ಕಾನ್ಪುರ: ಗ್ರೀನ್ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ–ನ್ಯೂಜಿಲೆಂಡ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಪ್ರವಾಸಿ ತಂಡವು ಉತ್ತಮ ಆರಂಭ ಪಡೆದಿದೆ.
ಎರಡನೇ ದಿನದಾಟದ ಅಂತ್ಯದ ವೇಳೆಗೆ ನ್ಯೂಜಿಲೆಂಡ್ ವಿಕೆಟ್ ನಷ್ಟವಿಲ್ಲದೆ 129 ರನ್ ಗಳಿಸಿದೆ. ವಿಲ್ ಯಂಗ್ 75 ಹಾಗೂ ಟಾಮ್ ಲಾಥಮ್ 50 ರನ್ ಗಳಿಸಿ ಆಟವಾಡುತ್ತಿದ್ದು, ಭಾರತದ ಬೌಲರ್ಗಳನ್ನು ಕಾಡುತ್ತಿದ್ದಾರೆ. ನ್ಯೂಜಿಲೆಂಡ್ ತಂಡವು ಭಾರತಕ್ಕಿಂತ ಇನ್ನೂ 216 ರನ್ ಹಿಂದಿದೆ.
ಟಾಸ್ ಸೋತು ಫೀಲ್ಡಿಂಗ್ ಮಾಡಿದ್ದ ನ್ಯೂಜಿಲೆಂಡ್ ಭಾರತ ತಂಡವನ್ನು 345 ರನ್ಗಳಿಗೆ ಆಲೌಟ್ ಮಾಡಿತ್ತು. ಎರಡನೇ ದಿನದಾಟದ ಭೋಜನ ವಿರಾಮದ ಬಳಿಕ ಬ್ಯಾಟಿಂಗ್ಗೆ ಬಂದ ನ್ಯೂಜಿಲೆಂಡ್ ಆರಂಭಿಕರು ಟೀಂ ಇಂಡಿಯಾ ಬೌಲರ್ಗಳನ್ನು ಕಾಡಿದರು. ನ್ಯೂಜಿಲೆಂಡ್ ತಂಡದ ಆರಂಭಿಕ ಜತೆಯಾಟ ಮುರಿಯಲು ನಾಯಕ ರಹಾನೆ ಅವರ ಯಾವ ತಂತ್ರವೂ ಫಲಿಸಲಿಲ್ಲ.
ಇದನ್ನೂ ಓದಿ: IND vs NZ Test: ಪಾದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸಿ ಗಂಗೂಲಿ, ಸೆಹ್ವಾಗ್, ರೋಹಿತ್ ಸಾಲಿಗೆ ಸೇರಿದ ಶ್ರೇಯಸ್ ಅಯ್ಯರ್
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು ಮೊದಲ ದಿನದಾಟದ ಕೊನೆಯಲ್ಲಿ 4 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿತ್ತು. ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜ ಅರ್ಧಶತಕಗಳೊಂದಿಗೆ ಕ್ರೀಸ್ನಲ್ಲಿದ್ದರು. ಉಭಯ ಆಟಗಾರರು ತಂಡವು ಬೃಹತ್ ಮೊತ್ತ ದಾಖಲಿಸಲು ಕಾರಣರಾಗಬಹುದು ಎಂದೇ ಭಾವಿಸಲಾಗಿತ್ತು. ಆದರೆ, ಎರಡನೇ ದಿನದಾಟದ ಆರಂಭದಲ್ಲಿ ನ್ಯೂಜಿಲೆಂಡ್ ಬೌಲರ್ಗಳ ಸಂಘಟಿತ ದಾಳಿ ಮುಂದೆ ಟೀಂ ಇಂಡಿಯಾ ಬ್ಯಾಟರ್ಗಳ ಲೆಕ್ಕಾಚಾರ ತಲೆಕೆಳಗಾಯಿತು. ಪರಿಣಾಮವಾಗಿ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ 345 ರನ್ ಗಳಿಸಲಷ್ಟೇ ಶಕ್ತವಾಯಿತು.
ಅಯ್ಯರ್ ಹೊರತುಪಡಿಸಿ ಭಾರತ ಪರ ರವೀಂದ್ರ ಜಡೇಜಾ (50), ಶುಭಮನ್ ಗಿಲ್ (52) ಹಾಗೂ ಆರ್.ಅಶ್ವಿನ್ (38) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ನ್ಯೂಜಿಲೆಂಡ್ ಪರ ಸೌಥಿ 5, ಜೆಮಿಸನ್ 3, ಅಜಾಜ್ ಪಟೇಲ್ 2 ವಿಕೆಟ್ ಕಬಳಿಸಿದ್ದಾರೆ.
Discussion about this post