ದುಬೈ: ಐಪಿಎಲ್ ಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಒಂಭತ್ತನೇ ಬಾರಿ ಫೈನಲ್ ಪ್ರವೇಶಿಸಿರುವ ಎಂ.ಎಸ್.ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವೀಗ ನಾಲ್ಕನೇ ಬಾರಿ ಟ್ರೋಫಿ ಜಯಿಸಲು ಕಾತರದಿಂದಿದೆ.
ಕಳೆದ ವರ್ಷದ ಯುಎಇಯಲ್ಲಿ ನಡೆದಿದ್ದ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ತಂಡವು ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿತ್ತು. ಆದರೆ ಈ ಬಾರಿ ಗಮನಾರ್ಹ ಪ್ರದರ್ಶನ ನೀಡುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿದೆ.
ಆರಂಭಿಕ ಆಟಗಾರ ಋತುರಾಜ್ ಗಾಯಕವಾಡ್ ಟೂರ್ನಿಯಲ್ಲಿ ಒಟ್ಟು 602 ರನ್ಗಳನ್ನು ಗಳಿಸಿದ್ದು, ಫಫ್ ಡುಪ್ಲೆಸಿ ಜೊತೆ ಇನಿಂಗ್ಸ್ ಆರಂಭಿಸುವ ಹೊಣೆಯನ್ನು ಈವರೆಗೆ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಡುಪ್ಲೆಸಿ ಕೂಡ 500ಕ್ಕೂ ಹೆಚ್ಚು ರನ್ಗಳನ್ನು ಕಲೆಹಾಕಿದ್ದಾರೆ. ಆಲ್ರೌಂಡರ್ ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್ ಮತ್ತು ವಿಂಡೀಸ್ ಆಟಗಾರ ಡ್ವೆನ್ ಬ್ರಾವೊ ಅವರೂ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.
ಅಂತಿಮ ಹಂತದಲ್ಲಿ ಎಡವುತ್ತಿರುವ ಕೆಕೆಆರ್
ಫೈನಲ್ನಲ್ಲಿ ಚೆನ್ನೈಗೆ ಎದುರಾಳಿಯಾಗಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಗೆಲುವಿನ ಹಂತದಲ್ಲಿ ಎಡವುತ್ತಿರುವುದು ಮತ್ತೆ ಮತ್ತೆ ಕಂಡುಬರುತ್ತಿದೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಸುಲಭ ಜಯ ಸಾಧಿಸಲಿದ್ದ ತಂಡವು ಕೊನೆಯ ಹಂತದಲ್ಲಿ ಕಳಪೆ ಆಟವಾಡಿ ಗೆಲುವಿಗೆ ಪ್ರಾಯಾಸಪಡುವಂತಾಗಿತ್ತು. ಕ್ವಾಲಿಫೈಯರ್ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯವೂ ಕೊನೇ ಕ್ಷಣದಲ್ಲಿ ನಾಟಕೀಯ ತಿರುವು ಪಡೆದಿತ್ತು. ಕೋಲ್ಕತ್ತ ತಂಡದ ಈ ವೀಕ್ನೆಸ್ನ ಲಾಭ ಪಡೆಯುವಲ್ಲಿ ಯಶಸ್ವಿಯಾದರೆ ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿ ಮುಡಿಗೇರಿಸುವಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಕ್ರಿಕೆಟ್ ವಿಶ್ಲೇಷಕರು.
ಡೆಲ್ಲಿ ವಿರುದ್ಧ ಕೆಕೆಆರ್ಗೆ ಪ್ರಾಯಾಸದ ಗೆಲುವು
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಕೋಲ್ಕತ್ತ ತಂಡಕ್ಕೆ ವೆಂಕಟೇಶ್ ಅಯ್ಯರ್ (55) ಹಾಗೂ ಶುಭಮನ್ ಗಿಲ್ (46) ಮೊದಲ ವಿಕೆಟ್ಗೆ 96 ರನ್ಗಳ ಜೊತೆಯಾಟ ಒದಗಿಸುವ ಮೂಲಕ ತಂಡವನ್ನು ಸುಲಭ ಗೆಲುವಿನತ್ತ ಮುನ್ನಡೆಸಿದ್ದರು. ಆದರೆ ಬಳಿಕ ಡೆಲ್ಲಿ ಬೌಲರ್ಗಳ ದಾಳಿಗೆ ದಿಢೀರ್ ಕುಸಿತ ಕಂಡ ಕೋಲ್ಕತ್ತ ತಂಡವು ಕೆಲವೇ ಕ್ಷಣಗಳಲ್ಲಿ ಮತ್ತೆ 5 ವಿಕೆಟ್ಗಳನ್ನು ಕಳೆದುಕೊಂಡಿತ್ತು. ಕೊನೆಯ ಓವರ್ನಲ್ಲಿ ರೋಚಕ ಜಯ ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿತ್ತು. ಆ ಮೂಲಕ ಚೊಚ್ಚಲ ಕಪ್ ಗೆಲ್ಲುವ ಡೆಲ್ಲಿ ಕನಸು ಕನಸಾಗಿಯೇ ಉಳಿಯಿತು.
ಇವುಗಳನ್ನೂ ಓದಿ…:
ಆರ್ಸಿಬಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವ ಅಂತ್ಯ: ಏನಂದರು ಕಿಚ್ಚ ಸುದೀಪ್?
Kabaddi: ಅಂತರರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಚಿನ್ನದ ಸಾಧನೆ ಮಾಡಿದ ಬಾಲಕಿಗೆ ಗ್ರಾಮಸ್ಥರ ಅದ್ಧೂರಿ ಸ್ವಾಗತ
IPL 2021: ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲ ಅದ್ಭುತ ಆಟಗಾರ ರಿಷಭ್ ಪಂತ್: ಶೇನ್ ವ್ಯಾಟ್ಸನ್
Discussion about this post