ಕಾಬೂಲ್: ತಾಲಿಬಾನಿಗಳು ಅಫ್ಘಾನ್ ದೇಶದಲ್ಲಿ ನಡೆಸುತ್ತಿರುವ ಕರ್ಮಕಾಂಡದ ವಿರುದ್ಧ ಅಫ್ಘನ್ ಮಹಿಳೆಯರು ಕಾಬೂಲ್ ನಲ್ಲಿ ಹೋರಾಟ ನಡೆಸಿದ್ದರು. ಇದೇ ವಿವರಗಳನ್ನು ಶೂಟ್ ಮಾಡಿದ್ದ ಇಬ್ಬರು ಪತ್ರಕರ್ತರನ್ನು ತಾಲಿಬಾನಿಗಳು ಬಂಧಿಸಿ ಚಿತ್ರಹಿಂಸೆ ನೀಡಿದ್ದಾರೆ.
ಘಟನೆಯನ್ನು ಖಂಡಿಸಿ ಅಮೇರಿಕಾ ಪತ್ರಿಕೆಗಳು ವರದಿ ಮಾಡಿದೆ. ಅಮೇರಿಕದ ಪತ್ರಕರ್ತ ಮಾರ್ಕಮ್ ಯೂಮ್ (MARKAM YUM) ಎಂಬುವರು ಈ ಫೋಟೋ ಟ್ವೀಟ್ ಮಾಡಿದ್ದು, ನೇಮಕ್ ನಕ್ದಿ ಮತ್ತು ತಕೀ ದರ್ಯಾಬಿ ಎಂಬ ಅಫ್ಘಾನ್ ದೇಶದ ಪತ್ರಕರ್ತರನ್ನು ಬಂಧಿಸಿ ಚಿತ್ರಹಿಂಸೆ ನೀಡಿರುವ ಬಗ್ಗೆ ಖೇದ ವ್ಯಕ್ತಪಡಿಸಿದ್ದಾರೆ.
ಇದೇ ಮಂಗಳವಾರ ನಡೆದಿದ್ದ ಮಹಿಳೆಯರ ಪ್ರತಿಭಟನೆಯನ್ನು ವಿವಿಧ ಸುದ್ಧಿವಾಹಿನಿಗಳು ಪ್ರಸಾರ ಮಾಡಿದ್ದವು. ಇದೇ ಹಿನ್ನೇಲೆಯಲ್ಲಿ ಹಲವಾರು ಪತ್ರಕರ್ತರು, ಕ್ಯಾಮೆರಾ ಮೆನ್ ಗಳನ್ನು ಸಹ ಬಂಧಿಸಲಾಗಿತ್ತು.
ಕಾಬೂಲ್ ಸ್ಥಳೀಯ ಸುದ್ದಿ ವಾಹಿನಿ ತೋಲೊ ಟಿವಿಯವರು ತಮ್ಮ ಕ್ಯಾಮೆರಾಮನ್ ವಾಹಿದ್ ಅಹ್ಮದಿಯನ್ನು ಬಂಧಿಸಿರುವ ಬಗ್ಗೆ ಸುದ್ಧಿಯನ್ನು ಪ್ರಕಟಿಸಿದ್ದರು. ಅಮ್ನಿಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯು ಘಟನೆಯನ್ನು ಖಂಡಿಸಿದ್ದು, ಶಾಂತಿಯುತ ಪ್ರತಿಭಟನೆಯನ್ನು ವರದಿ ಮಾಡಿದ್ದಕ್ಕೆ ಪತ್ರಕರ್ತನ್ನು ಹಿಂಸಿಸಿರುವುದು ಕ್ರೂರ ನಡೆ ಎಂದು ಟೀಕಿಸಿದ್ದಾರೆ.
ಕಳೆದ ಮಂಗಳವಾರ ತಾಲಿಬಾನ್ ಮತ್ತು ಪಾಕಿ ಪಡೆಗಳು ಪಂಜ್ ಶೀರ್ ಮೇಲೆ ದಾಳಿ ನಡೆಸಿರುವ ಕ್ರಮವನ್ನು ಖಂಡಿಸಿ ನೂರಾರು ಮಹಿಳೆಯರು ಬೀದಿಯಲ್ಲಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದರು.
Discussion about this post