Chanakya Neeti: ಚಾಣಕ್ಯ. ರಾಜಕೀಯ ವಿವೇಕ, ರಾಜತಾಂತ್ರಿಕ ನಿಪುಣತೆ ಹೊಂದಿದ್ದ ಚಾಣಕ್ಯರು, ಓರ್ವ ಸಾಮಾನ್ಯ ಹುಡುಗ ಚಂದ್ರನನ್ನು ಚಂದ್ರಗುಪ್ತ ಮೌರ್ಯ ಮಾಡಿ, ಮೌರ್ಯ ಸಾಮ್ರಾಜ್ಯದ ದೊರೆಯಾಗುವಂತೆ ಮಾಡಿದ್ದರು. ಇಂಥ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ, ಜೀವನಕ್ಕೆ ಮುಖ್ಯವಾದ ಸಂಗತಿಗಳ ಬಗ್ಗೆ ವಿವರಿಸಿದ್ದಾರೆ. (Chanakya)
ಎಂಥ ಜಾಗದಲ್ಲಿ ಜೀವಿಸಬೇಕು. ಎಂಥವರ ಸಹವಾಸ ಮಾಡಬೇಕು. ಯಾವ ರೀತಿ ಆರ್ಥಿಕ ಪರಿಸ್ಥಿತಿ ಬದಲಾಯಿಸಿಕೊಳ್ಳಬೇಕು. ಮದುವೆಯಾಗುವಾಗ, ವರ ಅಥವಾ ವಧುವಿನಲ್ಲಿ ಯಾವ ಗುಣಗಳನ್ನು ನೋಡಿಕೊಳ್ಳಬೇಕು. ಮೂರ್ಖರೊಂದಿಗೆ ಯಾವ ರೀತಿ ಇರಬೇಕು. ಹೀಗೆ ಜೀವನಕ್ಕೆ ಬೇಕಾದ ಎಷ್ಟೋ ಸಂಗತಿಗಳ ಬಗ್ಗೆ ಚಾಣಕ್ಯರು, ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ತಂದೆ ತಾಯಿ ಹೇಗಿರಬೇಕು. ಎಂಥ ತಂದೆ ತಾಯಿ ಮಕ್ಕಳಿಗೆ ಶತ್ರುಗಳಾಗುತ್ತಾರೆ ಅನ್ನೋ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ.
ತಂದೆ ತಾಯಿಯೆಂದರೆ ದೇವರಿಗೆ ಸಮ ಅಂತಾ ಭಾರತೀಯ ಸಂಸ್ಕೃತಿ ಸಾರಿ ಹೇಳುತ್ತದೆ. 9 ತಿಂಗಳು ಹೊತ್ತು ಹೆತ್ತು, ಸಾಕಿ ಬೆಳೆಸುವ ಅಮ್ಮ ಒಂದೆಡೆಯಾದರೆ, ತನ್ನ ಮಕ್ಕಳ ಬೇಕು ಬೇಡಗಳನ್ನ ನಿರ್ಧರಿಸಿ, ಅವರ ಉತ್ತಮ ಭವಿಷ್ಯ ರೂಪಿಸುವಲ್ಲಿ ತನ್ನ ಇಷ್ಟ ಕಷ್ಟಗಳನ್ನು ಮರೆಯುವವನೇ ಅಪ್ಪ. ಆದರೆ ಚಾಣಕ್ಯರು ಕೆಲ ಕೆಲಸಗಳನ್ನು ಮಾಡುವ ಅಪ್ಪ ಅಮ್ಮಂದಿರುವ ಮಕ್ಕಳಿಗೆ ಶತ್ರುವಿದ್ದಂತೆ ಎಂದು ಹೇಳಿದ್ದಾರೆ. ಹಾಗಾದ್ರೆ ಚಾಣಕ್ಯರ ಪ್ರಕಾರ ಯಾವ ತಂದೆ ತಾಯಿ ಮಕ್ಕಳಿಗೆ ಶತ್ರುವಿದ್ದಂತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಯಾವ ತಂದೆ ತಾಯಿ, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದಿಲ್ಲವೋ, ಮಕ್ಕಳಿಗೆ ಸದ್ಬುದ್ಧಿ ಹೇಳಿಕೊಡುವುದಿಲ್ಲವೋ, ಮಕ್ಕಳನ್ನು ಅತೀಯಾಗಿ ಮುದ್ದಿಸಿ, ಅವರು ಎಲ್ಲಿ ಹೋದರೂ ಹಠಮಾರಿ ಸ್ವಭಾವದವರಂತೆ ವರ್ತಿಸಲು ಕಾರಣರಾಗುತ್ತಾರೋ, ಆ ತಂದೆ ತಾಯಿಯೇ ಮಕ್ಕಳಿಗೆ ಶತ್ರುಗಳಿದ್ದಂತೆ ಅಂತಾ ಚಾಣಕ್ಯರು ಹೇಳುತ್ತಾರೆ. ಚಿಕ್ಕ ಮಕ್ಕಳೆಂದರೆ ಖಾಲಿ ಪುಸ್ತಕವಿದ್ದಂತೆ. ತಂದೆ ತಾಯಿಯಾದವರು ಆ ಪುಸ್ತಕದಲ್ಲಿ ಉತ್ತಮ ವಿಷಯಗಳನ್ನು ಬರೆಯಬೇಕು. ಸದ್ಗುಣಗಳನ್ನು ತುಂಬಬೇಕು.
ಅದನ್ನು ಬಿಟ್ಟು ಮಕ್ಕಳು ಹೇಳಿದ ಹಾಗೆ ಕೇಳುವುದು, ಅತೀಯಾಗಿ ಪ್ರೀತಿಸುವುದು. ತಪ್ಪು ಮಾಡಿದರೂ ಬುದ್ಧಿ ಹೇಳದೇ, ಸುಮ್ಮನಿರುವುದೆಲ್ಲ ಮಾಡಿದರೆ, ಮಕ್ಕಳು ತಾವು ಮಾಡಿದ್ದೇ ಸರಿ ಅನ್ನೋ ನಿರ್ಧಾರಕ್ಕೆ ಬರುತ್ತಾರೆ. ನಂತರ ನೀವು ಹಾಗೆಲ್ಲ ಮಾಡುವುದು ತಪ್ಪು ಎಂದು ಬುದ್ಧಿ ಹೇಳಿದರೂ, ಅವರು ನಿಮ್ಮ ಮಾತನ್ನು ಕೇಳುವುದಿಲ್ಲ. ಹಾಗಾಗಿ ಮಕ್ಕಳು ಚಿಕ್ಕವರಿರುವಾಗಲೇ ಮಕ್ಕಳು ತಪ್ಪು ಮಾಡಿದರೆ ತಿದ್ದಿ ಬುದ್ಧಿ ಹೇಳಬೇಕು. ಒಳ್ಳೆ ಮಾತಿನಿಂದ ಕೇಳದಿದ್ದಲ್ಲಿ, ಬೈದಾದರೂ ಬುದ್ಧಿ ಹೇಳಬೇಕು. ಆ ಮಕ್ಕಳು ಸಮಾಜದಲ್ಲಿ ಓರ್ವ ಬುದ್ಧಿವಂತ, ವಿದ್ಯಾವಂತ, ಗುಣವಂತ ಮಕ್ಕಳಾಗಬೇಕು. ಸಮಾಜಕ್ಕೆ ಮಾದರಿ ಮಕ್ಕಳಾಗಬೇಕು ಎಂದು ಹೇಳುತ್ತಾರೆ ಚಾಣಕ್‌ಯರು.
ಇಷ್ಟೇ ಅಲ್ಲದೇ, ಮಗುವಿಗೆ 4 ವರ್ಷವಾಗುವ ಹೊತ್ತಿಗೆ ಆತನಿಗೆ ವಿದ್ಯಾಭ್ಯಾಸ ಕೊಡಿಸಲು ಶುರು ಮಾಡಬೇಕು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕಲಿಸಿದರೆ, ಆತ ತನ್ನ ಭವಿಷ್ಯವನ್ನು ತಾನು ರೂಪಿಸಿಕೊಳ್ಳುವಲ್ಲಿ ಸಫಲನಾಗುತ್ತಾನೆ. ನಾಲ್ಕು ಜನರ ಮಧ್ಯೆ ಮರ್ಯಾದೆ ಗಳಿಸಿ ಬದುಕುತ್ತಾನೆ. ಆದ್ರೆ ಅವಿದ್ಯಾವಂತನಾದ ಮಗು ಹಂಸಗಳ ಮಧ್ಯೆ ಬಕ ಪಕ್ಷಿ ಇದ್ದಂತೆ. ಅಂಥವನು ಅವಮಾನಕ್ಕೊಳಗಾಗುತ್ತಾನೆ. ಹಾಗಾಗಿ ತಂದೆ ತಾಯಿಯಾದವರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಬೇಕು.
ಇನ್ನು ಕೆಲ ತಂದೆ ತಾಯಿಯರು ತಮ್ಮ ಮಕ್ಕಳಿಗೆ ಶಾಲೆಗೆ ಸೇರಿಸುತ್ತಾರೆ. ಆದ್ರೂ ಕೂಡ ಆ ಮಗು ವಿದ್ಯೆಯಲ್ಲಿ ಮುಂದಿರುವುದಿಲ್ಲ. ತಂದೆ ತಾಯಿ ಎಷ್ಟು ಬೈದು ಬುದ್ಧಿ ಹೇಳಿದರೂ, ಶಿಕ್ಷಿಸಿದರೂ ಮಗುವಿಗೆ ಶಿಕ್ಷಣ ಒದಗದಿದ್ದಲ್ಲಿ, ಅದು ತಂದೆ ತಾಯಿ ತಪ್ಪಾಗುವುದಿಲ್ಲ. ಆದರೆ ಅಂಥ ಮಕ್ಕಳಿಗೆ ಸದ್ಗುಣಗಳನ್ನಂತೂ ಕಲಿಸಲೇಬೇಕು. ವಿದ್ಯೆ ಇಲ್ಲದಿದ್ದರೂ, ಕಡೇ ಪಕ್ಷ ಸದ್ಗುಣಗಳಿಂದಾದರೂ ಆ ಮಗು ಉತ್ತಮವಾಗಿ ಬಾಳುವಂತಾಗಬಹುದು. ಆದರೆ ಮಕ್ಕಳಿಗೆ ಸದ್ಬುದ್ಧಿಯೂ ಕಲಿಸದೇ, ವಿದ್ಯೆಯೂ ನೀಡದೇ ಇರುವ ತಂದೆ ತಾಯಿಯೇ ಮಕ್ಕಳಿಗೆ ಶತ್ರು ಅಂತಾ ಚಾಣಕ್ಯರು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಒಂದು ಚಿಕ್ಕ ಕಥೆಯನ್ನ ನಾವಿಂದು ಹೇಳಲಿದ್ದೇವೆ.
ತಂದೆ ಇಲ್ಲದ ಓರ್ವ ಬಡ ಬಾಲಕ, ತಾಯಿಯೊಂದಿಗೆ ಓಂದು ಚಿಕ್ಕ ಗುಡಿಸಲಿನಲ್ಲಿ ವಾಸಿಸುತ್ತಿದ್ದ. ತಾಯಿ ಆ ಬಾಲಕನನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದಳು. ಆದ್ರೆ ಓದಿನಲ್ಲಿ ಆಸಕ್ತಿ ಇಲ್ಲದ ಬಾಲಕ, ಶಾಲೆ ಬಿಟ್ಟ. ಅಮ್ಮನೊಂದಿಗೆ ಕೂಲಿ ಕೆಲಸಕ್ಕೆ ಹೋಗಲು ಶುರು ಮಾಡಿದ. ಅಲ್ಲಿ ಕೆಲ ಬಾಲಕರ ಪರಿಚಯವಾಯಿತು. ಅವರೊಂದಿಗೆ ಗೆಳೆತನ ಮಾಡಿದ. ಆ ಬಾಲಕರು ಈತನಿಗೆ ಕಳ್ಳತನದ ಪಾಠ ಹೇಳಿಕೊಟ್ಟರು. ಕಳ್ಳತನವೆಂಬುದು ಕೆಟ್ಟದ್ದೆಂದು ಗೊತ್ತಿರದ ಬಾಲಕ, ಕಳ್ಳತನ ಮಾಡಲು ಕಲಿತ. ಒಮ್ಮೆ ಅಂಗಡಿಗೆ ಹೋದ ಬಾಲಕ, ಅಲ್ಲಿದ್ದ 10 ರೂಪಾಯಿ ಕಳ್ಳತನ ಮಾಡಿ ಮನೆಗೆ ಬಂದ. ತನ್ನ ತಾಯಿಯ ಬಳಿ ಬಂದು, ಅಮ್ಮಾ ಇಲ್ಲಿ ನೋಡು 10 ರೂಪಾಯಿ ಎಂದು ತೋರಿಸಿದ. ದುಡ್ಡು ನೋಡಿದ ತಾಯಿ ಖುಷಿಯಿಂದ ಹಿಗ್ಗಿದಳು. ಈ ದುಡ್ಡನ್ನ ಎಲ್ಲಿಂದ ತಂದೆ ಎಂದು ಕೇಳಿದಳು. ಆಗ ಆ ಬಾಲಕ ಇಲ್ಲೇ ಪಕ್ಕದ ಅಂಗಡಿಯಿಂದ ಕಳ್ಳತನ ಮಾಡಿದೆ ಎಂದು ಹೇಳಿದ.
ಈ ಮಾತನ್ನು ಕೇಳಿದ ತಾಯಿ, ಅದನ್ನ ವಿರೋಧಿಸುವುದನ್ನು ಬಿಟ್ಟು, ಅವನ ಕೆಲಸಕ್ಕೆ ಬೆನ್ನುತಟ್ಟಿದಳು. ಅಲ್ಲದೇ, ಕಳ್ಳತನವನ್ನು ಹೇಗೆ ಮಾಡಬೇಕೆಂದು ವಿವಿಧ ರೀತಿಯ ಉಪಾಯ ಹೇಳಿಕೊಟ್ಟಳು. ಕಳ್ಳತನ ಮಾಡಿ ಸಿಕ್ಕಿಹಾಕಿಕೊಳ್ಳದಿರಲು, ಸಿಕ್ಕಿಹಾಕಿಕೊಂಡರೂ, ಅದರಿಂದ ಹೇಗೆ ತಪ್ಪಿಸಿಕೊಂಡು ಬರಬೇಕು ಅನ್ನೋ ಬಗ್ಗೆಯೂ ಹೇಳಿದಳು. ಹೀಗೆ ಅಮ್ಮನ ಸಪೋರ್ಟ್ ಪಡೆದ ಮಗ, ದೊಡ್ಡವನಾಗಿ ದೊಡ್ಡ ಕಳ್ಳನಾದ. ಇದುವರೆಗೂ ಹಲವಾರು ಬಾರಿ ಕಳ್ಳತನ ಮಾಡಿದರೂ ಸಿಕ್ಕಿ ಹಾಕಿಕೊಂಡಿರಲಿಲ್ಲ. ಜೈಲಿಗೆ ಹೋಗಿರಲಿಲ್ಲ. ಹಾಗಾಾಗಿ ಲಾಠಿ ರುಚಿ ಕಂಡಿರಲಿಲ್ಲ. ಕೋರ್ಟ್ ಮೆಟ್ಟಿಲು ಹತ್ತಿರಲಿಲ್ಲ. ಅವಮಾನವೆಂದರೇನೆಂದು ಗೊತ್ತಿರಲಿಲ್ಲ.
ಹೀಗೆ ಕಳ್ಳತನ ಮಾಡಿ ಮಾಡಿ, ಮನೆ ಕಟ್ಟಿದ, ಅಮ್ಮನಿಗಾಗಿ ತನಗಾಗಿ ಚಿನ್ನಾಭರಣ, ಕಾರು ಎಲ್ಲವನ್ನೂ ಖರೀದಿಸಿದ. ಬಟ್ಟೆ, ಹೊಟೇಲ್ ಊಟ, ಕುಡಿತ ಎಲ್ಲವೂ ಅಭ್ಯಾಸವಾಗಿತ್ತು. ದೊಡ್ಡ ದರೋಡೆಕೋರನಾಗಿ ಬೆಳೆದ ಕಾರಣ, ಇವನಿಗಿಂತ ದೊಡ್ಡ ದೊಡ್ದ ದರೋಡೆಕೋರರು, ಮಾಡಬಾರದ್ದನ್ನೆಲ್ಲ ಮಾಡುವವರ ಪರಿಚಯವೂ ಆಯಿತು. ಕಲಿಯುಗದಲ್ಲಿ ಸುಳ್ಳು ಹೇಳುವವರಿಗೆ, ಕಳ್ಳರಿಗೆ ಬೆಲೆ ಅನ್ನೋ ಮಾತಿದೆ. ಅದರಂತೆ, ಇವನಿಗೂ ಅಲ್ಲಲ್ಲಿ ಸನ್ಮಾನವೂ ನಡೆಯುತ್ತಿತ್ತು.
ತಾಯಿ ಅದಾಗಲೇ ಕೂಲಿ ಕೆಲಸ ಬಿಟ್ಟು, ಮಗನ ಕಳ್ಳತನದ ದುಡ್ಡಿನಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದಳು. ಹೀಗಿರುವಾಗ ಅದೊಮ್ಮೆ ಮಗನಿಗೆ ದೊಡ್ಡ ಕಳ್ಳತನದ ಆಫರ್ ಬಂದಿತ್ತು. ಜೀವ ಪಣಕ್ಕಿಟ್ಟು ಕಳ್ಳತನ ಮಾಡಬೇಕಿತ್ತು. ಕಳ್ಳತನ ಕಷ್ಟವಾಗಿದ್ದರೂ, ಆ ಕಳ್ಳತನ ಮಾಡಿದರೆ, ಕೋಟಿ ಕೋಟಿ ರೂಪಾಯಿ ಬರುವುದಿತ್ತು. ಈ ಕೆಲಸ ಮಾಡಲು ತನಗೆ ಸ್ವಲ್ಪ ದಿನ ಸಮಯ ಬೇಕು. ಯೋಚನೆ ಮಾಡಿ, ಕೆಲಸ ಮಾಡಬೇಕೋ, ಬೇಡವೋ ಹೇಳುತ್ತೇನೆ ಎಂದು ಹೇಳಿ ಮನೆಗೆ ನಡೆದ.
ಮನೆಗೆ ಹೋಗಿ ತಾಯಿಗೆ ವಿಷಯ ತಿಳಿಸಿದ. ತುಂಬಾ ತೊಂದರೆ ಇರುವ ಕೆಲಸ. ಇಷ್ಟು ದೊಡ್ಡ ದರೋಡೆ ಯಾವತ್ತೂ ಮಾಡಿರಲಿಲ್ಲ. ಸ್ವಲ್ಪ ಯಾಮಾರಿದರೆ, ಜೀವ ಹೋಗಬಹುದು. ಅಥವಾ ನಾನು ಎಲ್ಲವನ್ನೂ ಕಳೆದುಕೊಂಡು ಜೈಲು ಸೇರಬಹುದು ಎಂದು ಹೇಳಿದ.
ತನ್ನ ಮಗನ ಜೀವಕ್ಕೆ ಅಪಾಯವಿದೆ, ಕಳ್ಳತನ ವಿಫಲವಾದರೆ ಮಗ ಜೀವನಪೂರ್ತಿ ಜೈಲಿನಲ್ಲಿ ಮುದ್ದೆ ಮುರಿಯಬೇಕಾಗುತ್ತದೆ ಎಂಬ ಸಂಗತಿ ಗೊತ್ತಿದ್ದರೂ, ಕೋಟಿ ಹಣದ ಆಸೆಗಾಗಿ ತಾಯಿ ಮಗನನ್ನು ಆ ಕಳ್ಳತನ ಮಾಡುವುದಕ್ಕೆ ಒತ್ತಾಯಿಸಿದಳು. ಮಗ ಕಳ್ಳತನ ಮಾಡಲು ಹೋದ, ಸಿಕ್ಕಿಬಿದ್ದ. ಜೈಲು ಪಾಲಾದ. ಕೋರ್ಟಿನಲ್ಲಿ ಆತನ ತಪ್ಪಿಗೆ ಶಿಕ್ಷೆ ವಿಧಿಸುವ ಸಮಯ ಬಂದಿತ್ತು. ತಾಯಿ ತನ್ನ ಮಗನನ್ನು ಶಿಕ್ಷೆಯಿಂದ ಪಾರು ಮಾಡುವ ಯಾವ ಪ್ರಯತ್ನವನ್ನೂ ಮಾಡಿರಲಿಲ್ಲ. ಹಾಗಾಗಿ ಮಗನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಮೊದಲ ಬಾರಿ ಆತನಿಗೆ ತಾನು ಇಷ್ಟು ದಿನ ಮಾಡಿದ್ದು ತಪ್ಪು ಎಂಬುದರ ಅರಿವಾಗಿತ್ತು.
ಕೊನೆಯದಾಗಿ ತನ್ನ ತಾಯಿಗೆ ಏನೋ ಹೇಳಬೇಕು, ಅದಕ್ಕೆ ಅವಕಾಶ ಕೊಡಿ ಎಂದು ಜಡ್ಜ್ ಬಳಿ ಕೇಳಿಕೊಂಡ. ಅದಕ್ಕೆ ಒಪ್ಪಿಗೆ ಸಿಕ್ಕಿತು. ತಾಯಿ ಮಗನ ಬಳಿ ಬಂದಳು. ತಾಯಿಯನ್ನು ತಬ್ಬಿಕೊಂಡ ಮಗ, ತಕ್ಷಣ ಆಕೆಯ ಜೀವ ಹೋಗುವ ರೀತಿ ಹೊಡೆದು ಬಿಟ್ಟ. ಯಾಕೆ ಹೀಗೆ ಮಾಡಿದೆ ಎಂದು ಕೇಳಿದಾಗ, ನಾನು ಚಿಕ್ಕವನಿದ್ದಾಗ, ಮೊದಲ ಬಾರಿ 10 ರೂಪಾಯಿ ಕಳ್ಳತನ ಮಾಡಿ ಬಂದಿದ್ದೆ. ಆಗ ಇದು ತಪ್ಪು, ಹೀಗೆಲ್ಲ ಬೇರೆಯವರ ವಸ್ತುವನ್ನು ಕದಿಯಬಾರದು ಎಂದು ನನ್ನ ತಾಯಿ ನನಗೆ ಬುದ್ಧಿ ಹೇಳಿದ್ದಿದ್ದರೆ, ಇಂದು ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಿಯತ್ತಾಗಿ ದುಡಿದು ತಿನ್ನುತ್ತಿದ್ದೆ. ಆದರೆ ನನ್ನ ತಾಯಿ ನನಗೆ ಬುದ್ಧಿ ಹೇಳದೇ, ಕಳ್ಳತನ ಮಾಡಲು ಬೆಂಬಲಿಸಿದಳು. ಈ ಕೆಟ್ಟ ಬೆಂಬಲವೇ ಇಂದು ನನ್ನನ್ನು ಜೈಲಿಗಟ್ಟಿದೆ ಎಂದು ಹೇಳುತ್ತಾನೆ.
ಈ ಕಥೆಯ ಅರ್ಥವಿಷ್ಟೇ, ತಂದೆ ತಾಯಿಯಾದವರು ಮಕ್ಕಳಿಗೆ ಚಿಕ್ಕಂದಿನಲ್ಲಿ ಯಾವ ಪಾಠವನ್ನು ಹೇಳಿಕೊಡುತ್ತಾರೋ, ಮಕ್ಕಳು ಆ ಪಾಠವನ್ನೇ ರೂಢಿಸಿಕೊಂಡು ಬೆಳೆಯುತ್ತಾರೆ. ಸದ್ಗುಣ ಹೇಳಿಕೊಟ್ಟರೆ, ಸದ್ಗುಣ ಕಲಿಯುತ್ತಾರೆ. ಮಾಡಿದ್ದೆಲ್ಲವೂ ಸರಿ ಎಂದು, ಮಾಡಿದ ತಪ್ಪಿನ ಬಗ್ಗೆ ಬೈದು ಬುದ್ಧಿ ಹೇಳದಿದ್ದರೆ, ತಾವು ಮಾಡಿದ್ದೇ ಸರಿ ಎನ್ನುವ ಭಾವನೆಯಲ್ಲಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ.
Discussion about this post