ಸುದ್ದಿಗಳು…
Cricket: ಟೀಕಾಕಾರರಿಗೆ ಮುಟ್ಟಿನೋಡಿಕೊಳ್ಳುವಂತೆ ತಟ್ಟಿದ ಡೇವಿಡ್ ವಾರ್ನರ್ ಪತ್ನಿ ಕ್ಯಾಂಡಿಸ್
Discussion about this post