ಬೆಂಗಳೂರು: ತವರಿನಲ್ಲೇ ನಡೆಯಲಿರುವ ನ್ಯೂಜಿಲೆಂಡ್ ವಿರದ್ಧದ ಸರಣಿಗೆ ಭಾರತ ತಂಡಕ್ಕೆ ಹಂಗಾಮಿ ತರಬೇತುದಾರರಾಗಿ ರಾಹುಲ್ ದ್ರಾವಿಡ್ ಆಯ್ಕೆಯಾಗುವ ಸಂಭವವಿದೆ. ಬಿಸಿಸಿಐ ಸದ್ಯದಲ್ಲೇ ಈ ಆಹ್ವಾನದೊಂದಿಗೆ ರಾಹುಲ್ ದ್ರಾವಿಡ್‌ರನ್ನು ಸಂಪರ್ಕಿಸುವ ಸಾಧ್ಯತೆಯಿದೆ.
T20 ವಿಶ್ವಕಪ್ ನಂತರ ರವಿ ಶಾಸ್ತ್ರಿ ಮತ್ತು ಬಹುತೇಕ ಸಹಾಯಕ ಸಿಬ್ಬಂದಿ ನಿವೃತ್ತರಾಗಲಿದ್ದು ಪೂರ್ಣಪ್ರಮಾಣದ ವೃತ್ತಿಪರ ತರಬೇತುದಾರನನ್ನು ನಿಯುಕ್ತಿಗೊಳಿಸಲು ಹೆಚ್ಚಿನ ಕಾಲಾವಕಾಶ ಬೇಕಾಗಬಹುದು. ಆದ್ದರಿಂದ, ಅಲ್ಲಿಯವರೆಗೆ ತಂಡದ ತರಬೇತುದಾರನಾಗಿ ಅನುಭವಿಯೊಬ್ಬರು ಕಾರ್ಯನಿರ್ವಹಿಸಬೇಕಾದ ಅವಶ್ಯಕತೆಯನ್ನು ಮನಗಂಡ ಬಿಸಿಸಿಐ ರಾಹುಲ್ ದ್ರಾವಿಡ್‌ರನ್ನು ಈ ಹುದ್ದೆಗೆ ಆರಿಸುವ ಸಂಭವವಿದೆ.
ಆಸ್ಟ್ರೇಲಿಯಾದ ಕೆಲ ತರಬೇತುದಾರರು ಈ ಜವಾಬ್ದಾರಿಯನ್ನು ಹೊರುವ ಆಸಕ್ತಿ ವ್ಯಕ್ತಪಡಿಸಿದ್ದರೂ ಬಿಸಿಸಿಐ ಮಾತ್ರ ಭಾರತೀಯನೊಬ್ಬನನ್ನೇ ಹಂಗಾಮಿ ತರಬೇತುದಾರನಾಗಿ ನಿಯುಕ್ತಿಗೊಳಿಸುವ ಒಲವು ಹೊಂದಿದೆಯೆಂದು ತಿಳಿದುಬಂದಿದೆ. ದ್ರಾವಿಡ್‌ರನ್ನೇ ಪೂರ್ಣಪ್ರಮಾಣದ ತರಬೇತುದಾರರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕೆಂದು ಬಿಸಿಸಿಐ ಬಯಸಿದ್ದರೂ ಹೆಚ್ಚಿನ ಪ್ರಯಾಣ ಇಷ್ಟಪಡದ ದ್ರಾವಿಡ್ ಇದಕ್ಕೆ ನಿರಾಕರಿಸಿದ್ದಾರೆನ್ನಲಾಗೆದೆ. ಇದಾದ ನಂತರ ಇನ್ನೂ ಕೆಲವು ತರಬೇತುದಾರರನ್ನು ಸಂಪರ್ಕಿಸಿದ್ದರೂ ಇನ್ನೂ ಯಾವುದೇ ಪ್ರತಿಕ್ರಿಯೆಗಳು ಲಭ್ಯವಾಗಿಲ್ಲವೆನ್ನಲಾಗಿದೆ.
ಹುದ್ದೆಗೆ ಅತ್ಯಂತ ಸೂಕ್ತವೆನಿಸುವ ಅಭ್ಯರ್ಥಿಯೊಬ್ಬರು ಮೊದಲು ಹುದ್ದೆಗೆ ಅರ್ಜಿ ಹಾಕಿಕೊಳ್ಳಬೇಕೆಂದು ನಾವು ಬಯಸಿದ್ದೆವು ಎಂದ ಬಿಸಿಸಿಐ ಅಧಿಕಾರಿಯೊಬ್ಬರು ಇದೇ ಕಾರಣಕ್ಕೆ ಬಹಿರಂಗವಾಗಿ ಅರ್ಜಿಗಳನ್ನು ಆಹ್ವಾನಿಸಲಿಲ್ಲವೆಂದು ತಿಳಿಸಿದರು. ಅರ್ಜಿಗಳು ಬಂದು ಅಭ್ಯರ್ಥಿಗಳು ಸೂಕ್ತರಲ್ಲವೆಂದೆನಿಸಿದರೆ ಅದು ಇಬ್ಬರಿಗೂ ಇರಿಸು-ಮುರಿಸು ಉಂಟು ಮಾಡುವ ಸಾಧ್ಯತೆಯಿತ್ತೆಂದು ಅವರು ತಿಳಿಸಿದರು.
ರವಿಶಾಸ್ತ್ರಿಯವರನ್ನೇ ನ್ಯೂಜಿಲೆಂಡ್ ಸರಣಿಯವರೆಗೂ ಮುಂದುವರೆಯುವಂತೆ ಕೋರುವ ಆಲೋಚನೆಯಿತ್ತಾದರೂ ಮನಸ್ಸು ಬದಲಿಸಿದ ಬಿಸಿಸಿಐ ದ್ರಾವಿಡ್ ರವರು ಭಾರತದ ಎರಡನೇ ಹಂತದ ತಂಡಕ್ಕೆ ಶ್ರೀಲಂಕಾದಲ್ಲಿ ಕೋಚ್ ಆಗಿದ್ದ ಕಾರಣ ಅವರನ್ನೇ ಹುದ್ದೆಗೆ ತರಲು ಆಲೋಚಿಸುತ್ತಿದೆ. T20 ವಿಶ್ವಕಪ್ ಪಂದ್ಯಗಳು ಮುಗಿದ ತಕ್ಷಣವೇ ಭಾರತವು ನ್ಯೂಜಿಲೆಂಡ್ ವಿರುದ್ಧ 2 ಟೆಸ್ಟ್ ಪಂದ್ಯಗಳು ಹಾಗೂ 3 T20 ಪಂದ್ಯಗಳನ್ನಾಡಬೇಕಾಗಿದೆ.
ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್ ಶ್ರೀಧರ್ ರವರ ಅವಧಿ T20 ವಿಶ್ವಕಪ್ ನಂತರ ಮುಗಿಯಲಿದ್ದು, ತಂಡದ ವಿದೇಶಿ ತರಬೇತುದಾರ ನಿಕ್ ವೆಬ್ ಸಹ T20 ವಿಶ್ವಕಪ್ ಪಂದ್ಯಾವಳಿಗಳ ನಂತರ ವಿದಾಯ ಹೇಳಲಿದ್ದಾರೆ.
BCCI plans to appoint Rahul Dravid as interim coach for team India
ಇದನ್ನೂ ಓದಿ: ಕ್ರಿಕೆಟ್ ನಷ್ಟೇ ಜಾವಲಿನ್ ಎಸೆತ ಜನಪ್ರಿಯವಾಗಲಿದೆ : ಕೇಂದ್ರ ಕ್ರೀಡಾ ಸಚಿವ
ಇದನ್ನೂ ಓದಿ: ಚಿನ್ನದ ಕುವರನಿಗೆ ಚಿನ್ನದ ಪಾಸ್ ಕೊಟ್ಟ ಕರುನಾಡಿನ ಕೆಎಸ್ ಆರ್ ಟಿಸಿ
Discussion about this post