ಢಾಕಾ: ಏಷ್ಯಾ ಹಾಕಿ ಚಾಂಪಿಯನ್ಷಿಪ್ ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 3–1 ಗೋಲುಗಳಿಂದ ಮಣಿಸಿದೆ. ಈ ಮೂಲಕ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಿದೆ.
ಇದರೊಂದಿಗೆ, ಭಾರತ ತಂಡವು ಏಷ್ಯಾ ಹಾಕಿ ಚಾಂಪಿಯನ್ಷಿಪ್ ಟೂರ್ನಿಯಲ್ಲಿ ಸತತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದಂತಾಗಿದೆ. ಮೊದಲ ಪಂದ್ಯವನ್ನು ಕೊರಿಯಾ ಜತೆ ಆಡಿದ್ದು, ಡ್ರಾ ಮಾಡಿಕೊಂಡಿತ್ತು. ಎರಡನೇ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು.
ಉಪನಾಯಕ ಹರ್ಮನ್ಪ್ರೀತ್ ಸಿಂಗ್ ಅವರು 8ನೇ ನಿಮಿಷ ಮತ್ತು 53ನೇ ನಿಮಿಷದಲ್ಲಿ ಎರಡು ಪೆನಾಲ್ಟಿ ಕಾರ್ನರ್ಗಳನ್ನು ಗೋಲುಗಳಾಗಿ ಪರಿವರ್ತಿಸಿದರು. ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. 42ನೇ ನಿಮಿಷದಲ್ಲಿ ಆಕಾಶದೀಪ್ ಸಿಂಗ್ ಕೂಡ ಗೋಲು ಬಾರಿಸಿದರು. ಪಾಕಿಸ್ತಾನ ಪರ ಜುನೈದ್ ಮಂಜೂರ್ 45ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಇದನ್ನೂ ಓದಿ: ದಕ್ಷಿಣ ಆಫ್ರಿಕಾದಲ್ಲಿ ವಿಶೇಷವಾದದ್ದನ್ನು ಸಾಧಿಸೋಣ: ಟೀಂ ಇಂಡಿಯಾ ಆಟಗಾರರಿಗೆ ವಿರಾಟ್ ಕೊಹ್ಲಿ ಕರೆ
ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದು ದಾಖಲೆ ಬರೆದಿದ್ದ ಭಾರತ ತಂಡವು ಅದೇ ಹುಮ್ಮಸ್ಸಿನೊಂದಿಗೆ ಏಷ್ಯಾ ಹಾಕಿ ಚಾಂಪಿಯನ್ಷಿಪ್ ಟೂರ್ನಿಯಲ್ಲಿ ಮುಂದಡಿಯಿಡುತ್ತಿದ್ದು, ಪ್ರಶಸ್ತಿಯತ್ತ ಕಣ್ಣಿಟ್ಟಿದೆ.
ಕಳೆದ ಬಾರಿ ಏಷ್ಯಾ ಹಾಕಿ ಚಾಂಪಿಯನ್ಷಿಪ್ ಟೂರ್ನಿ ಮಸ್ಕತ್ನಲ್ಲಿ ನಡೆದಿತ್ತು. ಫೈನಲ್ ಪಂದ್ಯವು ಮಳೆಯಿಂದಾಗಿ ರದ್ದಾಗಿದ್ದು, ಭಾರತ ಮತ್ತು ಪಾಕಿಸ್ತಾ ಕಪ್ ಹಂಚಿಕೊಂಡಿದ್ದವು.
Discussion about this post