ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಬುಧವಾರ ರಾತ್ರಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಡೇರಿಲ್ ಮಿಷೆಲ್ ಅವರ ಅಬ್ಬರದ ಅರ್ಧಶತಕದ ಹಾಗೂ ನೀಶಮ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡವು 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ಫೈನಲ್ಗೆ ಲಗ್ಗೆ ಇರಿಸಿದೆ.
ಆರಂಭಿಕ ಆಘಾತಕ್ಕೊಳಗಾಗಿದ್ದ ನ್ಯೂಜಿಲೆಂಡ್ ತಂಡಕ್ಕೆ ಅರ್ಧಶತಕದ ಅಮೂಲ್ಯ ಕೊಡುಗೆ ನೀಡಿದ ಡೇರಿಲ್ ಮಿಷೆಲ್ ಕೇವಲ 48 ಎಸೆತಗಳಲ್ಲಿ 73 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಒಂದು ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸಿಗಿಳಿದ ನೀಶಮ್ ಕೇವಲ 11 ಎಸೆತಗಳಲ್ಲಿ 27 ರನ್ ಗಳಿಸುವ ಮೂಲಕ ನೆರವಾದರು.
ನಾಳೆ ನಡೆಯಲಿರುವ ಮತ್ತೊಂದು ಸೆಮಿಫೈನಲ್ನಲ್ಲಿ ಪಾಕಿಸ್ತಾನ ತಂಡವು ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದ್ದು, ಅದರಲ್ಲಿ ಗೆದ್ದವರು ಭಾನುವಾರ ಫೈನಲ್ನಲ್ಲಿ ನ್ಯೂಜಿಲೆಂಡನ್ನು ಎದುರಿಸಲಿದ್ದಾರೆ.
ಇಂಗ್ಲೆಂಡ್ನಿಂದ ಸ್ಪರ್ಧಾತ್ಮಕ ಮೊತ್ತ
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಇಂಗ್ಲೆಂಡ್ ತಂಡವು ಮೊಯೀನ್ ಅಲಿ ಅವರ ಆಕರ್ಷಕ ಅರ್ಧಶತಕ (51 ರನ್, 37 ಎಸೆತ) ಹಾಗೂ ಡೇವಿಡ್ ಮಲನ್ ಅವರ 41 ರನ್ (30 ಎಸೆತ) ನೆರವಿನಿಂದ 4 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿತು. ಆ ಮೂಲಕ ನ್ಯೂಜಿಲೆಂಡ್ ಗೆಲುವಿಗೆ 167 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ಇದನ್ನೂ ಓದಿ: ವಿಶ್ವಕಪ್ನಿಂದ ಟೀಂ ಇಂಡಿಯಾ ಔಟ್: ನಿರ್ಗಮಿತ ಕೋಚ್ ರವಿ ಶಾಸ್ತ್ರಿ ಕೊಟ್ಟ ಕಾರಣಗಳೇನು?
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದಿದ್ದರೂ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಜೋಸ್ ಬಟ್ಲರ್ ಹಾಗೂ ಜಾನಿ ಬೈರ್ಸ್ಟೋ 5.1 ಓವರ್ಗಳಲ್ಲಿ ಮೊದಲ ವಿಕೆಟ್ಗೆ 37 ರನ್ ಅಡಿಪಾಯ ಹಾಕಿಕೊಟ್ಟರು. ಇವರಿಬ್ಬರು ಔಟಾದ ಬಳಿಕ ಮೊಯೀನ್ ಹಾಗೂ ಮಲನ್ ನ್ಯೂಜಿಲೆಂಡ್ ಬೌಲರ್ಗಳ ಲೆಕ್ಕಾಚಾರ ತಲೆಕೆಳಗಾಗಿಸಿದರು.
ನ್ಯೂಜಿಲೆಂಡ್ ಪರ ಟ್ರೆಂಟ್ ಬೋಲ್ಟ್ 40 ರನ್ ನೀಡಿ ತುಸು ದುಬಾರಿಯಾದರು.
ನ್ಯೂಜಿಲೆಂಡ್ಗೆ ಆರಂಭಿಕ ಆಘಾತ; ಅಬ್ಬರಿಸಿದ ನೀಶಮ್, ಮಿಷೆಲ್
ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ಗೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡದ ಮೊತ್ತ 4 ರನ್ ಆಗಿದ್ದಾಗ ಮೊದಲ ಓವರ್ನಲ್ಲೇ ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ಕೇವಲ 4 ರನ್ ಗಳಿಸಿ ಔಟ್ ಆಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಮೂರನೇ ಓವರ್ನಲ್ಲಿ ತಂಡದ ಮೊತ್ತ 14 ರನ್ ಆಗಿದ್ದಾಗ ನಾಯಕ ಕೇನ್ ವಿಲಿಯಮ್ಸನ್ 5 ರನ್ ಗಳಿಸಿ ಔಟಾದರು. ತಂಡವು ಸಂಕಷ್ಟದಲ್ಲಿದ್ದಾಗ ಆಸರೆಯಾದದ್ದು ಡೇರಿಲ್ ಮಿಷೆಲ್ ಮತ್ತು ಡೆವೊನ್ ಕನ್ವೊಯ್. ಇವರಿಬ್ಬರೂ ಮೂರನೇ ವಿಕೆಟ್ಗೆ 82 ರನ್ಗಳ ಅಮೋಘ ಜತೆಯಾಟ ನೀಡಿದರು. ಕನ್ವೊಯ್ 38 ಎಸೆತಗಳಲ್ಲಿ 46 ರನ್ ಗಳಿಸಿ ಔಟಾದರು.
ಇದನ್ನೂ ಓದಿ: ವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಹೈದರಾಬಾದ್ ವ್ಯಕ್ತಿಯನ್ನು ಬಂಧಿಸಿದ ಮುಂಬೈ ಸೈಬರ್ ಪೋಲೀಸರು
ಡೇರಿಲ್ ಮಿಷೆಲ್ (73 ರನ್, 48 ಎಸೆತ) ಅರ್ಧಶತಕ ದಾಖಲಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರೆ, ಕೊನೆ ಹಂತದಲ್ಲಿ ಬ್ಯಾಟಿಂಗ್ಗೆ ಬಂದ ನೀಶಮ್ ಅಬ್ಬರದ ಬ್ಯಾಟಿಂಗ್ನಿಂದಾಗಿ ನ್ಯೂಜಿಲೆಂಡ್ ಗೆಲುವನ್ನು ಖಚಿತಪಡಿಸಿಕೊಂಡಿತು.
Discussion about this post