ಮುಂಬೈ: ದಕ್ಷಿಣ ಆಫ್ರಿಕಾದಲ್ಲಿ ಈ ಬಾರಿ ವಿಶೇಷವಾದದ್ದನ್ನು ಸಾಧಿಸೋಣ ಎಂದು ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಹ ಆಟಗಾರರಿಗೆ ಕರೆ ನೀಡಿದ್ದಾರೆ.
ಮೂರು ಟೆಸ್ಟ್ ಪಂದ್ಯಗಳ ಸರಣಿ ಆಡಲು ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ತಂಡದ ಆಟಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದೇಶಗಳಲ್ಲಿ ಇತ್ತೀಚೆಗೆ ಮಾಡಿರುವ ಗಮನಾರ್ಹ ಸಾಧನೆಯನ್ನು ಆಫ್ರಿಕಾದಲ್ಲಿಯೂ ಮುಂದುವರಿಸಲು ಯತ್ನಿಸೋಣ. ನಾವೆಲ್ಲ ಅನುಭವದ ವಿಚಾರದಲ್ಲಿ ಮಾಗಿದ್ದೇವೆ. ತಂಡದಲ್ಲಿ ನಂಬಿಕೆ ಹಾಗೂ ಆತ್ಮವಿಶ್ವಾಸವಿದೆ. ಕಠಿಣ ಸಂದರ್ಭಗಳಲ್ಲಿ ಗೆಲ್ಲುವ ಮೂಲಕ ವಿಶೇಷ ಸಾಧನೆ ಮಾಡಬೇಕಿದೆ’ ಎಂದರು.
ದಕ್ಷಿಣ ಆಫ್ರಿಕಾದಲ್ಲಿ ನಾವು ಈವರೆಗೆ ಸರಣಿ ಗೆಲುವು ಸಾಧಿಸಿಲ್ಲ. ಹೀಗಾಗಿ ನಾವೆಲ್ಲ ಆ ಸಾಧನೆ ಮಾಡಲು ಉತ್ಸುಕರಾಗಿದ್ದೇವೆ. ಆ ಮೂಲಕ ಯಾವುದೇ ದೇಶದಲ್ಲಿ ಸರಣಿ ಗೆಲ್ಲುವ ಸಾಮರ್ಥ್ಯ ಹೊಂದಿದ್ದೇವೆ ಎಂಬ ಮನೋಭಾವ ನಮ್ಮಲ್ಲಿ ಜಾಗೃತವಾಗುವಂತೆ ಮಾಡಬೇಕಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಟೆಸ್ಟ್ ಸರಣಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದ ಟೀಂ ಇಂಡಿಯಾ
‘ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಪಂದ್ಯ ಗೆಲ್ಲುವುದಷ್ಟೇ ನಮ್ಮ ಗುರಿಯಾಗಿರಬಾರದು. ನಮ್ಮ ಗರಿಷ್ಠ ಸಾಧನೆ ಮಾಡುವತ್ತ ಚಿತ್ತ ನೆಟ್ಟಿರಬೇಕು’ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಭಾರತ ತಂಡ ಇತಿಹಾಸ ನಿರ್ಮಾಣ ಮಾಡಿದೆ. ಇಂಗ್ಲೆಂಡ್ನಲ್ಲಿ ಸರಣಿಯಲ್ಲಿ 2–1 ಮುನ್ನಡೆ ಕಾಯ್ದುಕೊಂಡು ಸರಣಿ ಗೆಲುವಿನ ತವಕದಲ್ಲಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕದ ಕಾರಣ ಸರಣಿ ಅರ್ಧದಲ್ಲೇ ಮೊಟಕುಗೊಂಡಿತ್ತು. ಉಳಿದಿರುವ ಒಂದು ಟೆಸ್ಟ್ ಪಂದ್ಯ ಮುಂದಿನ ವರ್ಷ ನಡೆಯಲಿದೆ.
ಭಾರತವು ದಕ್ಷಿಣ ಆಫ್ರಿಕಾದಲ್ಲಿ ಈವರೆಗೆ 20 ಟೆಸ್ಟ್ ಪಂದ್ಯಗಳನ್ನಾಡಿದ್ದು, ಕೇವಲ ಮೂರರಲ್ಲಿ ಮಾತ್ರ ಗೆಲುವು ಸಾಧಿಸಿದೆ. 2018ರಲ್ಲಿ ಕಠಿಣ ಸ್ಪರ್ಧೆ ಒಡ್ಡಿದ್ದರೂ 1–2ರಿಂದ ಸರಣಿ ಸೋಲನುಭವಿಸಿದೆ.
ಇತ್ತೀಚೆಗೆ ಭಾರತದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಯನ್ನು 1–0 ಅಂತರದಿಂದ ಗೆಲ್ಲುವ ಮೂಲಕ ಟೀಂ ಇಂಡಿಯಾ ಹುಮ್ಮಸ್ಸಿನಲ್ಲಿದೆ. ದಕ್ಷಿಣ ಆಫ್ರಿಕಾದಲ್ಲಿ ಡಿಸೆಂಬರ್ 26ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.
ಇದನ್ನೂ ಓದಿ: ನನ್ನ ಮತ್ತು ರೋಹಿತ್ ಶರ್ಮಾ ನಡುವೆ ಯಾವುದೇ ಮನಸ್ತಾಪ ಇಲ್ಲ: ವಿರಾಟ್ ಕೊಹ್ಲಿ
Discussion about this post